Breaking News

ಕಾಡಿನ ನಕ್ಸಲರು ಖಾಲಿಯಾಗಿದ್ದಾರೆ, ಈಗ ‘ದಿಮಾಗಿ ನಕ್ಸಲರ’ ವಿರುದ್ಧ ಹೋರಾಟ”: ಕೆಂಪುಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಎಚ್ಚರಿಕೆ

ದೆಹಲಿ: ದೇಶದ 80ನೇ ಸ್ವಾತಂತ್ರ್ಯ ದಿನಾಚರಣೆಯ ಶುಭ ಸಂದರ್ಭದಲ್ಲಿ ದೆಹಲಿಯ ಐತಿಹಾಸಿಕ ಕೆಂಪುಕೋಟೆಯ ಮಹಾದ್ವಾರದಿಂದ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ದೇಶದ ಶಾಂತಿ ಮತ್ತು ಅಭಿವೃದ್ಧಿಗೆ ಹೊಸ ತಡೆಯಾಗಿರುವ ‘ದಿಮಾಗಿ ನಕ್ಸಲರ’ (ಬೌದ್ಧಿಕ ನಕ್ಸಲರು) ವಿರುದ್ಧ ತೀವ್ರ ಎಚ್ಚರಿಕೆ ನೀಡಿದ್ದಾರೆ.

ಕಾಡಿನಲ್ಲಿ ಬಂದೂಕು ಹಿಡಿದು ಹಿಂಸೆ ನಡೆಸುತ್ತಿದ್ದ ಸಶಸ್ತ್ರ ನಕ್ಸಲರನ್ನು ದೇಶದಿಂದ ಬಹುತೇಕ ನಿರ್ಮೂಲನೆ ಮಾಡಲಾಗಿದೆ. ಆದರೆ ಸಮಾಜದಲ್ಲಿ ಅಶಾಂತಿ ಮತ್ತು ಹಿಂಸೆಯನ್ನು ಪ್ರಚೋದಿಸಲು ಯತ್ನಿಸುತ್ತಿರುವ ‘ದಿಮಾಗಿ ನಕ್ಸಲರನ್ನು’ ಗುರುತಿಸಿ, ಅವರನ್ನು ಪ್ರತ್ಯೇಕಿಸಬೇಕಾಗಿದೆ ಎಂದು ಪ್ರಧಾನಿ ಮೋದಿ ಕರೆ ನೀಡಿದರು.

“ಕೆಂಪು ಭಯೋತ್ಪಾದನೆ (ನಕ್ಸಲಿಸಂ) ದೇಶದ ಹಲವು ಭಾಗಗಳನ್ನು ಬಂದೂಕಿನ ತುದಿಯಲ್ಲಿ ಒತ್ತೆಯಾಳಾಗಿ ಇರಿಸಿಕೊಂಡಿತ್ತು. ನಕ್ಸಲ್ ನಿಗ್ರಹ ಕಾರ್ಯಾಚರಣೆಗಳಲ್ಲಿ ಸಾರ್ವಜನಿಕರ ರಕ್ಷಣೆಗಾಗಿ 3,500ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ಪ್ರಾಣತ್ಯಾಗ ಮಾಡಿದ್ದಾರೆ. ಈ ಸಂಖ್ಯೆಯು ಯುದ್ಧಗಳಲ್ಲಿ ಶಹೀದಾದ ಯೋಧರಿಗಿಂತಲೂ ಹೆಚ್ಚಾಗಿದೆ” ಎಂದು ಪ್ರಧಾನಿ ಸ್ಮರಿಸಿದರು.

“2014ರಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ ದೇಶವನ್ನು ನಕ್ಸಲ ಮುಕ್ತಗೊಳಿಸುವ ಸಂಕಲ್ಪ ಮಾಡಿದ್ದೆವು. ಇಂದು ಮಾವೋವಾದಿ ಹಿಂಸಾಚಾರವು ತನ್ನ ಅಂತಿಮ ಉಸಿರೆಳೆಯುತ್ತಿದ್ದು, ಹಿಂದೆ ನಕ್ಸಲ್ ಪೀಡಿತವಾಗಿದ್ದ ಅನೇಕ ಪ್ರದೇಶಗಳು ಇಂದು ಅಭಿವೃದ್ಧಿಯ ಹಾದಿಯಲ್ಲಿ ಮುನ್ನಡೆಯುತ್ತಿವೆ,” ಎಂದರು.

ಇದನ್ನೂ ಓದಿ: ಮಹಾಲಿಂಗೇಶ್ವರ ಸನ್ನಿಧಿಯಲ್ಲಿ 30 ಕೋಟಿ ರೂ. ಮೌಲ್ಯದ ದೇವಸ್ಥಾನದ ಜಾಗದಲ್ಲಿ ರಸ್ತೆ ನಿರ್ಮಾಣ ಯೋಜನೆ; ಶಾಸಕ ಅಶೋಕ್ ರೈ

“ವರ್ಷಗಳ ಕಾಲ ನಕ್ಸಲ್ ಮನಸ್ಥಿತಿಯ ವ್ಯಕ್ತಿಗಳು ಸರ್ಕಾರದ ಅಧಿಕಾರ ಪಡಸಾಲೆಗಳಲ್ಲಿ, ಸಲಹೆಗಾರರ ಸಮಿತಿಗಳಲ್ಲಿ ಜಾಗ ಪಡೆದಿದ್ದರು. ಅವರ ಚಿಂತನೆಗಳು ಸರ್ಕಾರದ ನೀತಿಗಳ ಮೇಲೆಯೂ ಪ್ರಭಾವ ಬೀರಿದ್ದವು. ನಾವು ಕಾಡಿನ ನಕ್ಸಲರನ್ನು ನಿರ್ಮೂಲನೆ ಮಾಡಿದ್ದೇವೆ. ಆದರೆ, ನಗರಗಳಲ್ಲಿ ಕುಳಿತು ಯುವಕರನ್ನು ಹಾದಿ ತಪ್ಪಿಸಲು ಮತ್ತು ಹಿಂಸಾಚಾರ ಸೃಷ್ಟಿಸಲು ಕಾಯುತ್ತಿರುವ ‘ದಿಮಾಗಿ ನಕ್ಸಲರನ್ನು’ ಗುರುತಿಸಿ, ಅವರಿಂದ ದೇಶದ ಯುವಜನತೆಯನ್ನು ಮುಕ್ತಗೊಳಿಸಿ ಮುಖ್ಯವಾಹಿನಿಗೆ ತರುವುದು ಇಂದಿನ ಅಗತ್ಯವಾಗಿದೆ,” ಎಂದು ಪ್ರತಿಪಾದಿಸಿದರು.

ನಕ್ಸಲೈಟ್ ಸಮಸ್ಯೆಯಿಂದಾಗಿ ಹಿಂದೆ ಅಭಿವೃದ್ಧಿ ತಲುಪದಿದ್ದ ದೇಶದ ಅತ್ಯಂತ ಮೂಲೆಯ ದುರ್ಗಮ ಪ್ರದೇಶಗಳಿಗೂ ಇಂದು ವಿಕಾಸದ ತ್ರಿವರ್ಣ ಧ್ವಜ ತಲುಪಿದೆ ಎಂದು ಪ್ರಧಾನಿ ಹೆಮ್ಮೆಯಿಂದ ಹೇಳಿದರು.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *