ಪುತ್ತೂರು: ಪ್ರಸ್ತುತ ದಿನಗಳಲ್ಲಿ ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳಿಗೆ ಅಪಾರ ಅವಕಾಶಗಳು ದೊರೆಯುತ್ತಿದ್ದು, ಅದರಲ್ಲಿ ಕ್ರೀಡೆ ಪ್ರಮುಖವಾಗಿದೆ. ಕ್ರೀಡೆಯು ಮಕ್ಕಳಲ್ಲಿ ಸಹಕಾರ ಮನೋಭಾವವನ್ನು ಬೆಳೆಸುತ್ತದೆ. ವಿದ್ಯಾರ್ಥಿಗಳು ಕ್ರೀಡೆಯ ಜೊತೆಗೆ ಭಾರತೀಯತೆ ಹಾಗೂ ರಾಷ್ಟ್ರಪ್ರೇಮವನ್ನು ಬೆಳೆಸಿಕೊಳ್ಳಬೇಕು ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ ಕರೆ ನೀಡಿದರು.
ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳು ಹಾಗೂ ವಿದ್ಯಾಭಾರತಿ ಕರ್ನಾಟಕ (ದ.ಕ.) ಜಂಟಿಯಾಗಿ ಪುತ್ತೂರಿನ ಸಾಮೆತ್ತಡ್ಕದ ಸುದಾನ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಬ್ಯಾಡ್ಮಿಂಟನ್ ಪಂದ್ಯಾಟದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಮಾರಂಭದಲ್ಲಿ ಮಾತನಾಡಿದ ಸುಬ್ರಮಣ್ಯ ನಟ್ಟೋಜ ಅವರು, “ದೇಶಕ್ಕೆ ಮೊದಲ ಪ್ರಧಾನ್ಯತೆಯನ್ನು ನೀಡಬೇಕು. ಕ್ರೀಡೆ ಮಕ್ಕಳಲ್ಲಿರುವ ಚೈತನ್ಯ ಶಕ್ತಿಯನ್ನು ಹೊರತೆಗೆಯುವ ಕಾರ್ಯ ಮಾಡುತ್ತದೆ. ಕ್ರೀಡೆಯ ಜೊತೆಗೆ ಭಾರತದ ಸಂಸ್ಕೃತಿ ಉಳಿಸಿ, ಭಾರತದ ತ್ರಿವರ್ಣ ಧ್ವಜವನ್ನು ಮುಗಿಲೆತ್ತರಕ್ಕೆ ಹಾರಿಸುವವರಾಗಬೇಕು” ಎಂದರು.
ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದ ಮಾಜಿ ಸೈನಿಕ ಹಾಗೂ ನಿವೃತ್ತ ಯುವಜನ ಸೇವಾ ಮತ್ತು ಕ್ರೀಡಾಧಿಕಾರಿ ಮಾಧವ ಬಿ.ಕೆ, “ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಸೋಲು-ಗೆಲುವು ಸಾಮಾನ್ಯವಾಗಿದ್ದು, ಎಲ್ಲರೂ ಕ್ರೀಡಾ ಮನೋಭಾವ, ಹಿರಿಯರಿಗೆ ಗೌರವ, ಶಿಸ್ತು ಮತ್ತು ಸಂಯಮ ಬೆಳೆಸಿಕೊಳ್ಳಬೇಕು. ಕಲಿಕೆಯೊಂದಿಗೆ ಕ್ರೀಡೆಯಲ್ಲಿ ಭಾಗವಹಿಸಿದರೆ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ” ಎಂದು ಹೇಳಿದರು.
ವೇದಿಕೆಯಲ್ಲಿ ಜಿಲ್ಲಾ ಶಾರೀರಿಕ್ ಪ್ರಮುಖ್ ಪುರುಷೋತ್ತಮ, ನೆಲ್ಲಿಕಟ್ಟೆ ಪದವಿ ಪೂರ್ವ ವಿದ್ಯಾಲಯದ ಪ್ರಾಂಶುಪಾಲ ಸತ್ಯಜಿತ್ ಉಪಾಧ್ಯಾಯ, ಬಪ್ಪಳಿಗೆ ಪದವಿ ಪೂರ್ವ ವಿದ್ಯಾಲಯದ ಪ್ರಾಂಶುಪಾಲ ಗಣೇಶ್ ಪ್ರಸಾದ್ ಡಿ. ಎಸ್., ಅಂಬಿಕಾ ಸಿ.ಬಿ.ಎಸ್.ಇ. ವಿದ್ಯಾಲಯದ ಪ್ರಾಂಶುಪಾಲೆ ಮಾಲತಿ ಡಿ., ದೈಹಿಕ ಶಿಕ್ಷಣ ಶಿಕ್ಷಕರಾದ ಸಂತೋಷ್ ಹಾಗೂ ಸುಚಿತ್ರಾ ಶೆಟ್ಟಿ ಉಪಸ್ಥಿತರಿದ್ದರು.

ಪಂದ್ಯಾಟದಲ್ಲಿ ಬಾಲವರ್ಗದಲ್ಲಿ 9, ಕಿಶೋರ ವರ್ಗದಲ್ಲಿ ೧೫ ಹಾಗೂ ತರುಣ ವರ್ಗದಲ್ಲಿ 13 ತಂಡಗಳು ಉತ್ಸಾಹದಿಂದ ಭಾಗವಹಿಸಿದ್ದವು. ಶಶಾಂಕ್ ಹಾಗೂ ಕೌಶಿಕ್ ತೀರ್ಪುಗಾರರಾಗಿ ಸಹಕರಿಸಿದರು. ಕನ್ನಡ ಉಪನ್ಯಾಸಕ ಸತೀಶ್ ಇರ್ದೆ ವಿಜೇತರ ಪಟ್ಟಿ ವಾಚಿಸಿದರು. ಆದಿಶ್ರೀ, ಅನುಶ್ರೀ, ಇಂಚರ, ಹೃನ್ಮಯಿ ಪ್ರಾರ್ಥಿಸಿ, ಜೀವಶಾಸ್ತ್ರ ಉಪನ್ಯಾಸಕ ವಿಷ್ಣು ಪ್ರದೀಪ್ ಕಾರ್ಯಕ್ರಮ ನಿರೂಪಿಸಿ ಧನ್ಯವಾದ ಸಮರ್ಪಿಸಿದರು.
ಇದನ್ನೂ ಓದಿ: ತೆಂಕಿಲದಲ್ಲಿ ಧರ್ಮಾಭ್ಯುದಯ ಸಾಮಾನ್ಯ ಸಭೆ: ಧರ್ಮ ಶಿಕ್ಷಣ ಪ್ರಸಾರಕರ ನೇಮಕಕ್ಕೆ ನಿರ್ಧಾರ
ಪಂದ್ಯಾಟದ ಅಂತಿಮ ಫಲಿತಾಂಶ
ಸಮಾರೋಪ ಸಮಾರಂಭದಲ್ಲಿ ವಿದ್ಯಾ ಭಾರತಿ ಕ್ಷೇತ್ರೀಯ ನೈತಿಕ, ಆಧ್ಯಾತ್ಮಿಕ ಪ್ರಮುಖ್ ವೆಂಕಟ್ರಾಮಣ್ ರಾವ್ ಮಂಕುಡೆ ಅವರು ವಿಜೇತರಿಗೆ ಬಹುಮಾನ ವಿತರಿಸಿದರು.
14 ವರ್ಷದೊಳಗಿನ ವಿಭಾಗ (ಬಾಲ ವರ್ಗ):
ಬಾಲಕರು: ಮಂಗಳೂರು ಶಾರದಾ ವಿದ್ಯಾಲಯ (ಪ್ರಥಮ), ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ (ದ್ವಿತೀಯ).
ಬಾಲಕಿಯರು: ವಿವೇಕಾನಂದ ಸಿ.ಬಿ.ಎಸ್.ಇ. ವಿದ್ಯಾಲಯ (ಪ್ರಥಮ), ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ (ದ್ವಿತೀಯ).
17 ವರ್ಷದೊಳಗಿನ ವಿಭಾಗ (ಕಿಶೋರ ವರ್ಗ):
ಬಾಲಕರು: ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ (ಪ್ರಥಮ), ಮಂಗಳೂರು ಶಾರದಾ ವಿದ್ಯಾಲಯ (ದ್ವಿತೀಯ).
ಬಾಲಕಿಯರು: ಮಂಗಳೂರು ಶಾರದಾ ವಿದ್ಯಾಲಯ (ಪ್ರಥಮ), ಪುತ್ತೂರು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ (ದ್ವಿತೀಯ).
19 ವರ್ಷದೊಳಗಿನ ವಿಭಾಗ (ತರುಣ ವರ್ಗ):
ಬಾಲಕರು: ವಿವೇಕಾನಂದ ಪದವಿಪೂರ್ವ ಕಾಲೇಜು (ಪ್ರಥಮ), ಮಂಗಳೂರಿನ ಶಾರದಾ ಪದವಿಪೂರ್ವ ಕಾಲೇಜು (ದ್ವಿತೀಯ).
ಬಾಲಕಿಯರು: ಪುತ್ತೂರು ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ಕಾಲೇಜು (ಪ್ರಥಮ), ಮಂಗಳೂರು ಶಾರದಾ ವಿದ್ಯಾನಿಕೇತನ (ದ್ವಿತೀಯ).
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

