Breaking News

ವಿಶಾಖಪಟ್ಟಣಂನಲ್ಲಿ ಘೋರ ದುರಂತ: ಹೋಮ್‌ವರ್ಕ್ ಮಾಡಿಲ್ಲವೆಂದು ಹೊಡೆದ ಶಿಕ್ಷಕಿ, 6 ವರ್ಷದ ಬಾಲಕ ಸಾವು

ವಿಶಾಖಪಟ್ಟಣಂ : ಆಂಧ್ರಪ್ರದೇಶದ ವಿಶಾಖಪಟ್ಟಣಂನ ಖಾಸಗಿ ಶಾಲೆಯೊಂದರಲ್ಲಿ ಹೋಮ್‌ವರ್ಕ್  ಮಾಡಿಲ್ಲವೆಂಬ ಕಾರಣಕ್ಕೆ ಶಿಕ್ಷಕಿಯೊಬ್ಬರು ತೀವ್ರವಾಗಿ ಥಳಿಸಿದ್ದರಿಂದ 6 ವರ್ಷದ ಬಾಲಕನೊಬ್ಬ ತರಗತಿಯಲ್ಲೇ ಕುಸಿದುಬಿದ್ದು ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ವರದಿಯಾಗಿದೆ.

ವಿಶಾಖಪಟ್ಟಣಂನ ‘ಲಿಟಲ್ ಗಾರ್ಡನ್ ಸ್ಕೂಲ್’ ಎಂಬ ಖಾಸಗಿ ಶಾಲೆಯ ಯುಕೆಜಿ (UKG) ವಿದ್ಯಾರ್ಥಿ ಪ್ರಣಯ್ ತೇಜ (6) ಮೃತಪಟ್ಟ ಬಾಲಕ. ತರಗತಿ ಕೊಠಡಿಯ ಸಿಸಿಟಿವಿ (CCTV) ದೃಶ್ಯಾವಳಿಗಳಲ್ಲಿ ಶಿಕ್ಷಕಿಯು ಬಾಲಕನಿಗೆ ಬೆತ್ತದಿಂದ ಹೊಡೆಯುವುದು ಹಾಗೂ ಕ್ಷಣಾರ್ಧದಲ್ಲೇ ಬಾಲಕ ಕುಸಿದು ಕೆಳಗೆ ಕುಸಿದುಬೀಳುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

Video:

ಮಗುವನ್ನು ತಕ್ಷಣವೇ ಕಿಂಗ್ ಜಾರ್ಜ್ ಆಸ್ಪತ್ರೆಗೆ (KGH) ಕರೆದೊಯ್ಯಲಾಯಿತಾದರೂ, ಆ ವೇಳೆಗೆ ಮಗು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಬೆಳಿಗ್ಗೆ ಆರೋಗ್ಯವಾಗಿಯೇ ಶಾಲೆಗೆ ತೆರಳಿದ್ದ ಮಗುವಿನ ಸಾವಿಗೆ ಶಿಕ್ಷಕಿಯ ದೌರ್ಜನ್ಯವೇ ಕಾರಣ ಎಂದು ಪೋಷಕರು ಮತ್ತು ಸಂಬಂಧಿಕರು ಆರೋಪಿಸಿದ್ದು, ಶಾಲೆಯ ಮುಂಭಾಗ ಪ್ರತಿಭಟನೆ ನಡೆಸಿ ಶಿಕ್ಷಕಿಯ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. ಶಾಲೆಯ ಆಡಳಿತ ಮಂಡಳಿಯು ಮಗುವಿನ ಸಾವಿನ ಬಗ್ಗೆ ತಮಗೆ ತಕ್ಷಣ ಮಾಹಿತಿ ನೀಡದೆ ಮುಚ್ಚಿಡಲು ಯತ್ನಿಸಿದೆ ಎಂದೂ ಮೃತನ ತಂದೆ ದೂರಿದ್ದಾರೆ.

ಇದನ್ನೂ ಓದಿ: ಕಾಡಿನ ನಕ್ಸಲರು ಖಾಲಿಯಾಗಿದ್ದಾರೆ, ಈಗ ‘ದಿಮಾಗಿ ನಕ್ಸಲರ’ ವಿರುದ್ಧ ಹೋರಾಟ”: ಕೆಂಪುಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಎಚ್ಚರಿಕೆ

ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮರಣೋತ್ತರ ಪರೀಕ್ಷೆಯ (Post-Mortem) ವರದಿ ಬಂದ ನಂತರ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಕಂದಾಯ ವಿಭಾಗೀಯ ಅಧಿಕಾರಿಗಳು (RDO) ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಸಮಗ್ರ ಪರಿಶೀಲನೆ ನಡೆಸುತ್ತಿದ್ದಾರೆ.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *