ಬೆಂಗಳೂರು: ನೂತನವಾಗಿ ರಚನೆಯಾಗಿರುವ ರಾಜ್ಯ ಕಾಂಗ್ರೆಸ್ ಸಚಿವ ಸಂಪುಟದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಉಲ್ಲೇಖಿಸಿ ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ಸರಣಿ ಟ್ವೀಟ್ ಮಾಡಿರುವ ಅವರು, ಪ್ರಸ್ತುತ ಸಂಪುಟವು ಮಹಿಳಾ ವಿರೋಧಿ ಹಾಗೂ ಭ್ರಷ್ಟಾಚಾರವನ್ನು ಪೋಷಿಸುವ ಸಂಪುಟವಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
“ಎರಡು ತಿಂಗಳು ಹೈಕಮಾಂಡ್ ಮನೆ ಬಾಗಿಲು ಕಾದು ಕೊನೆಗೂ ಭ್ರಷ್ಟಾಚಾರ ಆರೋಪ ಹೊತ್ತಿರುವವರು, ಪಬ್‌ಗಳಲ್ಲಿ ಗಲಾಟೆ ಮಾಡಿದವರು ಹಾಗೂ ಪ್ರಶ್ನೆ ಪತ್ರಿಕೆ ಸೋರಿಕೆ ತಡೆಯದವರಿಗೆ ಮಂತ್ರಿ ಸ್ಥಾನ ಕೊಟ್ಟು ರಾಜ್ಯದ ಜನತೆಗೆ ಒಂದು ‘ಅದ್ಭುತ’ ಸಚಿವ ಸಂಪುಟ ಕೊಟ್ಟಿದ್ದೀರಿ.” ಎಂದು ಬಿ.ವೈ. ವಿಜಯೇಂದ್ರ ಹೇಳಿದ್ದಾರೆ. ವೇದಿಕೆಗಳಲ್ಲಿ ಮಹಿಳೆಯರ ಬಗ್ಗೆ ಉದ್ದುದ್ದ ಭಾಷಣ ಮಾಡುವ ಕಾಂಗ್ರೆಸ್‌ನವರು, ಕೇಂದ್ರ ಸರ್ಕಾರದ ಮಹಿಳಾ ಮೀಸಲಾತಿ ಬಿಲ್ ಅನ್ನು ವಿರೋಧಿಸಿದ್ದರು. ಈಗ ಸಂಪುಟದಲ್ಲಿ ಒಬ್ಬನೇ ಒಬ್ಬ ಮಹಿಳೆಗೆ ಸ್ಥಾನ ನೀಡಿಲ್ಲ. ಇದೇನಾ ಮಹಿಳೆಯರ ಬಗ್ಗೆ ನಿಮಗಿರುವ ಕಾಳಜಿ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಸಂಪುಟ ವಿಸ್ತರಣೆ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ಬಂಡಾಯದ ಕಿಡಿ: ಸಾಲು ಸಾಲು ರಾಜೀನಾಮೆಗೆ ಮುಂದಾದ ಶಾಸಕರು
ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ 183 ಕೋಟಿ ರೂ. ಹಗರಣದಲ್ಲಿ ಭಾಗಿಯಾಗಿ ಜೈಲಿಗೆ ಹೋಗಿ ಬಂದವರನ್ನು ಹಾಗೂ ನ್ಯಾಯಾಲಯಕ್ಕೆ 1,000 ಪುಟಗಳ ಆರೋಪಪಟ್ಟಿ (ಚಾರ್ಜ್‌ಶೀಟ್) ಸಲ್ಲಿಕೆಯಾದವರನ್ನು ಮತ್ತೆ ಸಚಿವರನ್ನಾಗಿ ಮಾಡಿಕೊಳ್ಳಲಾಗಿದೆ. ಇದು ನಿಮ್ಮ ಸರ್ಕಾರ ಭ್ರಷ್ಟಾಚಾರಕ್ಕೆ ನೀಡಿದ ಸಮ್ಮತಿಯನ್ನು ತೋರಿಸುತ್ತದೆ ಎಂದು ಕಿಡಿಕಾರಿದ್ದಾರೆ. ರಾಜ್ಯದ 8 ಜಿಲ್ಲೆಗಳಿಗೆ ಒಂದೇ ಒಂದು ಸಚಿವ ಸ್ಥಾನ ನೀಡಲಾಗಿಲ್ಲ. ಈ ಎಂಟು ಜಿಲ್ಲೆಗಳಲ್ಲಿ ಸಚಿವನಾಗುವ ಅರ್ಹತೆ ಹೊಂದಿರುವ ಒಬ್ಬನೇ ಒಬ್ಬ ಸಮರ್ಥ ಶಾಸಕ ಸಿಗಲಿಲ್ಲವೇ? ಎಐಸಿಸಿ ಅಧ್ಯಕ್ಷರು ತಮ್ಮ ಸ್ವಂತ ಜಿಲ್ಲೆಗೆ ಮೂವರು ಸಚಿವರನ್ನು ನೀಡಿದ್ದಾರೆ. ಆದರೆ ಪಕ್ಕದ ಯಾದಗಿರಿ, ರಾಯಚೂರು, ವಿಜಯನಗರ ಜಿಲ್ಲೆಗಳು ಕಾಂಗ್ರೆಸ್‌ಗೆ ಕಾಣಿಸಲಿಲ್ಲವೇ ಎಂದು ತಾರತಮ್ಯವನ್ನು ಎತ್ತಿ ತೋರಿಸಿದ್ದಾರೆ.
“ಇಂತಹ ಮಹಿಳಾ ವಿರೋಧಿ ಹಾಗೂ ಭ್ರಷ್ಟಾಚಾರ ಪೋಷಣೆ ಮಾಡುವ ಸರ್ಕಾರಕ್ಕೆ ರಾಜ್ಯದ ಜನತೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ” ಎಂದು ವಿಜಯೇಂದ್ರ ಎಚ್ಚರಿಕೆ ನೀಡಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

