ಮುಂಬೈ: ದೇಶದ ಮುಂಚೂಣಿ ಡಿಜಿಟಲ್ ಹಾಗೂ ಟೆಲಿಕಾಂ ದೈತ್ಯ ‘ಜಿಯೋ ಪ್ಲಾಟ್ಫಾರ್ಮ್ಸ್ ಲಿಮಿಟೆಡ್’ (JPL) ಪ್ರಸಕ್ತ ಹಣಕಾಸು ವರ್ಷದ ತನ್ನ ಮೊದಲ ತ್ರೈಮಾಸಿಕದ ಆರ್ಥಿಕ ಫಲಿತಾಂಶಗಳನ್ನು ಅಧಿಕೃತವಾಗಿ ಪ್ರಕಟಿಸಿದೆ. ಹೊಸ ತಂತ್ರಜ್ಞಾನಗಳು ಹಾಗೂ ವಿಸ್ತರಿತ ಡಿಜಿಟಲ್ ಸೇವೆಗಳ ಬಲದೊಂದಿಗೆ ಕಂಪನಿಯು ವಾರ್ಷಿಕ ಆಧಾರದ ಮೇಲೆ ಬರೋಬ್ಬರಿ 12% ಒಟ್ಟು ಆದಾಯದ ಪ್ರಗತಿ ಸಾಧಿಸಿದ್ದು, ಒಟ್ಟು ಆದಾಯ 45,961 ಕೋಟಿ ರೂ.ಗೆ ತಲುಪಿದೆ.
ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಕಂಪನಿಯ ತೆರಿಗೆ ನಂತರದ ಲಾಭವು 9.2% ಹೆಚ್ಚಳ ಕಂಡಿದ್ದು, 7,764 ಕೋಟಿ ರೂ.ಗೆ ತಲುಪಿದೆ. ಫಿಕ್ಸೆಡ್ ಬ್ರಾಡ್ಬ್ಯಾಂಡ್ ಗ್ರಾಹಕರಿಗಾಗಿ ಪ್ರೊಮೋಷನಲ್ ಆಫರ್ಗಳನ್ನು ನೀಡಿದ್ದರೂ ಸಹ, ಅತ್ಯುತ್ತಮ ಗ್ರಾಹಕರ ಮಿಶ್ರಣದಿಂದಾಗಿ ಜಿಯೋದ ಪ್ರತಿ ಬಳಕೆದಾರರಿಂದ ಬರುವ ಸರಾಸರಿ ಆದಾಯ (ARPU) 215.6 ರೂ.ಗೆ ಸುಧಾರಿಸಿದೆ.
ಜಿಯೋ ಈ ತ್ರೈಮಾಸಿಕದಲ್ಲಿ ವರ್ಷದಿಂದ ವರ್ಷಕ್ಕೆ 15.1% ಪ್ರಗತಿಯೊಂದಿಗೆ 20,865 ರೂ. ಕೋಟಿಯಷ್ಟು ದಾಖಲೆಯ EBITDA ವರದಿ ಮಾಡಿದೆ. ಜೊತೆಗೆ ಕಂಪನಿಯ EBITDA ಮಾರ್ಜಿನ್ ಶೇ. 53.3 ರಷ್ಟಾಗುವ ಮೂಲಕ ಹೊಸ ಮೈಲಿಗಲ್ಲು ಸ್ಥಾಪಿಸಿದೆ. (5G ಆಸ್ತಿಗಳ ಬಂಡವಾಳೀಕರಣ ಹಾಗೂ ಸವಕಳಿ ವೆಚ್ಚಗಳು ಇದರ ಮೇಲೆ ಭಾಗಶಃ ಪರಿಣಾಮ ಬೀರಿವೆ).
53 ಕೋಟಿ ದಾಟಿದ ಒಟ್ಟು ಗ್ರಾಹಕರು:
ಜಿಯೋ ನೆಟ್ವರ್ಕ್ ತನ್ನ ಗ್ರಾಹಕರ ಸಂಖ್ಯೆಯನ್ನು ದಾಖಲೆ ಮಟ್ಟದಲ್ಲಿ ವಿಸ್ತರಿಸುತ್ತಾ ಸಾಗಿದೆ. ಈ ಒಂದೇ ತ್ರೈಮಾಸಿಕದಲ್ಲಿ ಜಿಯೋ ಕುಟುಂಬಕ್ಕೆ ಬರೋಬ್ಬರಿ 8.9 ಮಿಲಿಯನ್ (89 ಲಕ್ಷ) ಹೊಸ ಗ್ರಾಹಕರು ಸೇರ್ಪಡೆಯಾಗಿದ್ದಾರೆ. ಇದರೊಂದಿಗೆ ಜಿಯೋದ ಒಟ್ಟು ಸಕ್ರಿಯ ಗ್ರಾಹಕರ ಸಂಖ್ಯೆ 533 ಮಿಲಿಯನ್ (53.3 ಕೋಟಿ) ಗಡಿ ದಾಟಿದೆ. ಒಟ್ಟು ಗ್ರಾಹಕರಲ್ಲಿ ಬರೋಬ್ಬರಿ 285 ಮಿಲಿಯನ್ (28.5 ಕೋಟಿ) ಗ್ರಾಹಕರು ಜಿಯೋ 5G ಬಳಕೆದಾರರಾಗಿದ್ದಾರೆ. ಕಳೆದ 12 ತಿಂಗಳುಗಳಲ್ಲೇ 73 ಮಿಲಿಯನ್ಗಿಂತಲೂ ಹೆಚ್ಚು 5G ಗ್ರಾಹಕರನ್ನು ಹೊಂದುವ ಮೂಲಕ ಜಿಯೋ ಮಾರುಕಟ್ಟೆಯಲ್ಲಿ ತನ್ನ ಮುನ್ನಡೆಯನ್ನು ಕಾಯ್ದುಕೊಂಡಿದೆ. ಕಂಟೆಂಟ್, ಕ್ಲೌಡ್ ಕಂಪ್ಯೂಟಿಂಗ್, ಇಂಟರ್ನೆಟ್ ಆಫ್ ಥಿಂಗ್ಸ್ (IoT) ಮುಂತಾದ ಡಿಜಿಟಲ್ ಸೇವೆಗಳ ವ್ಯವಹಾರವು ವಾರ್ಷಿಕವಾಗಿ ಶೇ. 20 ರಷ್ಟು ಪ್ರಗತಿ ದಾಖಲಿಸಿದೆ.
ಇದನ್ನೂ ಓದಿ: ರೈಲ್ವೆ ಪ್ರಯಾಣಿಕರಿಗೆ ಭರ್ಜರಿ ಗುಡ್ ನ್ಯೂಸ್: ತತ್ಕಾಲ್ ಟಿಕೆಟ್ ಬುಕಿಂಗ್ ಇನ್ಮುಂದೆ ರಾಕೆಟ್ ವೇಗ, ಇಷ್ಟದ ಸೀಟ್ ಆಯ್ಕೆಗೂ ಅವಕಾಶ
‘ಡೀಪ್ ಟೆಕ್’ ಕ್ರಾಂತಿ ಹಾಗೂ ಐಪಿಒ (IPO) ಮುನ್ಸೂಚನೆ
ಜಿಯೋ ಪ್ಲಾಟ್ಫಾರ್ಮ್ಸ್ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕರಾದ ಆಕಾಶ್ ಅಂಬಾನಿ ಅವರು ಕಂಪನಿಯ ಭವಿಷ್ಯದ ದೃಢವಾದ ನಡೆಯನ್ನು ಬಿಚ್ಚಿಟ್ಟಿದ್ದಾರೆ. “ಜಿಯೋ ಇಂದು ಜಾಗತಿಕ ಮಟ್ಟದಲ್ಲಿ ಮನ್ನಣೆ ಪಡೆದ ಬಲವಾದ ಪೇಟೆಂಟ್ ಪೋರ್ಟ್ಫೋಲಿಯೊ ಹೊಂದಿರುವ ‘ಡೀಪ್ ಟೆಕ್’ (Deep Tech) ಕಂಪನಿಯಾಗಿ ಹೊರಹೊಮ್ಮಿದೆ. ಭಾರತದಲ್ಲಿ ಸಾರ್ವಜನಿಕವಾಗಿ ಲಿಸ್ಟೆಡ್ ಕಂಪನಿಯಾಗುವ (IPO) ನಮ್ಮ ಮುಂದಿನ ಹಂತದ ಪಯಣದಲ್ಲಿ, ನಾವು ತಂತ್ರಜ್ಞಾನದ ಮೇಲಿನ ಗಮನವನ್ನು ಇನ್ನಷ್ಟು ತೀವ್ರಗೊಳಿಸಲಿದ್ದೇವೆ. ಈ ಮೂಲಕ ಭಾರತದ ಪ್ರತಿಯೊಬ್ಬ ನಾಗರಿಕನಿಗೂ ಜಾಗತಿಕ ಮಟ್ಟದ ಡಿಜಿಟಲ್ ಸಂಪರ್ಕ ಹಾಗೂ ಸುಧಾರಿತ ಸೇವೆಗಳನ್ನು ತಲುಪಿಸುವುದು ನಮ್ಮ ಮುಖ್ಯ ಉದ್ದೇಶವಾಗಿದೆ.” ಎಂದು ಜಿಯೋ ಪ್ಲಾಟ್ಫಾರ್ಮ್ಸ್ ಎಂಡಿ ಆಕಾಶ್ ಅಂಬಾನಿ ಹೇಳಿದ್ದಾರೆ.
ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

