ನವದೆಹಲಿ: ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಹಾಗೂ ಮಲೆನಾಡು ಭಾಗದ ಅಡಿಕೆ ಬೆಳೆಗಾರರನ್ನು ತೀವ್ರವಾಗಿ ಕಾಡುತ್ತಿರುವ ಎಲೆ ಚುಕ್ಕಿ, ಹಳದಿ ಎಲೆ ಮತ್ತು ಕೊಳೆ ರೋಗಗಳಿಗೆ ಶಾಶ್ವತ ಹಾಗೂ ವೈಜ್ಞಾನಿಕ ಪರಿಹಾರ ಒದಗಿಸುವಂತೆ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಸಂಸತ್ತಿನಲ್ಲಿ ಒತ್ತಾಯಿಸಿದ್ದಾರೆ.
ಲೋಕಸಭೆ ಅಧಿವೇಶನದಲ್ಲಿ ಈ ಗಂಭೀರ ವಿಷಯವನ್ನು ಪ್ರಸ್ತಾಪಿಸಿದ ಅವರು, ಕರಾವಳಿ ಮತ್ತು ಮಲೆನಾಡು ಭಾಗದ ಅಡಿಕೆ ತೋಟಗಳು ಪುನರಾವರ್ತಿತವಾಗಿ ಕಾಣಿಸಿಕೊಳ್ಳುತ್ತಿರುವ ವಿವಿಧ ರೋಗಗಳಿಂದ ಭಾರೀ ಹಾನಿಗೊಳಗಾಗುತ್ತಿವೆ ಎಂದು ಹೇಳಿದರು.
ರೋಗ ನಿರ್ಣಯ, ತೋಟದ ನೈರ್ಮಲ್ಯ, ಪೋಷಕಾಂಶಗಳ ಸಮರ್ಪಕ ಪೂರೈಕೆ, ಸೂಕ್ತ ಒಳಚರಂಡಿ ವ್ಯವಸ್ಥೆ, ನಿರಂತರ ಮೇಲ್ವಿಚಾರಣೆ ಹಾಗೂ ತೀವ್ರವಾಗಿ ಬಾಧಿತಗೊಂಡ ತೋಟಗಳಲ್ಲಿ ಮರುನಾಟಿ (ರೀ-ಪ್ಲಾಂಟೇಷನ್) ಸೇರಿದಂತೆ ಸಮಗ್ರ ವೈಜ್ಞಾನಿಕ ಚಿಕಿತ್ಸಾ ಕ್ರಮಗಳ ಅಗತ್ಯವಿದೆ ಎಂದರು.
ಪ್ರಸ್ತುತ ‘ಮಿಷನ್ ಫಾರ್ ಇಂಟಿಗ್ರೇಟೆಡ್ ಡೆವಲಪ್‌ಮೆಂಟ್ ಆಫ್ ಹಾರ್ಟಿಕಲ್ಚರ್’ (MIDH) ಯೋಜನೆಯಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು 60:40 ಅನುಪಾತದಲ್ಲಿ ನೀಡುತ್ತಿರುವ ಆರ್ಥಿಕ ನೆರವು ನಿಗದಿತ ಘಟಕ ವೆಚ್ಚಗಳನ್ನು ಆಧರಿಸಿದೆ. ಆದರೆ ಪ್ರದೇಶದಿಂದ ಪ್ರದೇಶಕ್ಕೆ ಬದಲಾಗುವ ರೋಗದ ತೀವ್ರತೆ ಹಾಗೂ ಚಿಕಿತ್ಸೆಗೆ ತಗುಲುವ ನೈಜ ವೆಚ್ಚವನ್ನು ಭರಿಸಲು ಈ ನೆರವು ಸಾಕಾಗುತ್ತಿಲ್ಲ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಇದನ್ನೂ ಓದಿ: ಸುಪ್ರೀಂಕೋರ್ಟ್ ತೀರ್ಪಿನ ಬೆನ್ನಲ್ಲೇ ಮಂಗಳೂರಿಗೆ ‘ವಾಕಬಿಲಿಟಿ ಆಡಿಟ್’ ಬೇಡಿಕೆ, ಸಿಎಂ ಡಿಕೆಶಿಗೆ ಸಂಸದ ಚೌಟ ಪತ್ರ
ಈ ಹಿನ್ನೆಲೆಯಲ್ಲಿ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯವು ತಕ್ಷಣ ಮಧ್ಯಪ್ರವೇಶಿಸಿ, ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್ (ICAR), ಸೆಂಟ್ರಲ್ ಪ್ಲಾಂಟೇಷನ್ ಕ್ರಾಪ್ಸ್ ರಿಸರ್ಚ್ ಇನ್‌ಸ್ಟಿಟ್ಯೂಟ್ (CPCRI), ಡೈರೆಕ್ಟರೇಟ್ ಆಫ್ ಅರೆಕಾನಟ್ ಆ್ಯಂಡ್ ಸ್ಪೈಸಸ್ ಡೆವಲಪ್‌ಮೆಂಟ್ (DASD), ರಾಜ್ಯ ಸರ್ಕಾರಗಳು ಹಾಗೂ ಬೆಳೆಗಾರರ ಸಂಘಟನೆಗಳ ಸಹಯೋಗದಲ್ಲಿ ನಿಗದಿತ ಕಾಲಮಿತಿಯೊಳಗೆ ವೈಜ್ಞಾನಿಕ ಅಧ್ಯಯನ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಅಧ್ಯಯನದ ಮೂಲಕ ರೋಗದ ಹಂತಕ್ಕೆ ಅನುಗುಣವಾದ ಚಿಕಿತ್ಸಾ ಕ್ರಮಗಳು, ಪ್ರತಿ ಹೆಕ್ಟೇರ್‌ಗೆ ಅಗತ್ಯವಿರುವ ಔಷಧ, ಗೊಬ್ಬರ, ಕೂಲಿ, ರೋಗ ನಿರ್ಣಯ ವೆಚ್ಚ, ಮರುನಾಟಿಯ ಅವಶ್ಯಕತೆ ಹಾಗೂ ಅರ್ಹ ಫಲಾನುಭವಿಗಳ ಮಾನದಂಡಗಳನ್ನು ವೈಜ್ಞಾನಿಕವಾಗಿ ನಿರ್ಧರಿಸಬೇಕು ಎಂದು ಸಂಸದರು ಒತ್ತಾಯಿಸಿದರು.
ಇದಲ್ಲದೆ, ಈ ವೈಜ್ಞಾನಿಕ ವರದಿಯ ಆಧಾರದ ಮೇಲೆ MIDH ನಿಯಮಾವಳಿಗೆ ತಿದ್ದುಪಡಿ ತಂದು ತೋಟಗಾರಿಕಾ ಬೆಳೆಗಳಿಗೆ ಪ್ರತ್ಯೇಕ ‘ರೋಗ-ಆಧಾರಿತ ಘಟಕ’ (Disease-Specific Component) ರೂಪಿಸಬೇಕು. ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಕೇವಲ ಒಂದು ಬಾರಿ ಇನ್‌ಪುಟ್ ಸಹಾಯಧನ ನೀಡುವ ಬದಲು, ರೋಗ ನಿರ್ಣಯ, ವಿಸ್ತರಣಾ ಸೇವೆಗಳು ಮತ್ತು ಹಂತ ಹಂತವಾಗಿ ರೋಗ ನಿಯಂತ್ರಣ ಚಿಕಿತ್ಸೆಗೆ ಅವಕಾಶ ಕಲ್ಪಿಸಬೇಕು ಎಂದು ಅವರು ಸದನದ ಗಮನ ಸೆಳೆದರು.
ಮುಂದಿನ ವಾರ್ಷಿಕ ಕಾರ್ಯಯೋಜನೆ ಸಿದ್ಧವಾಗುವ ಮುನ್ನವೇ ಈ ಅಧ್ಯಯನ ಪೂರ್ಣಗೊಳಿಸಿ, ಕರಡು ನಿಯಮಾವಳಿ ಹಾಗೂ ಅಂತಿಮ ನಿರ್ಧಾರಗಳನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು ಎಂದು ಕ್ಯಾ. ಬ್ರಿಜೇಶ್ ಚೌಟ ಅವರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರು.
ಕೇಂದ್ರ ಕೃಷಿ ಸಚಿವರಿಗೆ ಪತ್ರ
ಕಳೆದ ಮೇ ತಿಂಗಳಲ್ಲಿ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಸವಿಸ್ತಾರ ಪತ್ರ ಬರೆದಿದ್ದ ಸಂಸದ ಬ್ರಿಜೇಶ್ ಚೌಟ, MIDH ವೆಚ್ಚದ ಮಿತಿಯಿಂದ ವಿಶೇಷ ವಿನಾಯಿತಿ ನೀಡಿ, ರೈತರಿಗೆ ಸಮಗ್ರ ಬೆಂಬಲ ಪ್ಯಾಕೇಜ್ ಘೋಷಿಸುವಂತೆ ಹಾಗೂ ಎಲೆ ಚುಕ್ಕಿ ರೋಗಕ್ಕೆ ಈ ಹಿಂದೆ ಬಿಡುಗಡೆಯಾಗಿದ್ದ ಅನುದಾನವನ್ನು ಮರುಬಿಡುಗಡೆ ಮಾಡುವಂತೆ ಮನವಿ ಮಾಡಿದ್ದರು.
ಹಳದಿ ಎಲೆ ರೋಗದಿಂದ ದಕ್ಷಿಣ ಕನ್ನಡ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ಸುಮಾರು 16 ಸಾವಿರ ಹೆಕ್ಟೇರ್ ಪ್ರದೇಶ ಬಾಧಿತವಾಗಿರುವುದನ್ನು ಉಲ್ಲೇಖಿಸಿದ ಅವರು, ವಾಸ್ತವ ಪರಿಸ್ಥಿತಿಯನ್ನು ಖುದ್ದಾಗಿ ಪರಿಶೀಲಿಸಲು ಮಂಗಳೂರಿಗೆ ಭೇಟಿ ನೀಡುವಂತೆ ಕೇಂದ್ರ ಕೃಷಿ ಸಚಿವರನ್ನು ಆಹ್ವಾನಿಸಿದ್ದರು.
ಕೇಂದ್ರ ಕೃಷಿ ಸಚಿವಾಲಯ, ICAR, CPCRI ಹಾಗೂ ರಾಜ್ಯ ಸರ್ಕಾರದ ಸಂಸ್ಥೆಗಳ ಸಮನ್ವಯದೊಂದಿಗೆ ಜಂಟಿ ಕ್ರಮ ಕೈಗೊಂಡು, ವಿಜ್ಞಾನಿಗಳು ಹಾಗೂ ತೊಂದರೆಗೊಳಗಾದ ರೈತರೊಂದಿಗೆ ಸಂವಾದ ನಡೆಸಿದರೆ ಸಮಸ್ಯೆಯ ಕುರಿತು ನಿಖರ ಮತ್ತು ವಾಸ್ತವ ಮಾಹಿತಿ ಲಭ್ಯವಾಗಲಿದೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದರು.

