ಪುತ್ತೂರು: ತುಳುನಾಡಿನ ಜನರು ಆಷಾಢ ಮಾಸದಲ್ಲಿ ಒಟ್ಟುಗೂಡಿ ಆಚರಿಸುವ ‘ಆಟಿದ ಕೂಟ’ವು ಕೇವಲ ಸಾಂಪ್ರದಾಯಿಕ ತಿಂಡಿ-ತಿನಿಸುಗಳನ್ನು ಸವಿಯುವ ಕೂಟವಲ್ಲ; ಅದು ನಮ್ಮ ಹಿರಿಯರು ಪ್ರಕೃತಿ ಮತ್ತು ಔಷಧೀಯ ಗುಣಗಳುಳ್ಳ ಆಹಾರದ ಮೂಲಕ ಆರೋಗ್ಯವನ್ನು ಸಮತೋಲನದಲ್ಲಿಟ್ಟುಕೊಂಡ ವಿಶೇಷ ಜೀವನಕ್ರಮ ಎಂದು ನ್ಯಾಯವಾದಿ ಹಾಗೂ ದೈವಾರಾಧನೆಯ ಮಧ್ಯಸ್ಥ ತೇಜಸ್ ನಾಯ್ಕ್ ಅಭಿಪ್ರಾಯಪಟ್ಟರು.
ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರವರ್ತಿತ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿ.ಬಿ.ಎಸ್.ಇ. ಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ ‘ಆಟಿದ ಕೂಟ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ತೆಂಗಿನ ಕೊಂಬನ್ನು ಅರಳಿಸುವುದರ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಆಟಿ ಅಮಾವಾಸ್ಯೆಯಂದು ಹಿರಿಯರು ಮುಂಜಾನೆ ಹಾಲೆಮರದ ಬಳಿ ತೆರಳಿ ಪ್ರಾರ್ಥಿಸಿ, ಅದರ ಕೆತ್ತೆಯಿಂದ ಕಷಾಯ ತಯಾರಿಸಿ ಕುಡಿದು ದೇಹವನ್ನು ಸದೃಢವಾಗಿಡುತ್ತಿದ್ದರು ಎಂದು ತೇಜಸ್ ನಾಯ್ಕ್ ಸ್ಮರಿಸಿದರು. ತುಳುನಾಡನ್ನು ರಕ್ಷಿಸುವ ಆಟಿ ಕಳಂಜ ಮನೆಗೆ ಬಂದಾಗ ನೀಡುವ ಅಕ್ಕಿ, ಬೆಲ್ಲಗಳನ್ನು ಆತ ದೇವರಿಗೆ ಅರ್ಪಿಸುತ್ತಾನೆ ಎಂಬ ನಂಬಿಕೆ ಹಿರಿಯರಲ್ಲಿದ್ದು, ಇಂತಹ ನಂಬಿಕೆಗಳನ್ನು ಇಂದಿನ ಪೀಳಿಗೆ ಅರಿತುಕೊಳ್ಳಬೇಕು ಎಂದರು.
ಇದನ್ನೂ ಓದಿ: ಕೊಯಿಲ ಸರ್ಕಾರಿ ಪ್ರೌಢಶಾಲೆಯಲ್ಲಿ ವಿಜೃಂಭಣೆಯ ‘ಆಟಿಡೊಂಜಿ ದಿನ’: ಸಾಂಪ್ರದಾಯಿಕ ಆಹಾರ, ಜಾನಪದ ಕಲೆಯ ವೈಭವ
ಸಂಸ್ಥೆಯ ಪ್ರಾಂಶುಪಾಲೆ ಮಾಲತಿ ಡಿ. ಮಾತನಾಡಿ, ನಮ್ಮ ಹಿರಿಯರು ಅಪಾರ ಸೂಕ್ಷ್ಮತೆ ಹಾಗೂ ದೈವಿಕ ಶಕ್ತಿಯಲ್ಲಿ ನಂಬಿಕೆ ಹೊಂದಿದ್ದರು, ಅಂತಹ ಮೌಲ್ಯಗಳನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು. ಸಭಾ ಕಾರ್ಯಕ್ರಮದ ಬಳಿಕ ನಡೆದ ಸಾಂಸ್ಕೃತಿಕ ಕಲಾಕಲರವವು ಆಟಿ ಕಳಂಜನ ಪ್ರವೇಶದೊಂದಿಗೆ ಆರಂಭಗೊಂಡಿತು. ತುಳುನಾಡಿನ ವೈಭವವನ್ನು ಸಾರುವ ಕಂಗೀಲು ನೃತ್ಯ ಹಾಗೂ ವಿವಿಧ ತುಳು ನೃತ್ಯ ಪ್ರದರ್ಶನಗಳು ಪ್ರೇಕ್ಷಕರ ಮನಸೂರೆಗೊಂಡವು.
ಇದೇ ವೇಳೆ 8ನೇ ತರಗತಿಯ ವಿದ್ಯಾರ್ಥಿ ತರುಣ್ ಡಿ. ಸ್ಥಳದಲ್ಲೇ ತುಳುನಾಡಿನ ಕಾರಣಿಕ ದೈವ ಕೊರಗಜ್ಜನ ಚಿತ್ರವನ್ನು ಬಿಡಿಸಿ ಸಭಿಕರ ಮೆಚ್ಚುಗೆಗೆ ಪಾತ್ರನಾದನು. ವೇದಿಕೆಯಲ್ಲಿ ಉಪ ಪ್ರಾಂಶುಪಾಲೆ ಸುಜನಿ ಬೋರ್ಕರ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ರತುಲ್ ಅದ್ವೈತ ಕೆ. ಪ್ರಾರ್ಥಿಸಿ, ವಂಶಿಕಾ ಬಿ. ರೈ ಸ್ವಾಗತಿಸಿದರು. ಕೀರ್ತಿಕಾ ಎಸ್. ಆಚಾರ್ಯ ವಂದಿಸಿ, ಹೃಣ್ಮಯಿ ಎಸ್. ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

