ಪುತ್ತೂರು : ನಮ್ಮ ದೇಶದ ಕ್ರಾಂತಿಕಾರಿಗಳ ನೈಜ ಇತಿಹಾಸವನ್ನು ಉದ್ದೇಶಪೂರ್ವಕವಾಗಿ ಮರೆಮಾಚಿ, ಕೇವಲ ಅಹಿಂಸೆಯಿಂದಲೇ ಸ್ವಾತಂತ್ರ್ಯ ದೊರಕಿತು ಎಂಬ ಭಾವನೆಯನ್ನು ಸಮಾಜದಲ್ಲಿ ತುಂಬುವ ಪ್ರಯತ್ನಗಳು ನಡೆದಿವೆ. ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ನಿಜವಾದ ಕ್ರಾಂತಿಕಾರಿಗಳ ಬಲಿದಾನವನ್ನು ಪ್ರತಿಯೊಬ್ಬರೂ ಸ್ಮರಿಸಬೇಕಿದೆ ಎಂದು ಖ್ಯಾತ ವಾಗ್ಮಿ ಶ್ರೀಕಾಂತ ಶೆಟ್ಟಿ ಕಾರ್ಕಳ ಹೇಳಿದರು.
ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರವರ್ತಿತ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಬಪ್ಪಳಿಗೆಯ ಶ್ರೀ ಶಂಕರ ಸಭಾಭವನದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ 80ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಅಹಿಂಸೆಯಿಂದಲೇ ಶತ್ರುಗಳನ್ನು ಸದೆಬಡಿಯಲು ಸಾಧ್ಯವಾಗುತ್ತಿದ್ದರೆ ತ್ರೇತಾಯುಗದಲ್ಲಿ ಶ್ರೀರಾಮ ರಾವಣನ ವಿರುದ್ಧ ಬಿಲ್ಲನ್ನೆತ್ತುತ್ತಿರಲಿಲ್ಲ, ಕಪಿ ಸೈನ್ಯಕ್ಕೆ ಚರಕ ನೀಡಬಹುದಿತ್ತು. ಅದು ಅಸಾಧ್ಯವಾದ ಕಾರಣದಿಂದಲೇ ಧರ್ಮ ಸಂಸ್ಥಾಪನೆಗೆ ಶಸ್ತ್ರ ಹಿಡಿಯಬೇಕಾಯಿತು. ಅಂತೆಯೇ ಕ್ರಾಂತಿಕಾರಿಗಳ ಬಲಿದಾನದಿಂದ ನಮಗೆ ಸ್ವಾತಂತ್ರ್ಯ ದೊರೆತಿದೆ.
ಜಂತರ್ ಮಂತರ್‌ನಲ್ಲಿ ದೇಶದ್ರೋಹಿ ಘೋಷಣೆ ಕೂಗುವ ಕೆಲವರ ನಡೆ ಆತಂಕಕಾರಿಯಾದರೂ, ಇಂದಿನ ಯುವ ಪೀಳಿಗೆಯಲ್ಲಿ (Gen Z) ಭಾರಿ ದೊಡ್ಡ ಸಂಖ್ಯೆಯ ಯುವಕರು ದೇಶಪ್ರೇಮಿಗಳಾಗಿದ್ದಾರೆ ಎಂಬುದು ಆಶಾದಾಯಕ ಸಂಗತಿ. ಜಗತ್ತಿನ ಇತರ ದೇಶಗಳು ಬರೀ ನಕ್ಷೆಯಾದರೆ, ಭಾರತವು ಭಾವನೆಗಳನ್ನೊಳಗೊಂಡ ನಮ್ಮ ಮಾತೆಯಾಗಿದೆ. ಈ ಮಾತೆಯನ್ನು ಆರಾಧಿಸುವ ‘ವಂದೇ ಮಾತರಂ’ ಗೀತೆ ಕೆಂಪುಕೋಟೆಯಲ್ಲಿ ಮೊಳಗುವುದನ್ನು ನೋಡಲು ನಾವು 80 ವರ್ಷ ಕಾಯಬೇಕಾಯಿತು.

ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ ಮಾತನಾಡಿ, “ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಿಂಹಸದೃಶರಾಗಿ ಬ್ರಿಟಿಷರ ವಿರುದ್ಧ ಹೋರಾಡಿದ್ದರು. ಆ ಮಾದರಿ ಹಾಗೂ ಆದರ್ಶಗಳನ್ನು ನಮ್ಮ ಶಾಲಾ ಮಕ್ಕಳಿಗೆ ನೆನಪಿಸಿಕೊಡುವ ಕಾರ್ಯ ಸದಾ ನಡೆಯಬೇಕು,” ಎಂದರು.
ಇದನ್ನೂ ಓದಿ: ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯಲ್ಲಿ ವೈಭವದ ‘ಆಟಿದ ಕೂಟ’: ಹಿರಿಯರ ನಂಬಿಕೆ, ಪರಂಪರೆಯರಿತ ವಿದ್ಯಾರ್ಥಿಗಳು
ಝೀ ಕನ್ನಡ ವಾಹಿನಿಯ ‘ಲಿಟಲ್ ಚಾಂಪಿಯನ್’ ಸಂಗೀತ ಸ್ಪರ್ಧೆಯಲ್ಲಿ ಮೆಚ್ಚುಗೆ ಗಳಿಸಿದ ಅಂಬಿಕಾ ವಿದ್ಯಾಲಯ ಸಿಬಿಎಸ್ಇ ಸಂಸ್ಥೆಯ ವಿದ್ಯಾರ್ಥಿ ಸನ್ಮಯ್ ಹಾಗೂ ಅವರ ಪೋಷಕರನ್ನು ಈ ಸಂದರ್ಭದಲ್ಲಿ ಗೌರವಿಸಿ ಸನ್ಮಾನಿಸಲಾಯಿತು.ವೇದಿಕೆಯಲ್ಲಿ ಸಂಸ್ಥೆಯ ಕಾರ್ಯದರ್ಶಿ ರಾಜಶ್ರೀ ಎಸ್ ನಟ್ಟೋಜ, ವಿಶ್ರಾಂತ ಪ್ರಾಚಾರ್ಯ ಡಾ. ಎಚ್. ಮಾಧವ ಭಟ್, ಸುರೇಶ್ ಶೆಟ್ಟಿ ಕೆ., ಪಿಟಿಎ ಅಧ್ಯಕ್ಷೆ ಸ್ವಾತಿ ಜೆ. ರೈ, ಪ್ರಾಚಾರ್ಯರು ಹಾಗೂ ಶಿಕ್ಷಕ-ಶಿಕ್ಷಕೇತರ ವೃಂದ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮಕ್ಕೂ ಮುನ್ನ ಸಂಸ್ಥೆಯ ನೆಲ್ಲಿಕಟ್ಟೆ ಹಾಗೂ ಬಪ್ಪಳಿಗೆ ಕ್ಯಾಂಪಸ್‌ಗಳಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು. ತದನಂತರ ಎರಡೂ ಕ್ಯಾಂಪಸ್‌ಗಳಿಂದ ಕಿಲ್ಲೆ ಮೈದಾನದವರೆಗೆ ವಿದ್ಯಾರ್ಥಿಗಳಿಂದ ಭವ್ಯ ಮೆರವಣಿಗೆ ನಡೆದು, ಮಂಗಲ್ ಪಾಂಡೆ ಚೌಕದಲ್ಲಿ ನಡೆದ ಸರ್ಕಾರಿ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಿದರು. ವಿದ್ಯಾರ್ಥಿನಿ ಶ್ರೇಯಾ ಎಂ.ಎಸ್. ಸ್ವಾಗತಿಸಿ, ಲಾವಣ್ಯ ಎಸ್.ಬಿ. ಅತಿಥಿ ಪರಿಚಯಿಸಿದರು. ತನುಷ್ ವಂದಿಸಿ, ಅಙ್ಯಾ ವಿ.ಕೆ, ಸಿಂಚನಾ ಎ ನಿರೂಪಿಸಿದರು.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

