Breaking News

ರಾತ್ರಿ ವೇಳೆ ಪಟಾಕಿ ಸಿಡಿಸುವವರ ವಿರುದ್ಧ ಖಡಕ್ ಕ್ರಮಕ್ಕೆ ಆಗ್ರಹ: ಬೆಂಗಳೂರು ಪೊಲೀಸರಿಗೆ ಶಾಸಕ ಎಸ್. ಸುರೇಶ್ ಕುಮಾರ್ ಪತ್ರ

ಬೆಂಗಳೂರು: ರಾಜಾಜಿನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ರಾತ್ರಿ ವೇಳೆಯಲ್ಲಿ ಅಕ್ರಮವಾಗಿ ಪಟಾಕಿ ಸಿಡಿಸಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿರುವವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಮಾಜಿ ಸಚಿವರೂ ಹಾಗೂ ರಾಜಾಜಿನಗರ ಶಾಸಕರಾದ ಎಸ್. ಸುರೇಶ್ ಕುಮಾರ್ ಅವರು ಬೆಂಗಳೂರು ನಗರ ಪಶ್ಚಿಮ ವಿಭಾಗದ ಡೆಪ್ಯೂಟಿ ಕಮಿಷನರ್ ಆಫ್ ಪೊಲೀಸ್ (DCP) ಅವರಿಗೆ ಸುದೀರ್ಘ ಪತ್ರ ಬರೆದಿದ್ದಾರೆ.

ಬಸವೇಶ್ವರನಗರ ಹಾಗೂ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ರಾತ್ರಿ 9:00 ಗಂಟೆಯ ನಂತರ ನಿರಂತರವಾಗಿ ಪಟಾಕಿ ಸಿಡಿಸಲಾಗುತ್ತಿದ್ದು, ಇದರಿಂದ ವಯೋವೃದ್ಧರು, ಎಳೆಯ ಮಕ್ಕಳು ಹಾಗೂ ರೋಗಿಗಳಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಪತ್ರದಲ್ಲಿ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ಜೂನ್ 21, ಜುಲೈ 21 ಹಾಗೂ ಜುಲೈ 26, 2026 ರಂದು ಸಹಾಯಕ ಪೊಲೀಸ್ ಆಯುಕ್ತರಿಗೆ (ACP) ವಾಟ್ಸಾಪ್ (WhatsApp) ಮೂಲಕ ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ದರೂ, ಇತ್ತೀಚೆಗೂ ರಾತ್ರಿ ವೇಳೆ ಇದೇ ರೀತಿಯ ಕೆಟ್ಟ ಅನುಭವ ಮರುಕಳಿಸಿದೆ ಎಂದು ಸುರೇಶ್ ಕುಮಾರ್ ಉಲ್ಲೇಖಿಸಿದ್ದಾರೆ. ಹೊಸ ವರ್ಷದ ಆಚರಣೆ, ಐಪಿಎಲ್ ಪಂದ್ಯಗಳ ವಿಜಯೋತ್ಸವ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ವಿಶೇಷ ಸಂದರ್ಭಗಳಲ್ಲಿ ಪಟಾಕಿ ಸಿಡಿಸುವುದನ್ನು ಸಹಿಸಿಕೊಳ್ಳಬಹುದು. ಆದರೆ, ಸಾಮಾನ್ಯ ದಿನಗಳಲ್ಲೂ ರಾತ್ರಿ ವೇಳೆ ಸಾರ್ವಜನಿಕರು ಮಲಗಿರುವ ಸಮಯದಲ್ಲಿ ಪಟಾಕಿ ಸಿಡಿಸುವುದರಿಂದ ತೀವ್ರ ತೊಂದರೆಯಾಗುತ್ತಿದೆ.

ಇದನ್ನೂ ಓದಿ,:ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಕೊಡಿಪ್ಪಾಡಿ-ಕುಳ ಘಟಕದ ವತಿಯಿಂದ ಆ.9ರಂದು ಉಚಿತ ವೈದ್ಯಕೀಯ ತಪಾಸಣೆ, ರಕ್ತದಾನ ಶಿಬಿರ

ಈ ಸಮಸ್ಯೆಯ ಕುರಿತು ಹಿರಿಯ ಪೊಲೀಸ್ ಅಧಿಕಾರಿಗಳಾದ ಶ್ರೀ ಅಲೋಕ್ ಕುಮಾರ್ ಹಾಗೂ ಶ್ರೀ ಶರತ್ ಚಂದ್ರ ಅವರೊಂದಿಗೆ ಮಾತನಾಡಿದ್ದು, ಶರತ್ ಚಂದ್ರ ಅವರು ತಮ್ಮ ನಿವಾಸದ ಬಳಿಯೂ ತಮಗುಂಟಾದ ಇದೇ ರೀತಿಯ ಅನುಭವವನ್ನು ಹಂಚಿಕೊಂಡಿದ್ದರು ಹಾಗೂ ‘ಹೊಯ್ಸಳ’ ಗಸ್ತು ಪಡೆಯನ್ನು ಕಳುಹಿಸಿ ಕ್ರಮ ಕೈಗೊಂಡಿರುವುದಾಗಿ ತಿಳಿಸಿದ್ದರು. ಸಾರ್ವಜನಿಕ ಮತ್ತು ನಾಗರಿಕರ ಹಿತದೃಷ್ಟಿಯಿಂದ ಈ ರೀತಿಯ ಸ್ವೈಚ್ಛಾಚಾರಕ್ಕೆ ಪೊಲೀಸರು ತಕ್ಷಣವೇ ಕಡಿವಾಣ ಹಾಕಬೇಕು. ಸಂಬಂಧಪಟ್ಟ ಪೊಲೀಸ್ ಠಾಣಾಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿ, ರಾತ್ರಿ ವೇಳೆಯಲ್ಲಿ ಅಕ್ರಮವಾಗಿ ಪಟಾಕಿ ಸಿಡಿಸುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಶಾಸಕರು ವಿನಂತಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Leave a Reply

Your email address will not be published. Required fields are marked *