ಸಂಸದರಾದ್ರೂ ಬಿಗುವಿಲ್ಲ, ಸಾಮಾನ್ಯ ಪ್ರಜೆಯ ಕರೆಗೆ ಸ್ಪಂದನೆ: ರಾಜಕೀಯ ಕ್ಷೇತ್ರದಲ್ಲಿ ನೈಜ ಭರವಸೆ ಕೋಟ

ಚಿಕ್ಕಮಗಳೂರು: ಸಾರ್ವಜನಿಕರ ಸಮಸ್ಯೆಗೆ ತಕ್ಷಣವೇ ಸ್ಪಂದಿಸಿ, ಸರಳತೆ ಮತ್ತು ಸಜ್ಜನಿಕೆಗೆ ಹೆಸರುವಾಸಿಯಾದ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಅವರು ಮತ್ತೊಮ್ಮೆ ಪ್ರಜಾಪ್ರಭುತ್ವದ ನೈಜ ಆಶಯವನ್ನು ಎತ್ತಿಹಿಡಿದಿದ್ದಾರೆ. ಈ ಬಗ್ಗೆ ಫೇಸ್​​ ಬುಕ್​​​ನಲ್ಲಿ ಪೃಥ್ವಿ ಅವರೆಕಾಡು ಎಂಬುವವರು ಹಂಚಿಕೊಂಡಿದ್ದಾರೆ.

ಆಲದಗುಡ್ಡೆ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿದ್ದಿದ್ದ ಭಾರಿ ರಸ್ತೆ ಗುಂಡಿಯ ಸಮಸ್ಯೆಯನ್ನು ಸಾರ್ವಜನಿಕರೊಬ್ಬರು ಸಂಸದರ ಗಮನಕ್ಕೆ ತಂದ ತಕ್ಷಣವೇ ಅವರು ಇಲಾಖೆಯ ಇಂಜಿನಿಯರ್‌ಗಳಿಗೆ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿ ಮಾದರಿಯಾಗಿದ್ದಾರೆ.

ನಿನ್ನೆ ಕಿರಗುಂದ ನಿವಾಸಿ ಧರ್ಮೇಂದ್ರ ಎಂಬುವವರು ಕರೆ ಮಾಡಿ, ಚಿಕ್ಕಮಗಳೂರು – ಮೂಡಿಗೆರೆ ರಸ್ತೆಯ ಮಧ್ಯದಲ್ಲಿರುವ ಆಲದಗುಡ್ಡೆ ಬಳಿ ಭಾರಿ ರಸ್ತೆ ಗುಂಡಿ ಬಿದ್ದಿದ್ದು, ವಾಹನ ಸಂಚಾರಕ್ಕೆ ತೀವ್ರ ಅಡಚಣೆಯಾಗುತ್ತಿದೆ ಎಂದು ಫೋಟೋ ಸಮೇತ ವಿಷಯ ತಿಳಿಸಿದ್ದರು. “ನೀವು ಈ ಸಮಸ್ಯೆಗೆ ಕೈಹಾಕಿದರೆ ಖಂಡಿತವಾಗಿಯೂ ಕೆಲಸ ಮುಗಿಯುವವರೆಗೆ ಸಂಬಂಧಪಟ್ಟವರ ಬೆನ್ನುಬಿದ್ದು ಕೆಲಸ ಮಾಡಿಸುತ್ತೀರಿ” ಎಂಬ ನಂಬಿಕೆಯಿಂದ ಸಮಸ್ಯೆಯನ್ನು ಅವರ ಗಮನಕ್ಕೆ ತರಲಾಗಿತ್ತು.

ಇಲ್ಲಿದೆ ನೋಡಿ ಪೋಸ್ಟ್:

ಈ ಸಾರ್ವಜನಿಕ ದೂರು ಸ್ವೀಕರಿಸಿದ ತಕ್ಷಣವೇ ಉಡುಪಿ-ಚಿಕ್ಕಮಗಳೂರು ಸಂಸದರಾದ ಕೋಟ ಶ್ರೀನಿವಾಸ್ ಪೂಜಾರಿ ಅವರಿಗೆ ಸತತವಾಗಿ ಕರೆ ಮಾಡಲಾಯಿತು. ಸಂಸದರು ಕಾರ್ಯನಿರತರಾಗಿದ್ದ ಕಾರಣ ತಕ್ಷಣ ಕರೆ ಸ್ವೀಕರಿಸಲು ಸಾಧ್ಯವಾಗದಿದ್ದರೂ, ಮಧ್ಯಾಹ್ನದ ವೇಳೆ ಅವರೇ ಸ್ವತಃ ವಾಪಸ್ ಕರೆ ಮಾಡಿ ವಿಷಯವನ್ನು ಆಲಿಸಿದರು. ಇದು ರಾಷ್ಟ್ರೀಯ ಹೆದ್ದಾರಿಯಾಗಿರುವುದರಿಂದ, ತಕ್ಷಣವೇ ಹಾಳಾದ ಮೇಲ್ಭಾಗದ ರಸ್ತೆಯನ್ನು ತೆಗೆದು ವೆಟ್ ಮಿಕ್ಸ್ ಹಾಕಿ ತಾತ್ಕಾಲಿಕವಾಗಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಮನವಿ ಮಾಡಲಾಯಿತು.

ಇದನ್ನೂ ಓದಿ: ಪೇಪರ್ ಲೀಕ್ ತಡೆಗೆ ಕೇಂದ್ರದಿಂದ ಕಠಿಣ ತಿದ್ದುಪಡಿ ಕಾಯ್ದೆ: ಜುಲೈ 27ಕ್ಕೆ ಲೋಕಸಭೆಯಲ್ಲಿ ‘ಸಾರ್ವಜನಿಕ ಪರೀಕ್ಷೆಗಳ ವಿಧೇಯಕ-2026’ ಮಂಡನೆ

ಸಮಸ್ಯೆಯ ಗಂಭೀರತೆಯನ್ನು ಅರಿತ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಅವರು, ತಕ್ಷಣವೇ ತಮ್ಮ ವೈಯಕ್ತಿಕ ಸಹಾಯಕ (PA) ಯತೀಶ್ ಅವರ ಮೂಲಕ ಕರೆ ಮಾಡಿಸಿ ಸ್ಥಳದ ಸಂಪೂರ್ಣ ಮಾಹಿತಿ ಪಡೆದುಕೊಂಡರು. ಅಲ್ಲದೆ, ತಕ್ಷಣವೇ ರಾಷ್ಟ್ರೀಯ ಹೆದ್ದಾರಿ ವಿಭಾಗದ ಇಂಜಿನಿಯರ್‌ಗೆ ಕರೆ ಮಾಡಿ ಸ್ಥಳದಲ್ಲಿ ಕಾಮಗಾರಿ ನಡೆಸಿ ರಸ್ತೆ ಸರಿಪಡಿಸುವಂತೆ ಖಡಕ್ ಸೂಚನೆ ನೀಡಿದ್ದಾರೆ. ಸಂಸದರೊಂದಿಗೆ ಮಾತನಾಡಿದ ಕಾಲ್ ಡಿಟೇಲ್ಸ್ ಪ್ರತಿಯನ್ನೂ ಪೃಥ್ವಿ ಅವರೆಕಾಡು ಅವರು ತಮ್ಮ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ.

ಇಂದಿನ ರಾಜಕೀಯ ವಾತಾವರಣದಲ್ಲಿ ಒಮ್ಮೆ ಶಾಸಕ, ಸಂಸದ, ಜಿ.ಪಂ., ತಾ.ಪಂ. ಸದಸ್ಯರಾದರೆ ಅಥವಾ ಪಕ್ಷದ ತಾಲೂಕು, ಜಿಲ್ಲಾ ಮಟ್ಟದ ಜವಾಬ್ದಾರಿ ಸಿಕ್ಕರೆ ಸಾಮಾನ್ಯ ಜನರ ಫೋನ್ ಕರೆಯನ್ನೂ ಸ್ವೀಕರಿಸದ ಜನಪ್ರತಿನಿಧಿಗಳಿರುವಾಗ, ಮಾಜಿ ಸಚಿವರಾಗಿ, ಸಂಸದರಾಗಿದ್ದರೂ ಒಬ್ಬ ಸಾಮಾನ್ಯ ಪ್ರಜೆಯ ಕರೆಗೆ ವಾಪಸ್ ಕರೆ ಮಾಡಿ, ಸಮಸ್ಯೆಗೆ ಸ್ಪಂದಿಸುವ ಕೋಟ ಶ್ರೀನಿವಾಸ್ ಪೂಜಾರಿ ಅವರ ಈ ನಡೆ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.

ಸಾಮಾಜಿಕ ಕ್ಷೇತ್ರದಲ್ಲಿ ತಮ್ಮ ಸರಳತೆ, ಸಜ್ಜನಿಕೆ ಹಾಗೂ ನಮ್ರತೆಯಿಂದ ವಾಮನ ರೂಪದಂತೆ ಕಾಣುವ ಕೋಟ ಶ್ರೀನಿವಾಸ್ ಪೂಜಾರಿಯಂಥವರು ರಾಜಕೀಯ ಕ್ಷೇತ್ರದಲ್ಲಿ ನಿಜವಾದ ಭರವಸೆಯಾಗಿದ್ದಾರೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Leave a Reply

Your email address will not be published. Required fields are marked *