ಶಿವಾಜಿನಗರದಲ್ಲಿ ಫುಟ್‌ಪಾತ್ ತೆರವು ವೇಳೆ ಹೈಡ್ರಾಮಾ: ಜಿಬಿಎ ಅಧಿಕಾರಿಗಳ ಮೇಲೆ ಪೆಪ್ಪರ್ ಸ್ಪ್ರೇ ದಾಳಿ

ಬೆಂಗಳೂರು: ರಾಜಧಾನಿ ಬೆಂಗಳೂರಿನ ಶಿವಾಜಿನಗರದಲ್ಲಿ ಜಿಬಿಎ (GBA) ವತಿಯಿಂದ ಮಂಗಳವಾರ ನಡೆದ ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ತೀವ್ರ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು. ಫುಟ್‌ಪಾತ್ ತೆರವುಗೊಳಿಸಲು ಬಂದ ಪಾಲಿಕೆ ಇಂಜಿನಿಯರ್‌ಗಳು ಹಾಗೂ ಸಿಬ್ಬಂದಿಯ ಮೇಲೆ ಸ್ಥಳೀಯ ಸಂಘಟನೆಗಳ ಕಾರ್ಯಕರ್ತರು ಹಲ್ಲೆಗೆ ಯತ್ನಿಸಿದ ಘಟನೆ ನಡೆದಿದ್ದು, ಪ್ರಕರಣ ಇದೀಗ ಭಾರಿ ರಾಜಕೀಯ ಕಾಳಗಕ್ಕೆ ಕಾರಣವಾಗಿದೆ.

ಶಿವಾಜಿನಗರದಲ್ಲಿ ಜೆಸಿಬಿ ಯಂತ್ರ ಬಳಸಿ ಫುಟ್‌ಪಾತ್ ಅತಿಕ್ರಮಣ ತೆರವುಗೊಳಿಸುವ ಕಾರ್ಯಕ್ಕೆ ಜಿಬಿಎ ಸಿಬ್ಬಂದಿ ಮುಂದಾದಾಗ, ಸ್ಥಳೀಯ ಸಂಘಟನೆಗಳ ಕಾರ್ಯಕರ್ತರು ತೀವ್ರ ಅಡ್ಡಿಪಡಿಸಿ ಪೊಲೀಸರು ಹಾಗೂ ಅಧಿಕಾರಿಗಳ ಜೊತೆ ತೀವ್ರ ಮಾತಿನ ಚಕಮಕಿ ನಡೆದಿದೆ.

ಈ ವೇಳೆ ಪಾಲಿಕೆ ಸಿಬ್ಬಂದಿ ಹಾಗೂ ಜೆಸಿಬಿ ಚಾಲಕನ ಮೇಲೆ ಹಲ್ಲೆ ನಡೆಸಲಾಗಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ. ಪಾಲಿಕೆ ಇಂಜಿನಿಯರ್ ಒಬ್ಬರ ಮೇಲೆ ಹೆಲ್ಮೆಟ್‌ನಿಂದ ಚಚ್ಚಲು ಯತ್ನಿಸಲಾಗಿದ್ದು, ಜೆಸಿಬಿ ಚಾಲಕನ ಕಣ್ಣಿಗೆ ಪೆಪ್ಪರ್ ಸ್ಪ್ರೇ ಎರಚಲಾಗಿದೆ ಎಂದು ಸಿಬ್ಬಂದಿ ದೂರಿದ್ದಾರೆ. ಪರಿಸ್ಥಿತಿ ಕೈಮೀರುತ್ತಿದ್ದಂತೆ ಮಧ್ಯಪ್ರವೇಶಿಸಿದ ಪೊಲೀಸರು, ಹಲ್ಲೆ ಯತ್ನದ ಆರೋಪದ ಮೇಲೆ ಓರ್ವ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ. ಉದ್ವಿಗ್ನ ವಾತಾವರಣ ನಿರ್ಮಾಣವಾದ ಹಿನ್ನೆಲೆಯಲ್ಲಿ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ, ಅಧಿಕಾರಿಗಳು ದೂರು ನೀಡಲು ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಗೆ ತೆರಳಿದ್ದಾರೆ.

ಇದನ್ನೂ ಓದಿ: ಸೀಟಿಗಾಗಿ ಬಿಎಂಟಿಸಿ ಕಂಡಕ್ಟರ್ – ಹಿರಿಯ ನಾಗರಿಕ ನಡುವೆ ವಾಕ್ಸಮರ

ಬೆಂಗಳೂರಿಗೆ ಒಂದು ಕಾನೂನು, ಶಿವಾಜಿನಗರಕ್ಕಿನ್ನೊಂದಾ?”: ಬಿಜೆಪಿ ತೀಕ್ಷ್ಣ ವಾಗ್ದಾಳಿ

ಈ ಘಟನೆಯನ್ನು ಖಂಡಿಸಿರುವ ಕರ್ನಾಟಕ ರಾಜ್ಯ ಬಿಜೆಪಿ, ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಹಾಗೂ ಸಚಿವರ ವಿರುದ್ಧ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ತೀವ್ರ ಸರಣಿ ಪ್ರಶ್ನೆಗಳನ್ನು ಎತ್ತಿದೆ.

“ತುಘಲಕ್ ಕಾಂಗ್ರೆಸ್ ಸರ್ಕಾರದಲ್ಲಿ ಬೆಂಗಳೂರಿಗೆ ಒಂದು ಕಾನೂನು.? ಶಿವಾಜಿನಗರಕ್ಕೆ ಇನ್ನೊಂದು ಕಾನೂನಾ? ಶಿವಾಜಿನಗರದಲ್ಲಿ ಫುಟ್‌ಪಾತ್ ಅತಿಕ್ರಮಣ ತೆರವಿಗೆ ಹೋದ ಇಂಜಿನಿಯರ್‌ಗಳ ಮೇಲೆ ಕಿಡಿಗೇಡಿಗಳು ಅಮಾನುಷ ಹಲ್ಲೆ ನಡೆಸಿದ್ದಾರೆ. ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದರೂ ಸಚಿವ ಕೃಷ್ಣ ಬೈರೇಗೌಡ ಅವರು ಮೌನವಾಗಿರುವುದು ಏಕೆ? ಫುಟ್‌ಪಾತ್ ಒತ್ತುವರಿ ಮಾಡಿಕೊಂಡರೂ ಕೇಳುವಂತಿಲ್ಲ, ಅಧಿಕಾರಿಗಳನ್ನು ಹೊಡೆದರೂ ಕ್ರಮವಿಲ್ಲ. ಇದೇನಾ ನಿಮ್ಮ ಆಡಳಿತದ ಗ್ಯಾರಂಟಿ.?” ಎಂದು ಬಿಜೆಪಿ ಪ್ರಶ್ನಿಸಿದೆ.

ಇಲ್ಲಿದೆ ನೋಡಿ ಎಕ್ಸ್​​ ಪೋಸ್ಟ್​:

ಅಲ್ಲದೆ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಟಾರ್ಗೆಟ್ ಮಾಡಿದ ಬಿಜೆಪಿ, “ಬೇಡದ ವಿಷಯದ ಕುರಿತು ಪುಂಗುವ ಪ್ರಿಯಾಂಕ್ ಖರ್ಗೆ ಅವರೇ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇದೆಯೇ? ಅಥವಾ ಸತ್ತು ಹೋಗಿದೆಯೇ?” ಎಂದು ಕಟುವಾಗಿ ವಾಗ್ದಾಳಿ ನಡೆಸಿದೆ.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *