ಚಾಮರಾಜನಗರ : ಜಿಲ್ಲೆಯ ಹನೂರು ತಾಲೂಕಿನ ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯ ಹೊಳೆದಟ್ಟಿ (ಶಾಗ್ಯ ಸಮೀಪ) ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಶಂಕಿತ ಬೇಟೆಗಾರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಮೃತಪಟ್ಟಿದ್ದಾರೆ. ಘಟನೆಯಿಂದ ಆಕ್ರೋಶಗೊಂಡ ಮೃತರ ಸಂಬಂಧಿಕರು ಅರಣ್ಯ ಇಲಾಖೆ ಕಚೇರಿಗೆ ದಾಳಿ ನಡೆಸಿ ಪೀಠೋಪಕರಣ ಧ್ವಂಸಗೊಳಿಸಿದ್ದು, ಪ್ರದೇಶದಲ್ಲಿ ಬಿಗುವಿನ ವಾತಾವರಣ ನೆಲೆಸಿದೆ.
ಅರಣ್ಯದಲ್ಲಿ ನಡೆದಿದ್ದೇನು?
ಶಾಗ್ಯ ವ್ಯಾಪ್ತಿಯ ದಟ್ಟಿ ಅರಣ್ಯ ಪ್ರದೇಶದಲ್ಲಿ ಪ್ರಾಣಿ ಬೇಟೆಯಾಡಿ ಮಾಂಸ ಬೇರ್ಪಡಿಸುತ್ತಿದ್ದಾಗ ಗಸ್ತಿನಲ್ಲಿದ್ದ ಕಾವೇರಿ ವನ್ಯಜೀವಿಧಾಮದ ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ಶಸ್ತ್ರಾಸ್ತ್ರ ಕೆಳಗಿಟ್ಟು ಶರಣಾಗುವಂತೆ ಅರಣ್ಯ ಸಿಬ್ಬಂದಿ ಎಚ್ಚರಿಕೆ ನೀಡಿದರೂ, ಬಂದೂಕಿನಿಂದ ಸಿಬ್ಬಂದಿ ಮೇಲೆಯೇ ದಾಳಿಗೆ ಯತ್ನಿಸಲಾಗಿದೆ ಎಂದು ಹೇಳಲಾಗಿದೆ. ಈ ವೇಳೆ ಸಿಬ್ಬಂದಿ ನಡೆಸಿದ ಪ್ರತಿಯಾಕ್ರಮಣದ (ಕೌಂಟರ್ ಫೈರಿಂಗ್) ಗುಂಡೇಟಿಗೆ ಮೂವರು ಸ್ಥಳದಲ್ಲೇ ಅಸುನೀಗಿದ್ದಾರೆ. ಮೃತಪಟ್ಟವರನ್ನು ಹನೂರು ತಾಲೂಕಿನ ತೋಮಿಯರ್ಪಾಳ್ಯ ಗ್ರಾಮದ ನಿವಾಸಿಗಳಾದ ಕುಮಾರ್, ಆಂಥೋಣಿಸ್ವಾಮಿ ಮತ್ತು ಪೀಟರ್ ಎಂದು ಗುರುತಿಸಲಾಗಿದೆ.
ಕಚೇರಿ ಧ್ವಂಸ & ಸಾರ್ವಜನಿಕರ ಆಕ್ರೋಶ
ಶೂಟೌಟ್ ಸುದ್ದಿ ತಿಳಿಯುತ್ತಿದ್ದಂತೆ ಆಕ್ರೋಶಗೊಂಡ ಮೃತರ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಹನೂರು ತಾಲೂಕಿನ ಶಾಗ್ಯ ಉಪ ವಲಯ ಅರಣ್ಯಾಧಿಕಾರಿ (DRFO) ಕಚೇರಿಗೆ ನುಗ್ಗಿ ಪೀಠೋಪಕರಣಗಳು ಹಾಗೂ ಸೊತ್ತುಗಳನ್ನು ಧ್ವಂಸಗೊಳಿಸಿದ್ದಾರೆ.ಸ್ಥಳದಲ್ಲಿ ಉದ್ವಿಗ್ನತೆ ಹೆಚ್ಚಾಗಿದ್ದು, ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಹೆಚ್ಚಿನ ಪೊಲೀಸ್ ತುಕಡಿಗಳನ್ನು ನಿಯೋಜಿಸಲಾಗಿದೆ.

