Breaking News

ಮಹಾಲಿಂಗೇಶ್ವರ ಸನ್ನಿಧಿಯಲ್ಲಿ 30 ಕೋಟಿ ರೂ. ಮೌಲ್ಯದ ದೇವಸ್ಥಾನದ ಜಾಗದಲ್ಲಿ ರಸ್ತೆ ನಿರ್ಮಾಣ ಯೋಜನೆ; ಶಾಸಕ ಅಶೋಕ್ ರೈ

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸನ್ನಿಧಿಯಲ್ಲಿ ಮತ್ತೊಂದು ವಿವಾದ ತಲೆದೋರಿದೆ. ದೇವಸ್ಥಾನಕ್ಕೆ ಸೇರಿದ ಕೋಟ್ಯಂತರ ರೂಪಾಯಿ ಮೌಲ್ಯದ ಜಾಗದಲ್ಲಿ ಸಾರ್ವಜನಿಕ ರಸ್ತೆ ನಿರ್ಮಿಸಲು ಮುಂದಾಗಿರುವುದು ಇದೀಗ ಭಕ್ತಾದಿಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರ ನೇತೃತ್ವದಲ್ಲಿ ದೇವಸ್ಥಾನ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ರೂಪಿಸಲಾಗುತ್ತಿದ್ದು, ರಸ್ತೆ ನಿರ್ಮಾಣಕ್ಕಾಗಿ ದೇವಸ್ಥಾನಕ್ಕೆ ಸೇರಿದ ಸುಮಾರು ₹30 ಕೋಟಿ ಮೌಲ್ಯದ 3 ಎಕರೆ ಜಾಗವನ್ನು ಬಳಸಲಾಗುತ್ತಿದೆ ಎಂದು ಭಕ್ತರು ಆಪಾದಿಸಿದ್ದಾರೆ.

ರಸ್ತೆ ನಿರ್ಮಾಣದ ಭಾಗವಾಗಿ ವರ್ಷಗಳ ಇತಿಹಾಸ ಹೊಂದಿದ್ದ ‘ನಟರಾಜ ವೇದಿಕೆ’ಯನ್ನು ಈಗಾಗಲೇ ನೆಲಸಮಗೊಳಿಸಲಾಗಿದ್ದು, ಅದೇ ಜಾಗದ ಮೂಲಕ ರಸ್ತೆ ನಿರ್ಮಿಸಲು ತೀರ್ಮಾನಿಸಲಾಗಿದೆ.

ಧಾರ್ಮಿಕ ದತ್ತಿ (ಮುಜರಾಯಿ) ಇಲಾಖೆಯ ವ್ಯಾಪ್ತಿಗೆ ಬರುವ ಕ್ಷೇತ್ರದಲ್ಲಿ ಯಾವುದೇ ಕಾಮಗಾರಿ ನಡೆಸಬೇಕಾದರೆ ಕಡ್ಡಾಯವಾಗಿ ಟೆಂಡರ್ ಪ್ರಕ್ರಿಯೆ ನಡೆಯಬೇಕು. ಆದರೆ, ಇಲ್ಲಿ ಯಾವುದೇ ಟೆಂಡರ್ ಕರೆಯದೇ ಏಕಪಕ್ಷೀಯವಾಗಿ ಕಾಮಗಾರಿ ನಡೆಸಲಾಗುತ್ತಿದೆ ಎಂದು ವಿರೋಧ ವ್ಯಕ್ತವಾಗಿದೆ.

ಅತ್ಯಂತ ಬೆಲೆಬಾಳುವ ದೇವಸ್ಥಾನದ ಜಾಗವನ್ನು ರಸ್ತೆಗೆ ಬಳಸುವ ಬದಲು ರಸ್ತೆ ನಿರ್ಮಾಣಕ್ಕೆ ಪರ್ಯಾಯ ಮಾರ್ಗ ಅಥವಾ ವ್ಯವಸ್ಥೆಯನ್ನು ಕಂಡುಕೊಳ್ಳಬೇಕು ಎಂದು ಭಕ್ತರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಸುಳ್ಯದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಚಾರ್ಜಿಂಗ್ ಕೇಂದ್ರ ನಿರ್ಮಾಣಕ್ಕೆ ಆಗ್ರಹ: ಶಾಸಕರು, ಮೆಸ್ಕಾಂಗೆ ಭಾರತೀಯ ಮಜ್ದೂರ್ ಸಂಘ ಮನವಿ

ಆಡಳಿತ ಮಂಡಳಿಯ ಸ್ಪಷ್ಟನೆ ಮತ್ತು ಸಮರ್ಥನೆ:

ಈ ವಿರೋಧ ಹಾಗೂ ಆರೋಪಗಳಿಗೆ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಹಾಗೂ ಆಡಳಿತ ಮಂಡಳಿ ತಿರುಗೇಟು ನೀಡಿದೆ.”ದಿನದಿಂದ ದಿನಕ್ಕೆ ದೇವಸ್ಥಾನಕ್ಕೆ ಆಗಮಿಸುವ ಭಕ್ತಾದಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಪ್ರಸ್ತುತ ಇರುವ ರಸ್ತೆಯಲ್ಲಿ ವಾಹನ ಸಂಚಾರ ಮತ್ತು ದಟ್ಟಣೆ ನಿಯಂತ್ರಿಸುವುದು ಕಷ್ಟಕರವಾಗಿದೆ. ಭಕ್ತರ ಸುಲಭ ಸಂಚಾರ ಹಾಗೂ ಹಿತದೃಷ್ಟಿಯಿಂದ ಅಗಲವಾದ ರಸ್ತೆಯ ನಿರ್ಮಾಣ ಅತ್ಯಗತ್ಯವಾಗಿದ್ದು, ಈ ಯೋಜನೆಯ ಸಾಕಾರಕ್ಕೆ ಭಕ್ತರು ಸಹಕರಿಸಬೇಕು.” ಎಂದು ಅಧ್ಯಕ್ಷರು, ವ್ಯವಸ್ಥಾಪನಾ ಸಮಿತಿ ಪಂಜಿಗುಡ್ಡೆ ಈಶ್ವರ ಭಟ್ ಹೇಳಿದ್ದಾರೆ.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *