ಬೆಂಗಳೂರು: ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ (KPCC) ರಾಜ್ಯ ಕಚೇರಿಯ ಮುಂಭಾಗದಲ್ಲಿ ಬಿಜೆಪಿ ಪ್ರತಿಭಟನೆ ವೇಳೆ ಭಾರಿ ರಂಪಾಟ ನಡೆದಿದೆ. ಕಚೇರಿಯಂಗಳಕ್ಕೆ ನೇರವಾಗಿ ಆಗಮಿಸಿದ ದಾವಣಗೆರೆ ಜಿಲ್ಲೆಯ ಹರಿಹರ ಕ್ಷೇತ್ರದ ಬಿಜೆಪಿ ಶಾಸಕ ಬಿ.ಪಿ. ಹರೀಶ್ ಅವರ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಮೊಟ್ಟೆ ಎಸೆದು, ತೀವ್ರ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯ ಸರ್ಕಾರದ ವಿರುದ್ಧ ಕರಪತ್ರ ಹಂಚಿಕೆ ಹಾಗೂ ಕೆಪಿಸಿಸಿ ಕಚೇರಿ ಮುತ್ತಿಗೆಗೆ ಕರೆ ನೀಡಿದ್ದ ಬಿಜೆಪಿ ನಾಯಕರನ್ನು ಪೊಲೀಸರು ಮುನ್ನೆಚ್ಚರಿಕೆ ಕ್ರಮವಾಗಿ ಕಂಟೋನ್ಮೆಂಟ್ ವೃತ್ತದ ಬಳಿಯೇ ತಡೆದು ವಶಕ್ಕೆ ಪಡೆದಿದ್ದರು. ಆದರೆ, ಪ್ರತಿಭಟನೆ ನಡೆಯುತ್ತಿದ್ದ ನಿಖರ ಸ್ಥಳದ ಮಾಹಿತಿ ಇಲ್ಲದ ಶಾಸಕ ಬಿ.ಪಿ. ಹರೀಶ್ ಅವರು ನೇರವಾಗಿ ಕೆಪಿಸಿಸಿ ಕಚೇರಿಯ ಮುಂಭಾಗಕ್ಕೆ ಬಂದು ತಲುಪಿದ್ದರು. ಶಾಸಕರು ಕಾರಿನಿಂದ ಇಳಿಯುತ್ತಿದ್ದಂತೆಯೇ ಕಚೇರಿ ಆವರಣದಲ್ಲಿದ್ದ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಅವರ ವಿರುದ್ಧ ತಿರುಗಿಬಿದ್ದು ಧಿಕ್ಕಾರ ಕೂಗಲಾರಂಭಿಸಿದರು.
ಇದನ್ನೂ ಓದಿ: “ಮುಖ್ಯಮಂತ್ರಿಗಳೇ ನಮಗೆ ಸುರಂಗ ರಸ್ತೆ ಬೇಡ: ಲಾಲ್ಬಾಗ್ ಅನ್ನು ಇದ್ದ ಹಾಗೆಯೇ ಬಿಡಿ”
ಮಾತಿನ ಚಕಮಕಿ ಜೋರಾಗುತ್ತಿದ್ದಂತೆಯೇ ಕೆರಳಿದ ಕಾಂಗ್ರೆಸ್ ಕಾರ್ಯಕರ್ತರು ಶಾಸಕ ಬಿ.ಪಿ. ಹರೀಶ್ ಅವರತ್ತ ಮೊಟ್ಟೆ ಎಸೆದಿದ್ದಾರೆ. ಪರಿಸ್ಥಿತಿ ಕೈಮೀರುತ್ತಿದ್ದಂತೆಯೇ ತಕ್ಷಣವೇ ಸಕ್ರಿಯರಾದ ಭದ್ರತಾ ಸಿಬ್ಬಂದಿ ಹಾಗೂ ಪೊಲೀಸರು, ಶಾಸಕರನ್ನು ಕಾಂಗ್ರೆಸ್ ಪಡೆಗಳಿಂದ ರಕ್ಷಿಸಿ ಪಕ್ಕದ ರಸ್ತೆಗೆ ಕರೆದೊಯ್ದಿದ್ದಾರೆ. ಬಳಿಕ ತಮ್ಮ ಪೊಲೀಸ್ ಜೀಪ್ನಲ್ಲೇ ಅವರನ್ನು ಸುರಕ್ಷಿತವಾಗಿ ಬೇರೆಡೆಗೆ ರವಾನಿಸಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

