Breaking News

ಖಾಸಗಿ ಬಸ್‌ನ ಫೂಟ್‌ಬೋರ್ಡ್‌ನಲ್ಲಿ ವಿದ್ಯಾರ್ಥಿಯ ಹುಚ್ಚಾಟ; ಬಾಗಿಲಿನಲ್ಲಿ ನೇತಾಡುತ್ತಿರುವ ವಿಡಿಯೋ ವೈರಲ್

ಉಡುಪಿ: ಜೀವದ ಹಂಗು ತೊರೆದು ಖಾಸಗಿ ಬಸ್‌ನ ಫೂಟ್‌ಬೋರ್ಡ್‌ನಲ್ಲಿ ವಿದ್ಯಾರ್ಥಿಯೊಬ್ಬ ಅಪಾಯಕಾರಿ ರೀತಿಯಲ್ಲಿ ನೇತಾಡಿಕೊಂಡು ಪ್ರಯಾಣಿಸುತ್ತಿರುವ ಆಘಾತಕಾರಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವೈರಲ್ ಆಗುತ್ತಿದೆ. ಕಾಪುವಿನಿಂದ ಉಡುಪಿಗೆ ಸಂಚರಿಸುವ ಖಾಸಗಿ ಬಸ್‌ನ ಹಿಂಬದಿಯ ಬಾಗಿಲಿನಲ್ಲಿ ಈ ಘಟನೆ ನಡೆದಿದೆ.

ಈ ನಿರ್ದಿಷ್ಟ ಮಾರ್ಗದಲ್ಲಿ ವಿದ್ಯಾರ್ಥಿಗಳಿಗೆ ಸಂಚರಿಸಲು ಹಲವು ಬಸ್ಸುಗಳ ಸೌಲಭ್ಯವಿದ್ದರೂ, ಈ ವಿದ್ಯಾರ್ಥಿ ಬಸ್‌ನ ಫೂಟ್‌ಬೋರ್ಡ್‌ನಲ್ಲೇ ಅಪಾಯಕಾರಿಯಾಗಿ ನೇತಾಡಿಕೊಂಡು ಪ್ರಯಾಣಿಸುವ ಹುಚ್ಚಾಟ ಮೆರೆದಿದ್ದಾನೆ.ಬಸ್‌ನ ಹಿಂಬದಿಯ ಬಾಗಿಲಿನಲ್ಲಿ ಬಾಲಕ ಅಪಾಯಕಾರಿ ಸ್ಥಿತಿಯಲ್ಲಿದ್ದರೂ ಬಸ್ ನಿರ್ವಾಹಕರು (ಕಂಡಕ್ಟರ್) ಆತನನ್ನು ತಡೆಯದೆ ನಿರ್ಲಕ್ಷ್ಯ ವಹಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಹಿಂಬದಿಯಿಂದ ಬರುತ್ತಿದ್ದ ವಾಹನ ಸವಾರರೊಬ್ಬರು ಈ ದೃಶ್ಯವನ್ನು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ.

ಇದನ್ನೂ ಓದಿ: ಜಿಲ್ಲಾಮಟ್ಟದ ಗಣಿತ-ವಿಜ್ಞಾನ ಮೇಳ: ಶ್ರೀರಾಮ ಶಾಲೆಯ ಸುಧನ್ವ ಕಾಮತ್‌ಗೆ ಪ್ರಥಮ ಸ್ಥಾನ, ರಾಜ್ಯಮಟ್ಟಕ್ಕೆ ಆಯ್ಕೆ

ಖಾಸಗಿ ಬಸ್ಸುಗಳಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಸ್ವಯಂಚಾಲಿತ ಬಾಗಿಲುಗಳನ್ನು (Automatic Doors) ಕಡ್ಡಾಯಗೊಳಿಸಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಹಲವು ಬಾರಿ ಜಾಗೃತಿ ಮತ್ತು ಕಾರ್ಯಾಚರಣೆಗಳನ್ನು ನಡೆಸಿದ್ದರೂ, ಖಾಸಗಿ ಬಸ್ ಮಾಲೀಕರು ಹಾಗೂ ಸಿಬ್ಬಂದಿ ಮಾತ್ರ ನಿಯಮ ಪಾಲಿಸದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ.

ಯಾವುದೇ ಕ್ಷಣದಲ್ಲಾದರೂ ಸಣ್ಣ ತಪ್ಪಿನಿಂದ ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆಯಿದ್ದು, ಈ ರೀತಿ ಪ್ರಾಣಪಣಕ್ಕಿಟ್ಟು ಪ್ರಯಾಣಿಸುವ ವಿದ್ಯಾರ್ಥಿಗಳು ಹಾಗೂ ನಿಯಮ ಉಲ್ಲಂಘಿಸುವ ಬಸ್ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *