ಢಾಕಾ: ಬಾಂಗ್ಲಾದೇಶದ ಆಡಳಿತಾರೂಢ ‘ಬಾಂಗ್ಲಾದೇಶ ನ್ಯಾಷನಲ್ ಪಾರ್ಟಿ’ (BNP) ಜೇಷ್ಠ ನಾಯಕ ಮಿರ್ಜಾ ಫಖ್ರುಲ್ ಇಸ್ಲಾಂ ಆಲಂಗೀರ್ ಅವರು ಗುರುವಾರ ದೇಶದ 23ನೇ ಅಧ್ಯಕ್ಷರಾಗಿ ಸಂಸತ್ತಿನಲ್ಲಿ (Jatiya Sangsad) ನಡೆದ ಚುನಾವಣೆಯಲ್ಲಿ ನೂತನವಾಗಿ ಆಯ್ಕೆಯಾಗಿದ್ದಾರೆ.
78 ವರ್ಷದ ಮಿರ್ಜಾ ಫಖ್ರುಲ್ ಆಲಂಗೀರ್ ಅವರು 255 ಸಂಸದರ ಮತಗಳನ್ನು ಪಡೆಯುವ ಮೂಲಕ ಪ್ರಚಂಡ ಜಯ ಸಾಧಿಸಿದರು. ಜಮಾತ್-ಎ-ಇಸ್ಲಾಮಿ ನೇತೃತ್ವದ 11 ಪಕ್ಷಗಳ ಒಕ್ಕೂಟದ ಅಭ್ಯರ್ಥಿ ನಿವೃತ್ತ ಕರ್ನಲ್ ಒಲಿ ಅಹಮದ್ 88 ಮತಗಳನ್ನು ಪಡೆದು ಪರಾಭವಗೊಂಡರು ಎಂದು ಮುಖ್ಯ ಚುನಾವಣಾ ಆಯುಕ್ತ ಎ.ಎಮ್.ಎಮ್. ನಾಸಿರ್ ಉದ್ದೀನ್ ತಿಳಿಸಿದ್ದಾರೆ.
ಅಧ್ಯಕ್ಷೀಯ ಹುದ್ದೆಗೆ ಬಹು ಅಭ್ಯರ್ಥಿಗಳು ಸ್ಪರ್ಧಿಸಿದ್ದು ಸುಮಾರು 35 ವರ್ಷಗಳ ಸುದೀರ್ಘ ಅವಧಿಯ ನಂತರ ಇದೇ ಮೊದಲಾಗಿದೆ. ಶೇಖ್ ಹಸೀನಾ ಅವರ ಆಪ್ತರಾಗಿದ್ದ ಮಾಜಿ ಅಧ್ಯಕ್ಷ ಮೊಹಮ್ಮದ್ ಶಹಾಬುದ್ದೀನ್ (ಚುಪ್ಪು) ಅವರು ಜುಲೈನಲ್ಲಿ ಆರೋಗ್ಯದ ಕಾರಣ ನೀಡಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು.
ಇದನ್ನೂ ಓದಿ: ಖಾಂಡ್ವಾದಲ್ಲಿ ವಿನೂತನ ಪ್ರತಿಭಟನೆ: ಶ್ವಾನದ ವೇಷದಲ್ಲೇ ಜಿಲ್ಲಾಧಿಕಾರಿ ಕಚೇರಿಗೆ ಬಂದ ವ್ಯಕ್ತಿ
2024 ರಲ್ಲಿ ಶೇಖ್ ಹಸೀನಾ ಸರ್ಕಾರ ಪತನಗೊಂಡ ನಂತರ 2026 ರ ಫೆಬ್ರವರಿಯಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ತಾರಿಖ್ ರಹಮಾನ್ ನೇತೃತ್ವದ ಬಿಎನ್‌ಪಿ ಪಕ್ಷವು ಭಾರೀ ಜಯಗಳಿಸಿ ಅಧಿಕಾರಕ್ಕೆ ಬಂದಿತ್ತು. 1948 ರಲ್ಲಿ ಜನಿಸಿದ ಆಲಂಗೀರ್, 1969 ರ ವಿದ್ಯಾರ್ಥಿ ಚಳವಳಿ ಹಾಗೂ 1971 ರ ಬಾಂಗ್ಲಾದೇಶ ವಿಮೋಚನಾ ಸಂಗ್ರಾಮದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಹಸೀನಾ ಅವರ ಸರ್ವಾಧಿಕಾರಿ ಆಡಳಿತದ ಅವಧಿಯಲ್ಲಿ ಇವರು ಹಲವು ರಾಜಕೀಯ ಸುಳ್ಳು ಪ್ರಕರಣಗಳನ್ನು ಎದುರಿಸಿ, ಜೈಲು ಶಿಕ್ಷೆಗೂ ಗುರಿಯಾಗಿದ್ದರು.

