ಮಂಗಳೂರು : ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಹಾಗೂ ಉಡುಪಿಯಲ್ಲಿ ಆಗಸ್ಟ್ 25ರ ಮಂಗಳವಾರದಂದೇ ಈದ್ ಮಿಲಾದ್ (Eid-e-Milad) ಹಬ್ಬವನ್ನು ಆಚರಿಸಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಎರಡೂ ಜಿಲ್ಲೆಗಳಿಗೆ ಆಗಸ್ಟ್ 25 ರಂದು ಸಾರ್ವತ್ರಿಕ ರಜೆ (Local Holiday) ಘೋಷಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ರಾಜ್ಯದಾದ್ಯಂತ ಆಗಸ್ಟ್ 26ರ ಬುಧವಾರದಂದು ಈದ್ ಮಿಲಾದ್ ಸಾರ್ವತ್ರಿಕ ರಜೆ ನಿಗದಿಯಾಗಿತ್ತು. ಆದರೆ ಚಂದ್ರ ದರ್ಶನದ ಆಧಾರದ ಮೇಲೆ ಕರಾವಳಿ ಭಾಗದಲ್ಲಿ ಆ.25 ರಂದೇ ಹಬ್ಬ ಆಚರಿಸಲಾಗುತ್ತಿರುವುದರಿಂದ ರಜೆ ದಿನಾಂಕ ಬದಲಾಯಿಸುವಂತೆ ಜಿಲ್ಲಾಡಳಿತಗಳು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದವು.
ಕರಾವಳಿಯಲ್ಲಿ ನಾಳೆಯೇ (ಆ.25) ಈದ್ ಮಿಲಾದ್ ಆಚರಿಸಲ್ಪಡುವ ಕಾರಣ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾಧಿಕಾರಿಗಳು ಸಲ್ಲಿಸಿದ ಮನವಿಯನ್ನು ಆಲಿಸಿದ ರಾಜ್ಯ ಸರ್ಕಾರವು ಆ.25 ರಂದು ಕರಾವಳಿಯ ಎರಡೂ ಜಿಲ್ಲೆಗಳಿಗೆ ಸಾರ್ವತ್ರಿಕ ರಜೆ ಘೋಷಿಸಿದೆ.
ಇದನ್ನೂ ಓದಿ: ಪುತ್ತೂರು ಹಲ್ಲೆ ಪ್ರಕರಣ: ತಾವು ಏನೂ ಮಾಡಿದರೂ ನಮ್ಮ ಬೆಂಬಲಕ್ಕೆ ಸರ್ಕಾರ ಇದೆ ಎಂಬ ಧೈರ್ಯ ಅವರಿಗೆ: ಕಟೀಲ್ ಆಕ್ರೋಶ
ಈ ರಜೆ ಬದಲಾವಣೆಯ ಹಿನ್ನೆಲೆಯಲ್ಲಿ, ಕರಾವಳಿ ಜಿಲ್ಲೆಗಳಲ್ಲಿ ಆಗಸ್ಟ್ 26 ರಂದು ಸರ್ಕಾರಿ ಕಚೇರಿಗಳು ಹಾಗೂ ಶಾಲಾ-ಕಾಲೇಜುಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ. ರಾಜ್ಯದ ಇತರೆ ಜಿಲ್ಲೆಗಳಲ್ಲಿ ಆ.26 ರಂದೇ ಈದ್ ಮಿಲಾದ್ ಸಾರ್ವತ್ರಿಕ ರಜೆ ಮುಂದುವರಿಯಲಿದೆ.

