ದೆಹಲಿ: ಥೈಲ್ಯಾಂಡ್ನ ಫುಕೆಟ್ನಿಂದ ನವದೆಹಲಿಗೆ ಆಗಮಿಸುತ್ತಿದ್ದ ಏರ್ ಇಂಡಿಯಾ ಸಂಸ್ಥೆಯ AI2379 ವಿಮಾನವು ದೆಹಲಿ ವಿಮಾನ ನಿಲ್ದಾಣದಲ್ಲಿ ಇಳಿಯುವ ಕೆಲ ಕ್ಷಣಗಳ ಮೊದಲು ಆಕಾಶದಲ್ಲೇ ದಿಢೀರನೆ ಭಾರಿ ಪ್ರಮಾಣದ ಎತ್ತರವನ್ನು ಕಳೆದುಕೊಂಡಿದೆ (Loss of Altitude). ಈ ಘಟನೆಯಲ್ಲಿ ವಿಮಾನದಲ್ಲಿದ್ದ 17 ಮಂದಿ ಪ್ರಯಾಣಿಕರು ಗಾಯಗೊಂಡಿದ್ದು, ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ.
‘ಏರ್ಬಸ್ A320neo’ ಮಾದರಿಯ ಈ ವಿಮಾನದಲ್ಲಿ 137 ಪ್ರಯಾಣಿಕರು ಹಾಗೂ 8 ಮಂದಿ ಸಿಬ್ಬಂದಿ ಪ್ರಯಾಣಿಸುತ್ತಿದ್ದರು. ಅದೃಷ್ಟವಶಾತ್ ವಿಮಾನವು ದೆಹಲಿಯಲ್ಲಿ ಸುರಕ್ಷಿತವಾಗಿ ಭೂಸ್ಪರ್ಶ ಮಾಡಿದೆ. ಘಟನೆಗೆ ನಿಜವಾದ ಕಾರಣ ಏನೆಂಬುದನ್ನು ಪತ್ತೆಹಚ್ಚಲು ತನಿಖಾಧಿಕಾರಿಗಳು ವಿಮಾನದ ಫ್ಲೈಟ್ ಡಾಟಾ ರೆಕಾರ್ಡರ್ (FDR) ಮತ್ತು ಕಾಕ್ಪಿಟ್ ವಾಯ್ಸ್ ರೆಕಾರ್ಡರ್ (CVR – ಬ್ಲಾಕ್ ಬಾಕ್ಸ್) ಅನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ; ಸೇವಾ ನಿವೃತ್ತ ಯೋಧರ ಪರ ಸಂಸತ್ತಿನಲ್ಲಿ ಧ್ವನಿಯೆತ್ತಿದ ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಶ್ವತ ಪರಿಹಾರಕ್ಕೆ ಒತ್ತಾಯ
ಇಲ್ಲಿದೆ ನೋಡಿ ವಿಡಿಯೋ:
ಘಟನೆಯಲ್ಲಿ ಗಾಯಗೊಂಡ 17 ಪ್ರಯಾಣಿಕರನ್ನು ತಕ್ಷಣವೇ ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಅವರು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ.

