ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ವಿವಿಧ ಭಾಗಗಳಲ್ಲಿ ರಾಷ್ಟ್ರೀಯ ಭದ್ರತಾ ಪಡೆ (National Security Guard – NSG) ತಂಡವು ಜುಲೈ 22 ರಿಂದ ಜುಲೈ 25 ರವರೆಗೆ ಬೃಹತ್ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯ (Counter Terrorist Exercise) ತರಬೇತಿ ಹಾಗೂ ಮಹಾಸರದಿ ಕವಾಯತನ್ನು ನಡೆಸಲಿದೆ.
ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ಪೊಲೀಸರು ನಗರದಾದ್ಯಂತ ಬಿಗಿ ಭದ್ರತಾ ಮುನ್ನೆಚ್ಚರಿಕೆಗಳನ್ನು ವಹಿಸಿದ್ದಾರೆ.
ಸನ್ನದ್ಧತೆ ಪರಿಶೀಲನೆಗಾಗಿ ‘ಅಭ್ಯಾಸ ಕಾರ್ಯಾಚರಣೆ’
ಈ ಕಾರ್ಯಚರಣೆಯು ಯಾವುದೇ ನೈಜ ದಾಳಿಯಲ್ಲ, ಬದಲಾಗಿ ತುರ್ತು ಪರಿಸ್ಥಿತಿಗಳಲ್ಲಿ ಭದ್ರತಾ ಪಡೆಗಳ ಸನ್ನದ್ಧತೆಯನ್ನು (Preparedness) ಪರಿಶೀಲಿಸುವ ಉದ್ದೇಶದಿಂದ ನಡೆಸಲಾಗುತ್ತಿರುವ ಪೂರ್ವಾಭ್ಯಾಸವಾಗಿದೆ. ಮಂಗಳೂರಿನ ಆಯಕಟ್ಟಿನ ಹಾಗೂ ಪ್ರಮುಖ ಪ್ರದೇಶಗಳಲ್ಲಿ ಎನ್ಎಸ್ಜಿ ಪಡೆಗಳು ಈ ಕಾರ್ಯಾಚರಣೆ ಕೈಗೊಳ್ಳಲಿವೆ.
ಇದನ್ನೂ ಓದಿ: ಬನ್ನಡ್ಕದಲ್ಲಿ ಸರ್ವೀಸ್ ರಸ್ತೆಗೆ ಗ್ರೀನ್ ಸಿಗ್ನಲ್: ₹5.83 ಕೋಟಿ ಕಾಮಗಾರಿಗೆ NHAI ತಾತ್ವಿಕ ಒಪ್ಪಿಗೆ: ಸಂಸದ ಕ್ಯಾ. ಬ್ರಿಜೇಶ್ ಚೌಟ
ಸಾರ್ವಜನಿಕರಿಗೆ ಹಾಗೂ ಸಾರಿಗೆಗೆ ಜಿಲ್ಡಾಡಳಿತದ ಪ್ರಮುಖ ಸೂಚನೆಗಳು:
ಸಂಚಾರ ನಿಯಮ ಪಾಲನೆ: ಕಾರ್ಯಾಚರಣೆಯ ಅವಧಿಯಲ್ಲಿ ಭದ್ರತಾ ಸಿಬ್ಬಂದಿ ನೀಡುವ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಹಾಗೂ ಸಂಚಾರ ನಿಯಂತ್ರಣಕ್ಕೆ (Traffic Regulations) ಅಗತ್ಯ ಸಹಕಾರ ನೀಡಬೇಕು.
ವದಂತಿಗಳಿಗೆ ಕಿವಿಗೊಡಬೇಡಿ: ಸಾರ್ವಜನಿಕರು ಯಾವುದೇ ರೀತಿಯ ಸುಳ್ಳು ಸುದ್ದಿಗಳು ಅಥವಾ ವದಂತಿಗಳಿಗೆ (Rumours) ಕಿವಿಗೊಡಬಾರದು.
ಸಹಕಾರಕ್ಕೆ ಮನವಿ: ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯೊಂದಿಗೆ ಸಾರ್ವಜನಿಕರು ಸಂಪೂರ್ಣವಾಗಿ ಸಹಕರಿಸಬೇಕೆಂದು ಜಿಲ್ಲಾಧಿಕಾರಿ ಕಚೇರಿಯ ಪ್ರಕಟಣೆ ತಿಳಿಸಿದೆ.

