ಮಂಗಳೂರು: ಕರಾವಳಿ ಹಾಗೂ ಮಲೆನಾಡು ಭಾಗದ ತೋಟಗಾರಿಕಾ ಬೆಳೆಗಾರರು ಎದುರಿಸುತ್ತಿರುವ ಹವಾಮಾನ ವೈಪರೀತ್ಯದ ಸಮಸ್ಯೆಗಳನ್ನು ಲೋಕಸಭೆಯಲ್ಲಿ ಪ್ರಬಲವಾಗಿ ಪ್ರಸ್ತಾಪಿಸಿರುವ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ, ‘ಪುನರ್ ರಚಿತ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ’ಯನ್ನು (RWBCIS) ತುರ್ತಾಗಿ ಮರುಪರಿಷ್ಕರಿಸುವಂತೆ ಕೇಂದ್ರ ಕೃಷಿ ಸಚಿವಾಲಯವನ್ನು ಒತ್ತಾಯಿಸಿದ್ದಾರೆ.
ಲೋಕಸಭೆಯಲ್ಲಿ ನಿಯಮ 377ರಡಿ ವಿಷಯ ಮಂಡಿಸಿದ ಸಂಸದರು, ತೋಟಗಾರಿಕಾ ಬೆಳೆಗಳು ಎದುರಿಸುತ್ತಿರುವ ಸಂಕಷ್ಟಗಳಿಗೆ ಕನಿಷ್ಠ ಬೆಂಬಲ ನೀಡಬೇಕೆಂದು ಮನವಿ ಮಾಡಿದರು. ಅಡಿಕೆ, ತೆಂಗು, ಕೋಕೋ ಮತ್ತು ಸಾಂಬಾರು ಬೆಳೆಗಳು ಸಾಮಾನ್ಯ ಋತುಮಾನದ ಬೆಳೆಗಳಿಗಿಂತ ಭಿನ್ನವಾದ ಸವಾಲುಗಳನ್ನು ಎದುರಿಸುತ್ತವೆ ಎಂದು ಸಂಸದರು ಸದನದಲ್ಲಿ ರೈತರ ಪರವಾಗಿ ಮಾತನಾಡಿದ್ದಾರೆ.
ಇದನ್ನೂ ಓದಿ: ಜಿಲ್ಲಾಮಟ್ಟದ ಪ್ರಬಂಧ ಸ್ಪರ್ಧೆ: ಪುತ್ತೂರು ಶ್ರೀ ರಾಮಕೃಷ್ಣ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಬಹುಮಾನ
ನಿರಂತರ ಮಳೆ, ಅತಿಯಾದ ಆರ್ದ್ರತೆ, ರೋಗಬಾಧೆ ಹಾಗೂ ತೋಟಗಳಲ್ಲಿ ನೀರು ನಿಲ್ಲುವಿಕೆಯಿಂದ ಬೆಳೆಗಳು ನಾಶವಾಗುತ್ತವೆ. ಹತ್ತಿರದ ಹವಾಮಾನ ಕೇಂದ್ರದಲ್ಲಿ ಮಳೆ ಅಥವಾ ತಾಪಮಾನದ ಮಿತಿ ಮೀರದಿದ್ದರೂ, ಸ್ಥಳೀಯ ತೋಟಗಳಲ್ಲಿ ಬೆಳೆ ನಾಶವಾಗುವ ಸಾಧ್ಯತೆಗಳಿರುತ್ತವೆ. ಇಂತಹ ನೈಜ ನಷ್ಟದ ಸ್ವರೂಪಕ್ಕೆ ತಕ್ಕಂತೆ ಪ್ರಸ್ತುತ ವಿಮಾ ಯೋಜನೆಗಳಲ್ಲಿ ಪರಿಹಾರ ಸಿಗುತ್ತಿಲ್ಲ ಎಂದರು.
ರೈತರಿಗೆ ನ್ಯಾಯಯುತ ಪರಿಹಾರ ಸಿಗಲು ಸಂಸದರು ಕೆಲವು ಪ್ರಮುಖ ಸುಧಾರಣೆಗಳನ್ನು ಸೂಚಿಸಿದ್ದಾರೆ. ಕೃಷಿ ವಿಜ್ಞಾನಿಗಳು, ವಿಮಾ ಆಡಿಟರ್‌ಗಳು, ICAR ಸಂಸ್ಥೆಗಳು ಮತ್ತು ವಿವಿಗಳನ್ನು ಒಳಗೊಂಡ ಸಮಿತಿಯ ಮೂಲಕ RWBCIS ಯೋಜನೆಯ ರೂಪುರೇಷೆಯನ್ನು ಹೊಸದಾಗಿ ಸಿದ್ಧಪಡಿಸಬೇಕು. ಹವಾಮಾನ ಕೇಂದ್ರಗಳ ಸಾಂದ್ರತೆ ಹೆಚ್ಚಿಸುವುದು, ಅಧಿಸೂಚಿತ ಯೂನಿಟ್‌ಗಳ ಗಾತ್ರ ಪರಿಷ್ಕರಣೆ, ಮತ್ತು ಪಾರದರ್ಶಕವಾದ ಮಳೆ-ಆರ್ದ್ರತೆ ಮಾನಿಟರಿಂಗ್ ವ್ಯವಸ್ಥೆಯನ್ನು ಜಾರಿಗೆ ತರಬೇಕು ಎಂದರು.
ವಿಮೆ ಪಾವತಿಯ ಮಾಹಿತಿಯನ್ನು ಪಾರದರ್ಶಕವಾಗಿ ಪ್ರಕಟಿಸಬೇಕು ಮತ್ತು ರಾಜ್ಯ ಸರ್ಕಾರಗಳಿಗೆ ಮಾದರಿ ಅಧಿಸೂಚನೆ ಟೆಂಪ್ಲೇಟ್‌ಗಳನ್ನು ಒದಗಿಸಬೇಕು. ರಾಷ್ಟ್ರಮಟ್ಟದಲ್ಲಿ ಜಾರಿಗೆ ತರುವ ಮೊದಲು, ಕರಾವಳಿ ಮತ್ತು ಮಲೆನಾಡಿನ ಆಯ್ದ ಜಿಲ್ಲೆಗಳಲ್ಲಿ ಬೆಳೆ ನಾಶದ ಆಧಾರದ ಮೇಲೆ ಪ್ರಾಯೋಗಿಕವಾಗಿ ಈ ಯೋಜನೆಯನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

