Breaking News

ಕೊಯಿಲ ಸರ್ಕಾರಿ ಪ್ರೌಢಶಾಲೆಯಲ್ಲಿ ವಿಜೃಂಭಣೆಯ ‘ಆಟಿಡೊಂಜಿ ದಿನ’: ಸಾಂಪ್ರದಾಯಿಕ ಆಹಾರ, ಜಾನಪದ ಕಲೆಯ ವೈಭವ

ಪುತ್ತೂರು: ಸರ್ಕಾರಿ ಪ್ರೌಢಶಾಲೆ ಕೊಯಿಲದಲ್ಲಿ ಪ್ರಕೃತಿ ಇಕೋ ಕ್ಲಬ್, ಎನ್‌ಎಸ್‌ಎಸ್ (NSS) ಘಟಕ ಹಾಗೂ ರೋಟರಿ ಇಂಟರಾಕ್ಟ್ ಕ್ಲಬ್‌ನ ಜಂಟಿ ಆಶ್ರಯದಲ್ಲಿ ‘ಆಟಿಡೊಂಜಿ ದಿನ’ ಕಾರ್ಯಕ್ರಮವನ್ನು ಅತ್ಯಂತ ಸಂಭ್ರಮ ಮತ್ತು ವಿಜೃಂಭಣೆಯಿಂದ ಆಯೋಜಿಸಲಾಯಿತು. ಕಾರ್ಯಕ್ರಮಕ್ಕೆ ಆಗಮಿಸಿದ ನಿವೃತ್ತ ಶಿಕ್ಷಕರಾದ ಶ್ರೀ ಬಾಲಕೃಷ್ಣ ಅವರನ್ನು ತಾಂಬೂಲ ನೀಡಿ, ಸಾಂಪ್ರದಾಯಿಕ ‘ಮುಟ್ಟಾಳೆ’ ಇಟ್ಟು ಆತ್ಮೀಯವಾಗಿ ಸ್ವಾಗತಿಸಲಾಯಿತು.

ತುಳುನಾಡಿನ ಗ್ರಾಮೀಣ ಕ್ರೀಡೆಯಾದ ‘ಚೆನ್ನೆಮನೆ’ ಆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಮುಖ್ಯ ಅತಿಥಿ ಬಾಲಕೃಷ್ಣ ಅವರು ಆಟಿ ತಿಂಗಳಿನ ಪೌರಾಣಿಕ, ಸಾಂಸ್ಕೃತಿಕ ಹಾಗೂ ಆರೋಗ್ಯಕರ ಮಹತ್ವದ ಕುರಿತು ವಿದ್ಯಾರ್ಥಿಗಳಿಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು.

ವಿದ್ಯಾರ್ಥಿಗಳು ತಮ್ಮ ಮನೆಗಳಲ್ಲಿ ಆಟಿ ತಿಂಗಳಿಗೆಂದೇ ವಿಶೇಷವಾಗಿ ತಯಾರಿಸಿದ ವಿವಿಧ ಬಗೆಯ ಸಾಂಪ್ರದಾಯಿಕ ಖಾದ್ಯಗಳನ್ನು ಪ್ರದರ್ಶಿಸಿ, ಬಳಿಕ ಎಲ್ಲರೂ ಒಟ್ಟಾಗಿ ಕುಳಿತು ಸಹಭೋಜನ ಸವಿದರು. ಶಾಲಾ ವಿದ್ಯಾರ್ಥಿಗಳಿಂದ ತುಳುನಾಡಿನ ಇತಿಹಾಸ ಸಾರುವ ‘ಪಾಡ್ದನ’ ಗಾಯನ, ಜಾನಪದ ನೃತ್ಯ ಹಾಗೂ ಆಟಿ ತಿಂಗಳ ವಿಶೇಷತೆಯ ಕುರಿತು ಭಾಷಣಗಳು ಜರುಗಿದವು. ಇದೇ ವೇಳೆ ತುಳುನಾಡಿನಲ್ಲಿ ಹಿಂದಿನ ಕಾಲದಲ್ಲಿ ಬಳಸುತ್ತಿದ್ದ ಅಪರೂಪದ ಸಾಂಪ್ರದಾಯಿಕ ಉಪಕರಣಗಳ ಪ್ರದರ್ಶನವೂ ನಡೆಯಿತು.

ಇದನ್ನೂ ಓದಿ,:ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಕೊಡಿಪ್ಪಾಡಿ-ಕುಳ ಘಟಕದ ವತಿಯಿಂದ ಆ.9ರಂದು ಉಚಿತ ವೈದ್ಯಕೀಯ ತಪಾಸಣೆ, ರಕ್ತದಾನ ಶಿಬಿರ

ಕಾರ್ಯಕ್ರಮದ ವೇದಿಕೆಯಲ್ಲಿ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಸೌಜನ್ಯ, ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಜನಾರ್ದನ ಹಾಗೂ ಶಾಲಾ ನಾಯಕ ಸಂಕೇತ್ ಕುಮಾರ್ ಉಪಸ್ಥಿತರಿದ್ದರು. ಶಾಲಾ ಸಾಂಸ್ಕೃತಿಕ ಮಂತ್ರಿಗಳಾದ ಪ್ರಣಮ್ಯ ಕುಲಾಲ್ ಹಾಗೂ ಆಜ್ಞಾ ಜೈನ್ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು. ವಿದ್ಯಾರ್ಥಿ ಕಾರ್ತಿಕ್ ಸ್ವಾಗತಿಸಿದರೆ, ನಿತಿನ್ ವಂದನಾರ್ಪಣೆ ಸಲ್ಲಿಸಿದನು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *