ಬಸ್ ನಿಲ್ದಾಣದಿಂದಲೇ RTC ಬಸ್ ಹೈಜಾಕ್: 18 ಕಿ.ಮೀ ಚೇಸ್ ಮಾಡಿ ಖದೀಮನನ್ನು ಸಿನಿಮೀಯ ಶೈಲಿಯಲ್ಲಿ ಹಿಡಿದ ಪೊಲೀಸರು

ತೆಲಂಗಾಣ: ಸರ್ಕಾರಿ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರ ಸೇವೆಯಲ್ಲಿದ್ದ ಆರ್‌ಟಿಸಿ (RTC) ಬಸ್‌ ಒಂದನ್ನು ರೌಡಿ/ಕಿಡಿಗೇಡಿಗಳ ಗುಂಪೊಂದು ಕದ್ದು, ಸಾರ್ವಜನಿಕ ವಾಹನಗಳಿಗೆ ಹಾಗೂ ಪೊಲೀಸ್ ಜೀಪ್‌ಗೆ ಭೀಕರವಾಗಿ ಡಿಕ್ಕಿ ಹೊಡೆಯುತ್ತಾ ಪರಾರಿಯಾಗಲು ಯತ್ನಿಸಿದ ಅಚ್ಚರಿ ಹಾಗೂ ಆತಂಕಕಾರಿ ಘಟನೆ ತೆಲಂಗಾಣದಲ್ಲಿ ನಡೆದಿದೆ.

ಸಾರ್ವಜನಿಕ ಸ್ಥಳದಲ್ಲಿ ಇಂತಹ ಹೈಡ್ರಾಮಾ ನಡೆದಿರುವುದು ಪ್ರಾಣಾಪಾಯದ ಜೊತೆಗೆ ತೆಲಂಗಾಣ ಸಾರಿಗೆ ಸಂಸ್ಥೆ ಹಾಗೂ ಪೊಲೀಸರ ಭದ್ರತಾ ಲೋಪಗಳ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಲಭ್ಯವಿರುವ ಮಾಹಿತಿಯ ಪ್ರಕಾರ, ಕೊತ್ತಗೂಡೆಂ ಬಸ್ ನಿಲ್ದಾಣದಿಂದ ಕಿಡಿಗೇಡಿಗಳು ಆರ್‌ಟಿಸಿ ಬಸ್ಸನ್ನು ಅಪಹರಿಸಿ ತೀವ್ರ ವೇಗವಾಗಿ ಚಲಾಯಿಸಿಕೊಂಡು ಪರಾರಿಯಾಗಲು ಯತ್ನಿಸಿದ್ದಾರೆ. ಈ ವೇಳೆ ಮಾರ್ಗಮಧ್ಯೆ ಎದುರಿಗೆ ಬಂದ ಹಲವು ಸಾರ್ವಜನಿಕ ವಾಹನಗಳು ಹಾಗೂ ತಡೆಯಲು ಬಂದ ಪೊಲೀಸ್ ವಾಹನಕ್ಕೆ ಬಸ್‌ನಿಂದ ಭೀಕರವಾಗಿ ಡಿಕ್ಕಿ ಹೊಡೆದಿದ್ದಾರೆ.

ಇಲ್ಲಿದೆ ನೋಡಿ ಸ್ಟೋರಿ:

ಈ ಸರಣಿ ಅಪಘಾತಗಳ ಪರಿಣಾಮವಾಗಿ ಹಲವಾರು ಜನರು ಗಂಭೀರವಾಗಿ ಗಾಯಗೊಂಡಿದ್ದು, ಸಾರ್ವಜನಿಕರಲ್ಲಿ ತೀವ್ರ ಭಯದ ವಾತಾವರಣ ನಿರ್ಮಾಣವಾಗಿತ್ತು. ಕೊತ್ತಗೂಡೆಂನಿಂದ ನಿಜಾಮಾಬಾದ್ ಕಡೆಗೆ ಅತಿ ವೇಗವಾಗಿ ಧಾವಿಸುತ್ತಿದ್ದ ಬಸ್, ಹನುಮಾನ್ ದೇವಾಲಯದ ಸಮೀಪದಲ್ಲಿದ್ದ ದೊಡ್ಡ ತಗ್ಗಿಗೆ (Pit) ಬಿದ್ದು ಕೊನೆಗೂ ನಿಂತಿದೆ.

ಇದನ್ನೂ ಓದಿ: 16 ವರ್ಷಗಳ ಕಾನೂನು ಸಮರ ಅಂತ್ಯ: ಸತ್ಯಕ್ಕೆ ಗೆಲುವಾಗಿದೆ, ಭಾರತಕ್ಕೆ ಮರಳಲು ದಿನಗಣನೆ ಶುರು ಎಂದ ಲಲಿತ್ ಮೋದಿ

ಬಸ್ ತಗ್ಗಿಗೆ ಬೀಳುತ್ತಿದ್ದಂತೆಯೇ ಅದರಲ್ಲಿದ್ದ ಆರೋಪಿಗಳಲ್ಲಿ ಒಬ್ಬ ಬಸ್‌ನಿಂದ ಜಿಗಿದು ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಆದರೆ, ಬೆನ್ನಟ್ಟಿದ್ದ ಪೊಲೀಸರು ಆತನನ್ನು ಕೊನೆಗೂ ಸೆರೆಹಿಡಿದು ಮೆಟ್‌ಪಲ್ಲಿ (Metpalli) ಪೊಲೀಸ್ ಠಾಣೆಗೆ ಕರೆದೊಯ್ದು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ಸಾರ್ವಜನಿಕರು ಹಾಗೂ ಸಾರಿಗೆ ಸಂಸ್ಥೆಯ ಸಿಬ್ಬಂದಿ ಸದಾ ಸಂಚರಿಸುವ ಬಸ್ ನಿಲ್ದಾಣದಿಂದಲೇ ಸರ್ಕಾರಿ ಬಸ್ ಅನ್ನು ಕದ್ದು ಇಷ್ಟೊಂದು ದೂ ರ ಚಲಾಯಿಸಿಕೊಂಡು ಹೋಗಲು ಹೇಗೆ ಸಾಧ್ಯವಾಯಿತು? ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮೆಟ್‌ಪಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಈ ಕೃತ್ಯದ ಹಿಂದಿರುವ ಇತರ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *