“ಮುಖ್ಯಮಂತ್ರಿಗಳೇ ನಮಗೆ ಸುರಂಗ ರಸ್ತೆ ಬೇಡ: ಲಾಲ್‌ಬಾಗ್ ಅನ್ನು ಇದ್ದ ಹಾಗೆಯೇ ಬಿಡಿ”

ಬೆಂಗಳೂರು: ಬೆಂಗಳೂರಿನ ಹೆಮ್ಮೆಯ ಸಂಕೇತವಾಗಿರುವ ಪಾರಂಪರಿಕ ಲಾಲಬಾಗ್ ಉದ್ಯಾನವನದ ಪರಿಸರಕ್ಕೆ ಮಾರಕವಾಗುವಂತಹ ‘ಅಸಂಶೋಧಿತ ಸುರಂಗ ರಸ್ತೆ’ (Unscientific Tunnel Road) ಹಾಗೂ ‘5 ಮಹಡಿಗಳ ಕಮರ್ಷಿಯಲ್ ಕಾಂಪ್ಲೆಕ್ಸ್’ ಯೋಜನೆಯನ್ನು ತಕ್ಷಣವೇ ಕೈಬಿಡುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಸಾರ್ವಜನಿಕರು ಹಾಗೂ ಲಾಲ್‌ಬಾಗ್‌ನ ವಾಕಿಂಗ್ ಪ್ರಿಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸಂಸದ ತೇಜಸ್ವಿ ಸೂರ್ಯ ಎಕ್ಸ್​​ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.

ಈ ಕುರಿತು ಸಾರ್ವಜನಿಕರು ಹಾಗೂ ಪರಿಸರ ಪ್ರೇಮಿಗಳು ಸರ್ಕಾರದ ವಿರುದ್ಧ ತಮ್ಮ ಪ್ರತಿರೋಧವನ್ನು ವ್ಯಕ್ತಪಡಿಸಿದ್ದು, ಲಾಲ್‌ಬಾಗ್‌ನ ನೈಸರ್ಗಿಕ ಸೌಂದರ್ಯಕ್ಕೆ ಧಕ್ಕೆ ತರದಂತೆ ಮನವಿ ಮಾಡಿದ್ದಾರೆ.

ಉದ್ದೇಶಿತ ಸುರಂಗ ರಸ್ತೆ ಯೋಜನೆಯು ಬೆಂಗಳೂರಿನ ಸಂಚಾರ ಸಮಸ್ಯೆಗೆ ಶಾಶ್ವತ ಪರಿಹಾರವಲ್ಲ ಹಾಗೂ ಇದು ನಗರದ ನೈಸರ್ಗಿಕ ಮೂಲಸೌಕರ್ಯಕ್ಕೆ ಭಾರಿ ಹಾನಿ ಉಂಟುಮಾಡಲಿದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ (IISc) ತಜ್ಞರೇ ಎಚ್ಚರಿಸಿದ್ದಾರೆ. ಐಐಎಸ್‌ಸಿ ಅಧ್ಯಯನ ವರದಿಗಳ ಪ್ರಕಾರ, ಈ ಯೋಜನೆಯು ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ಬದಲು ನೈಸರ್ಗಿಕ ಪರಿಸರಕ್ಕೆ ಮಾರಕವಾಗಲಿದೆ ಎಂದು ಉಲ್ಲೇಖಿಸಲಾಗಿದೆ.

ಇಲ್ಲಿದೆ ಎಕ್ಸ್​​​ ಪೋಸ್ಟ್​:

ಹೀಗಿದ್ದರೂ, ರಾಜ್ಯ ಕಾಂಗ್ರೆಸ್ ಸರ್ಕಾರವು ತಜ್ಞರ ಎಚ್ಚರಿಕೆ ಹಾಗೂ ಸಾರ್ವಜನಿಕರ ವಿರೋಧವನ್ನು ಲೆಕ್ಕಿಸದೆ ಯೋಜನೆಯನ್ನು ಮುಂದುವರಿಸಲು ಹಠ ಹಿಡಿಯುತ್ತಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ಇದನ್ನೂ ಓದಿ: ಶಿವಾಜಿನಗರದಲ್ಲಿ ಫುಟ್‌ಪಾತ್ ತೆರವು ವೇಳೆ ಹೈಡ್ರಾಮಾ: ಜಿಬಿಎ ಅಧಿಕಾರಿಗಳ ಮೇಲೆ ಪೆಪ್ಪರ್ ಸ್ಪ್ರೇ ದಾಳಿ

ಲಾಲ್‌ಬಾಗ್ ಅನ್ನು ಇದ್ದ ಹಾಗೆಯೇ ಬಿಡಿ

ಬೆಂಗಳೂರು ನಗರ ಈಗಾಗಲೇ ಅತಿಯಾದ ನಗರೀಕರಣ ಹಾಗೂ ಕಾಂಕ್ರೀಟೀಕರಣದಿಂದ ಬಳಲುತ್ತಿದ್ದು, ಇಂತಹ ಪರಿಸ್ಥಿತಿಯಲ್ಲಿ ನಗರದ ಕೊನೆಯ ಉಸಿರಾಟದ ತಾಣಗಳಲ್ಲಿ ಒಂದಾದ ಲಾಲ್‌ಬಾಗ್ ಅನ್ನು ಮತ್ತೊಂದು ನಿರ್ಮಾಣ ತಾಣವನ್ನಾಗಿ (Construction site) ಮಾರ್ಪಡಿಸಬೇಡಿ ಎಂದು ಸಿಎಂ ಡಿ ಕೆ ಶಿವಕುಮಾರ್ ಅವರಿಗೆ ನಾಗರಿಕರು ನೇರವಾಗಿ ಆಗ್ರಹಿಸಿದ್ದಾರೆ.

“ಜನರ ಧ್ವನಿ ಹಾಗೂ ತಜ್ಞರ ಅಭಿಪ್ರಾಯಕ್ಕೆ ಗೌರವ ನೀಡಿ, ಯಾವುದೇ ಕಾರಣಕ್ಕೂ ಲಾಲ್‌ಬಾಗ್‌ನ ಪಾರಂಪರಿಕ ಅಸ್ತಿತ್ವವನ್ನು ಹಾಳುಮಾಡಬೇಡಿ. ಲಾಲ್‌ಬಾಗ್ ಅನ್ನು ಇದ್ದಂತೆಯೇ ಬಿಡಿ” ಎಂದು ಸರ್ಕಾರವನ್ನು ಒತ್ತಾಯಿಸಲಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *