ರಾಯ್‌ಪುರ: 2026ರ ಕಾಮನ್‌ವೆಲ್ತ್ ಕ್ರೀಡಾಕೂಟದ ಮಹಿಳೆಯರ 53 ಕೆಜಿ ವೇಟ್‌ಲಿಫ್ಟಿಂಗ್ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದ ಭಾರತದ ವೇಟ್‌ಲಿಫ್ಟರ್ ಜ್ಞಾನೇಶ್ವರಿ ಯಾದವ್ ಅವರನ್ನು ಛತ್ತೀಸ್‌ಗಢ ಮುಖ್ಯಮಂತ್ರಿ ವಿಷ್ಣುದೇವ್ ಸಾಯ್ ಅವರು ಸನ್ಮಾನಿಸಿ ಗೌರವಿಸಿದ್ದಾರೆ.
23 ವರ್ಷದ ಜ್ಞಾನೇಶ್ವರಿ ಯಾದವ್ ಅವರ ಐತಿಹಾಸಿಕ ಸಾಧನೆಯನ್ನು ಶ್ಲಾಘಿಸಿದ ಸಿಎಂ ವಿಷ್ಣುದೇವ್ ಸಾಯ್, ಅವರಿಗೆ ₹30 ಲಕ್ಷ ನಗದು ಬಹುಮಾನ ಹಾಗೂ ಪೊಲೀಸ್ ಇಲಾಖೆಯಲ್ಲಿ ಉಪ ಪೊಲೀಸ್ ವರಿಷ್ಠಾಧಿಕಾರಿ (DSP) ಹುದ್ದೆಗೆ ನೇರ ಬಡ್ತಿ ನೀಡುವುದಾಗಿ ಘೋಷಿಸಿದ್ದಾರೆ.
ತಮ್ಮ ಈ ಗೆಲುವಿನ ಕುರಿತು ಮಾತನಾಡಿದ ಜ್ಞಾನೇಶ್ವರಿ ಯಾದವ್, ಈ ಯಶಸ್ಸಿನ ಹಿಂದೆ ಸಾಗಿದ ಸುದೀರ್ಘ ಹೋರಾಟದ ಹಾದಿಯನ್ನು ಭಾವುಕರಾಗಿ ಹಂಚಿಕೊಂಡಿದ್ದಾರೆ. “ಈ ಸಾಧನೆಯ ಹಿಂದೆ ಅನೇಕ ಕಷ್ಟ-ಸವಾಲುಗಳಿವೆ. ಇದರ ಸಂಪೂರ್ಣ ಶ್ರೇಯಸ್ಸು ನನ್ನ ಪೋಷಕರಿಗೆ ಸಲ್ಲಬೇಕು. ನನ್ನ ತಂದೆ ಸೈಕಲ್‌ನಲ್ಲಿ ಕೂರಿಸಿಕೊಂಡು ನನ್ನನ್ನು ಜಿಮ್‌ಗೆ ಕರೆದುಕೊಂಡು ಹೋಗುತ್ತಿದ್ದ ಕ್ಷಣಗಳು ಇಂದಿಗೂ ನೆನಪಿವೆ. ನಾನು ಭಾರತವನ್ನು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಬೇಕು ಎಂಬುದು ಅವರ ಕನಸಾಗಿತ್ತು.” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಸಂಪುಟ ವಿಸ್ತರಣೆ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ಬಂಡಾಯದ ಕಿಡಿ: ಸಾಲು ಸಾಲು ರಾಜೀನಾಮೆಗೆ ಮುಂದಾದ ಶಾಸಕರು
“ಋತುಚಕ್ರದ ನೋವನ್ನೂ ಮೀರಿ ಗೆದ್ದ ಪದಕ”: ಕ್ರೀಡಾಪಟುವಿನ ಸಾಹಸ ಗಾಥೆ
ಕಾಮನ್‌ವೆಲ್ತ್ ಕ್ರೀಡಾಕೂಟದ ಸ್ಪರ್ಧೆಯ ದಿನ ಅನುಭವಿಸಿದ ಕಠಿಣ ಪರಿಸ್ಥಿತಿಯ ಬಗ್ಗೆ ಜ್ಞಾನೇಶ್ವರಿ ಹೀಗೆ ಹೇಳಿದ್ದಾರೆ. “ಕಾಮನ್‌ವೆಲ್ತ್ ಗೇಮ್ಸ್‌ನ ಮೊದಲ ದಿನವೇ ನನ್ನ ಋತುಚಕ್ರ (Periods) ಆರಂಭವಾಗಿತ್ತು. ಈ ಸ್ಥಿತಿಯಲ್ಲಿ ಸ್ಪರ್ಧಿಸಿದ್ದು ನನಗೆ ಮೊದಲ ಅನುಭವ. ಆದರೆ, ಮೊದಲ ಲಿಫ್ಟ್ (Lift) ಪೂರ್ಣಗೊಳಿಸುತ್ತಿದ್ದಂತೆಯೇ ನನ್ನಲ್ಲಿ ಆತ್ಮವಿಶ್ವಾಸ ಹೆಚ್ಚಾಯಿತು. ಭಾರತಕ್ಕೆ ಪದಕ ಗೆಲ್ಲುವ ನನ್ನ ಗುರಿಯ ಮುಂದೆ ಆ ದೈಹಿಕ ನೋವು ಕೇವಲ ಶೂನ್ಯವೆನಿಸಿತು. “ಸರ್ಕಾರ ನೀಡಿರುವ ಡಿಎಸ್‌ಪಿ ಹುದ್ದೆ ಮತ್ತು ಪ್ರೋತ್ಸಾಹವು ಮುಂದಿನ ದೊಡ್ಡ ಸ್ಪರ್ಧೆಗಳಿಗೆ ಉತ್ತಮವಾಗಿ ಸಿದ್ಧರಾಗಲು ನೆರವಾಗಲಿದೆ. ನನ್ನ ಮುಂದಿನ ಗುರಿ ಏಷ್ಯನ್ ಗೇಮ್ಸ್ (Asian Games). ದೇಶಕ್ಕೆ ಹಾಗೂ ಛತ್ತೀಸ್‌ಗಢಕ್ಕೆ ಮತ್ತಷ್ಟು ಕೀರ್ತಿ ತರಲು ಬಯಸುತ್ತೇನೆ. ಯುವ ಕ್ರೀಡಾಪಟುಗಳು ‘ಖೇಲೋ ಇಂಡಿಯಾ’ ಮತ್ತು ‘ಅಸ್ಮಿತಾ’ದಂತಹ ಸರ್ಕಾರಿ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಬೇಕು.” ಎಂದು ಹೇಳಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

