Breaking News

ಬೀಗ ಹಾಕಿದ್ದ ಮನೆಯ ಬಾತ್‌ರೂಮ್‌ನಲ್ಲಿ ಸಿಕ್ತು ಮಹಿಳೆಯ ಅಸ್ಥಿಪಂಜರ

ಬೆಂಗಳೂರು: ರಾಜಧಾನಿ ಬೆಂಗಳೂರು ಉತ್ತರ ತಾಲೂಕಿನ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ಹಾವನೂರು ಬಡಾವಣೆಯಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ಬೆಳಕಿಗೆ ಬಂದಿದೆ. ಸುಮಾರು ಒಂದೂವರೆ ವರ್ಷಗಳ ಹಿಂದೆಯೇ ಮೃತಪಟ್ಟಿದ್ದ ಮಹಿಳೆಯೊಬ್ಬರ ಮೃತದೇಹವು ಬಾತ್‌ರೂಮ್‌ನಲ್ಲಿ ಅಸ್ಥಿಪಂಜರವಾಗಿ ಪತ್ತೆಯಾಗಿದೆ. ಮೃತರನ್ನು ದಾಕ್ಷಾಯಿಣಿ (50) ಎಂದು ಗುರುತಿಸಲಾಗಿದೆ.

ಮೃತ ದಾಕ್ಷಾಯಿಣಿ ಅವರ ಪತಿ ಉಮೇಶ್ ಸುಮಾರು 10 ವರ್ಷಗಳ ಹಿಂದೆಯೇ ನಿಧನರಾಗಿದ್ದರು. ತದನಂತರ ಅನಾರೋಗ್ಯದ ಕಾರಣದಿಂದ ಅವರ ಮಗ ಸಹ ತೀರಿಕೊಂಡಿದ್ದ. ಇದರಿಂದಾಗಿ ಕುಟುಂಬದಲ್ಲಿ ಯಾರೂ ಇಲ್ಲದೆ ದಾಕ್ಷಾಯಿಣಿ ಮನೆಯಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದರು.

ಮಗನ ಸಾವಿನ ನಂತರ ತೀವ್ರ ಮನನೊಂದಿದ್ದ ದಾಕ್ಷಾಯಿಣಿ ಅವರು ಒಂದೂವರೆ ವರ್ಷದ ಹಿಂದೆ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಮನೆ ಒಳಗಿನಿಂದಲೇ ಬಾಗಿಲು ಹಾಕಿಕೊಂಡಿದ್ದರಿಂದ ಮತ್ತು ಸಂಬಂಧಿಕರು ಅಥವಾ ನೆರೆಹೊರೆಯವರು ಗಮನಿಸದಿದ್ದರಿಂದ ಈ ದುರಂತ ಯಾರಿಗೂ ತಿಳಿದಿರಲಿಲ್ಲ.

ಇದನ್ನೂ ಓದಿ: ಉಡುಪಿ ಉದ್ಯಮಿ ಸಂದೀಪ್ ಸಾಲಿಯಾನ್ ಸಾವು ಪ್ರಕರಣಕ್ಕೆ ಟ್ವಿಸ್ಟ್; ಹನಿ ಟ್ರ್ಯಾಪ್ ಜಾಲದ ಮಂಗಳೂರಿನ ಮಹಿಳೆ ಬಂಧನ

ಶುಕ್ರವಾರ ಸಂಜೆ ಮನೆಯ ಮುಖ್ಯ ಬಾಗಿಲು ತೆರೆದಿರುವುದನ್ನು ಗಮನಿಸಿದ ಸ್ಥಳೀಯರು, ಯಾರೋ ಕಳ್ಳರು ಕಳ್ಳತನ ಮಾಡಲು ಮನೆಗೆ ನುಗ್ಗಿರಬಹುದು ಎಂದು ಶಂಕಿಸಿ ತಕ್ಷಣವೇ ತುರ್ತು ನೆರವು ಸಂಖ್ಯೆ 112ಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದರು.ಸ್ಥಳಕ್ಕೆ ಆಗಮಿಸಿದ ಬಾಗಲಗುಂಟೆ ಪೊಲೀಸರು ಮನೆಗೆ ತೆರಳಿ ಪರಿಶೀಲನೆ ನಡೆಸಿದಾಗ ಮನೆಯ ಬಾತ್‌ರೂಮ್‌ನಲ್ಲಿ ದಾಕ್ಷಾಯಿಣಿ ಅವರ ಅಸ್ಥಿಪಂಜರ ಪತ್ತೆಯಾಗಿದೆ.

ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮರಣಕ್ಕೆ ನಿಖರವಾದ ಕಾರಣ ಹಾಗೂ ಸಾವಿನ ಸಮಯವನ್ನು ತಿಳಿಯಲು ಅಸ್ಥಿಪಂಜರವನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (FSL) ರವಾನಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಬಾಗಲಗುಂಟೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *