ಮಂಗಳೂರು: ತುಳು ನಾಟಕ ಹಾಗೂ ಕರಾವಳಿ ಚಿತ್ರರಂಗದ ಜನಪ್ರಿಯ ಹಾಸ್ಯ ನಟ ಅರವಿಂದ್ ಬೋಳಾರ್ ಅವರು ಖಾಸಗಿ ಕಾರ್ಯಕ್ರಮವೊಂದರಲ್ಲಿ ನೀಡಿದ್ದಾರೆನ್ನಲಾದ ಹೇಳಿಕೆಯ ವೀಡಿಯೋ ತುಣುಕೊಂದು ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಪರ-ವಿರೋಧದ ತೀವ್ರ ಚರ್ಚೆಗೆ ಎಡೆಮಾಡಿಕೊಟ್ಟಿದೆ.
ವೈರಲ್ ವೀಡಿಯೋದಲ್ಲಿ ಏನಿದೆ?: ನಟ ಬೋಳಾರ್ ಹೇಳಿಕೆ
ಖಾಸಗಿ ವೇದಿಕೆಯೊಂದರಲ್ಲಿ ಅರವಿಂದ್ ಬೋಳಾರ್ ಅವರು ತುಳು ಭಾಷೆಯಲ್ಲಿ ಮಾತನಾಡಿದ ಕೆಲವೇ ಸೆಕೆಂಡುಗಳ ವೀಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. “ನನ್ನ ಸಿನಿಮಾಗಳಲ್ಲಿ ಹಲವು ಬಾರಿ ಮುಸ್ಲಿಮರ ಪಾತ್ರ ಮಾಡಿಸಿದ್ದಾರೆ. ನನ್ನ ಹಾಸ್ಯ ಏನಿದ್ದರೂ ನನಗೆ ಮುಸ್ಲಿಮರೇ ಮೊದಲು. ನನ್ನನ್ನು ಹೆಚ್ಚು ಇಷ್ಟಪಟ್ಟಿದ್ದೇ ಮುಸ್ಲಿಮರು. ನಾನು ಯಾವ ವೇದಿಕೆಯಲ್ಲಿ ಕೇಳಿದರೂ ಅದನ್ನೇ ಹೇಳುತ್ತೇನೆ” ಎಂದು ಬೋಳಾರ್ ಅವರು ಭಾಷಣದಲ್ಲಿ ಹೇಳಿರುವುದು ವೀಡಿಯೋದಲ್ಲಿದೆ.
ಇದನ್ನೂ ಓದಿ: ಜೋಹರ್ ಕೃತ್ಯವನ್ನು ಅತ್ಯಾಚಾರ ಸಂತ್ರಸ್ತರಿಗೆ ಹೋಲಿಸಿದ ಸ್ವರಾ ಭಾಸ್ಕರ್: ‘ನಿರ್ಲಜ್ಜತನ’ ಎಂದ ರಣವೀರ್ ಶೋರೆ
ಸೋಶಿಯಲ್ ಮೀಡಿಯಾದಲ್ಲಿ ಪರ-ವಿರೋಧದ ಕಾವೇರಿದ ಚರ್ಚೆ
ಅರವಿಂದ್ ಬೋಳಾರ್ ಅವರ ಈ ಹೇಳಿಕೆ ಹೊರಬೀಳುತ್ತಿದ್ದಂತೆಯೇ ಕರಾವಳಿ ಭಾಗದ ನೆಟ್ಟಿಗರಲ್ಲಿ ಭಿನ್ನಾಭಿಪ್ರಾಯ ವ್ಯಕ್ತವಾಗಿದೆ. ಕಲಾವಿದನೊಬ್ಬ ಬೆಳೆಯಲು ಎಲ್ಲ ಧರ್ಮದ ಅಭಿಮಾನಿಗಳು ಕಾರಣ. ಹೀಗಿರುವಾಗ ನಿರ್ದಿಷ್ಟವಾಗಿ ಒಂದು ಸಮುದಾಯಕ್ಕೆ ಆದ್ಯತೆ ನೀಡುವಂತೆ ಮಾತನಾಡುವುದು ಸರಿಯಲ್ಲ ಎಂದು ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕೆಲ ಅಭಿಮಾನಿಗಳು ನಟ ಅರವಿಂದ್ ಬೋಳಾರ್ ಅವರಿಗೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನ ವ್ಯಕ್ತಪಡಿಸಿ ಪೋಸ್ಟ್ ಹಾಕುತ್ತಿದ್ದಾರೆ. ಇನ್ನೊಂದೆಡೆ, ಇದನ್ನು ಸೌಹಾರ್ದತೆಯ ಮಾತುಗಳಾಗಿ ಧನಾತ್ಮಕವಾಗಿ ನೋಡಬೇಕೇ ಹೊರತು ವಿವಾದ ಮಾಡಬಾರದು ಎಂದು ಹಲವರು ನಟನ ಪರವಾಗಿ ನಿಂತು ಬ್ಯಾಟಿಂಗ್ ಮಾಡುತ್ತಿದ್ದಾರೆ.

