ಮಂಗಳೂರು: ರಾಷ್ಟ್ರೀಯ ಹೆದ್ದಾರಿ 169ರ ಸಾಣೂರು-ಬಿಕರ್ನಕಟ್ಟೆಯವರೆಗಿನ ಚತುಷ್ಪಥ ಕಾಮಗಾರಿ ಪ್ರಗತಿಯಲ್ಲಿದ್ದು, ಇದೀಗ ಬನ್ನಡ್ಕ ವ್ಯಾಪ್ತಿಯಲ್ಲಿ ಸರ್ವೀಸ್ ರಸ್ತೆ ನಿರ್ಮಾಣ ಸೇರಿದಂತೆ 5.83 ಕೋಟಿ ರೂ. ವೆಚ್ಚದ ಇತರ ಕಾಮಗಾರಿಗಳಿಗೆ ಹೆದ್ದಾರಿ ಪ್ರಾಧಿಕಾರವು ತಾತ್ವಿಕ ಅನುಮೋದನೆ ನೀಡಿದೆ ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ತಿಳಿಸಿದ್ದಾರೆ.
ಸ್ಥಳೀಯ ನಿವಾಸಿಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳ ಮನವಿಗೆ ಸ್ಪಂದಿಸಿ, ಬನ್ನಡ್ಕ ಪ್ರದೇಶದಲ್ಲಿ ಕೈಬಿಡಲಾಗಿದ್ದ ಸುಮಾರು 700 ಮೀಟರ್ ಉದ್ದದ ಸರ್ವೀಸ್ ರಸ್ತೆ, ಚರಂಡಿ ನಿರ್ಮಾಣ ಹಾಗೂ ಬಾಕ್ಸ್ ಕಲ್ವರ್ಟ್ಗಳ ಅಗಲೀಕರಣ ಕಾಮಗಾರಿಗಳನ್ನು ₹4.12 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿದೆ.
ಇದರೊಂದಿಗೆ, ವಾಮಂಜೂರು ಚರ್ಚ್, ಶಾಲೆ-ಕಾಲೇಜು ವಿದ್ಯಾರ್ಥಿಗಳು ಹಾಗೂ ಸುತ್ತಮುತ್ತಲಿನ ನಿವಾಸಿಗಳ ಸುರಕ್ಷಿತ ಸಂಚಾರವನ್ನು ಗಮನದಲ್ಲಿಟ್ಟುಕೊಂಡು, ₹1.70 ಕೋಟಿ ವೆಚ್ಚದಲ್ಲಿ ವಾಮಂಜೂರು ಜಂಕ್ಷನ್ ಸಮೀಪ ಆಧುನಿಕ ಪಾದಚಾರಿ ಮೇಲ್ಸೇತುವೆ (Foot Over Bridge) ನಿರ್ಮಿಸಲಾಗುವುದು.
ಇದನ್ನೂ ಓದಿ: ಎಳನೀರು ಭಾಗದ ಜನರ ಬಹುವರ್ಷಗಳ ಮೊಬೈಲ್ ನೆಟ್ವರ್ಕ್ ಕನಸು ನನಸು: ಟವರ್ ಉದ್ಘಾಟಿಸಿದ ಸಂಸದ ಬ್ರಿಜೇಶ್ ಚೌಟ
ಈ ಸಂಬಂಧ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಬೆಂಗಳೂರು ಪ್ರಾದೇಶಿಕ ಕಚೇರಿಯು ಚತುಷ್ಪಥ ರಸ್ತೆ ನಿರ್ಮಾಣದ ಗುತ್ತಿಗೆ ಸಂಸ್ಥೆಯಾದ ದಿಲೀಪ್ ಬಿಲ್ಡ್ಕಾನ್ಗೆ ಅಧಿಕೃತ ಪತ್ರ ರವಾನಿಸಿ, ಅಂತಿಮ ಅನುಮೋದನೆ (COS Order) ನೀಡಲು ಅಗತ್ಯವಾದ ಸವಿಸ್ತಾರ ಅಂದಾಜು ವೆಚ್ಚ ಹಾಗೂ ತಾಂತ್ರಿಕ ವಿನ್ಯಾಸದ ನಕ್ಷೆಗಳನ್ನು ಶೀಘ್ರ ಸಲ್ಲಿಸುವಂತೆ ನಿರ್ದೇಶಿಸಿದೆ.
ತಾಂತ್ರಿಕ ಪರಿಶೀಲನೆ ಪೂರ್ಣಗೊಂಡ ಕೂಡಲೇ ಕಾಮಗಾರಿ ಆರಂಭವಾಗಲಿದ್ದು, ಇದರಿಂದ ಬನ್ನಡ್ಕ ಹಾಗೂ ವಾಮಂಜೂರು ಭಾಗದಲ್ಲಿ ಬಹುಕಾಲದಿಂದ ಎದುರಾಗುತ್ತಿದ್ದ ಸಂಚಾರ ದಟ್ಟಣೆ ಮತ್ತು ಸುರಕ್ಷತಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ದೊರೆಯಲಿದೆ ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಎಲೆ ಚುಕ್ಕಿ ಸೇರಿದಂತೆ ಅಡಿಕೆ ರೋಗ ಬಾಧೆಗೆ ಶಾಶ್ವತ ಪರಿಹಾರಕ್ಕಾಗಿ ಸಂಸತ್ತಿನಲ್ಲಿ ಧ್ವನಿ ಎತ್ತಿದ ಸಂಸದ ಕ್ಯಾ.ಬ್ರಿಜೇಶ್ ಚೌಟ
ಬನ್ನಡ್ಕದಲ್ಲಿ ಸರ್ವೀಸ್ ರಸ್ತೆ ಇಲ್ಲದ ಕಾರಣ ನಿರಂತರವಾಗಿ ಅಪಘಾತಗಳು ಸಂಭವಿಸುತ್ತಿರುವ ಬಗ್ಗೆ ಸ್ಥಳೀಯರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ, ಶಾಸಕ ಉಮಾನಾಥ ಕೋಟ್ಯಾನ್ ಅವರೊಂದಿಗೆ ಸಂಸದ ಕ್ಯಾ. ಬ್ರಿಜೇಶ್ ಚೌಟ ಇತ್ತೀಚೆಗೆ ಸ್ಥಳ ಪರಿಶೀಲನೆ ನಡೆಸಿದ್ದರು. ಬಳಿಕ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಪತ್ರ ಬರೆದು ಸರ್ವೀಸ್ ರಸ್ತೆ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರು.
ಸಂಸದರ ಸೂಚನೆಯ ಮೇರೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಉಸ್ತುವಾರಿ ಸಂಸ್ಥೆಗೆ ಸವಿವರ ಅಂದಾಜು ವೆಚ್ಚದ ಪ್ರಸ್ತಾವನೆ ಸಲ್ಲಿಸುವಂತೆ ನಿರ್ದೇಶಿಸಿತ್ತು. ಅದರಂತೆ ಇದೀಗ ಬನ್ನಡ್ಕದಲ್ಲಿ ಸರ್ವೀಸ್ ರಸ್ತೆ ಹಾಗೂ ಸಂಬಂಧಿತ ಕಾಮಗಾರಿಗಳಿಗೆ ತಾತ್ವಿಕ ಅನುಮೋದನೆ ದೊರೆತಿದೆ.

