ಬೆಂಗಳೂರು: ಕರ್ನಾಟಕದಲ್ಲಿ ವಿವಿಧ ಅಪರಾಧ ಪ್ರಕರಣಗಳನ್ನು ಎದುರಿಸುತ್ತಿರುವ 365 ವಿದೇಶಿ ಪ್ರಜೆಗಳ ವಿವರಗಳನ್ನು ರಾಜ್ಯ ಪ್ರಾಸಿಕ್ಯೂಷನ್ ಇಲಾಖೆ (Department of Prosecution) ಪರಿಶೀಲಿಸುತ್ತಿದೆ. 7 ವರ್ಷಕ್ಕಿಂತ ಕಡಿಮೆ ಶಿಕ್ಷೆ ಹೊಂದಿರುವ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ವಿದೇಶಿಗರ ಮೇಲಿನ ಮೊಕದ್ದಮೆಗಳನ್ನು ವಾಪಸ್ ಪಡೆದು, ಅವರನ್ನು ಅವರ ದೇಶಗಳಿಗೆ ಗಡೀಪಾರು (Deportation) ಮಾಡಲು ಕೇಂದ್ರ ಗೃಹ ಸಚಿವಾಲಯ ನೀಡಿದ ನಿರ್ದೇಶನದ ಮೇರೆಗೆ ಈ ಪ್ರಕ್ರಿಯೆ ಆರಂಭವಾಗಿದೆ.
ಗೃಹ ಇಲಾಖೆಯ ಮಾಹಿತಿಯಂತೆ, ರಾಜ್ಯದಲ್ಲಿ 365 ವಿದೇಶಿ ಪ್ರಜೆಗಳು ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಒಟ್ಟು ಪ್ರಕರಣಗಳ ಪೈಕಿ ಶೇ. 60 ರಿಂದ 70 ರಷ್ಟು ವಿದೇಶಿಗರು ಎನ್‌ಡಿಪಿಎಸ್ (NDPS) ಅಥವಾ ಮಾದಕದ್ರವ್ಯ ಕಾಯ್ದೆಯಡಿ ಪ್ರಕರಣ ಎದುರಿಸುತ್ತಿದ್ದಾರೆ.
2 ಕೊಲೆ ಪ್ರಕರಣಗಳು, 2 ಕೊಲೆ ಯತ್ನ, 26 ವಿದೇಶಿಯರ ಕಾಯ್ದೆ ಉಲ್ಲಂಘನೆ ಪ್ರಕರಣಗಳು, 3 ಲೈಂಗಿಕ ದೌರ್ಜನ್ಯ ಪ್ರಕರಣಗಳು, 14 ಅನೈತಿಕ ಸಾಗಾಣಿಕೆ, 14 ಕಳ್ಳತನ ಪ್ರಕರಣಗಳು, 2 ಐಟಿ ಕಾಯ್ದೆ ಉಲ್ಲಂಘನೆ ಹಾಗೂ 2 ಸುಲಿಗೆ ಪ್ರಕರಣಗಳು ಇದರಲ್ಲಿ ಸೇರಿವೆ.
7 ವರ್ಷಕ್ಕಿಂತ ಕಡಿಮೆ ಜೈಲು ಶಿಕ್ಷೆ ವಿಧಿಸಬಹುದಾದ ಅಪರಾಧಗಳಲ್ಲಿ ಭಾಗಿಯಾಗಿರುವ ವಿದೇಶಿಗರ ಪ್ರಕರಣಗಳನ್ನು ಮಾತ್ರ ಹಿಂಪಡೆಯಲು ಅವಕಾಶವಿರುತ್ತದೆ.ವಿದೇಶಿಯರೊಂದಿಗೆ ಅಪರಾಧ ಕೃತ್ಯದಲ್ಲಿ ಭಾಗಿಯಾಗಿರುವ ಭಾರತೀಯ ಪ್ರಜೆಗಳಿಗೆ ಯಾವುದೇ ವಿನಾಯಿತಿ ಸಿಗುವುದಿಲ್ಲ. ಅವರ ವಿರುದ್ಧ ಕೋರ್ಟ್‌ನಲ್ಲಿ ವಿಚಾರಣೆ ಮುಂದುವರಿಯಲಿದೆ.
ಪ್ರಕರಣ ವಾಪಸ್‌ಗೆ ವಿಚಾರಣಾ ನ್ಯಾಯಾಲಯ (Trial Court) ಅಂತಿಮ ಅನುಮತಿ ನೀಡಿದ ನಂತರ, ವಿದೇಶಿ ಪ್ರಜೆಯ ಬಳಿ ಸಿಂಧುವಾದ ಪಾಸ್‌ಪೋರ್ಟ್ ಹಾಗೂ ದಾಖಲೆಗಳಿದ್ದರೆ 15 ದಿನಗಳ ಒಳಗಾಗಿ ಗಡೀಪಾರು ಮಾಡಲಾಗುತ್ತದೆ. ಸೂಕ್ತ ದಾಖಲೆಗಳಿಲ್ಲದಿದ್ದರೆ ಅವರನ್ನು ಬಂಧನ ಕೇಂದ್ರಗಳಲ್ಲಿ (Detention Centres) ಇರಿಸಲಾಗುವುದು.
ಇದನ್ನೂ ಓದಿ: “ಹೆಂಡತಿಯನ್ನು ಮನೆಕೆಲಸ ಹಾಗೂ ಪೋಷಕರ ಆರೈಕೆಗೆ ಪತಿಯು ಆಜ್ಞಾಪಿಸುವಂತಿಲ್ಲ”: ಕರ್ನಾಟಕ ಹೈಕೋರ್ಟ್ ಆದೇಶ
ಪ್ರಕರಣಗಳನ್ನು ಹಿಂಪಡೆಯುವ ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡಲು ಸರ್ಕಾರ ಎರಡು ಪ್ರಮುಖ ಸಮಿತಿಗಳನ್ನು ರಚಿಸಿದೆ. ಜಿಲ್ಲಾಧಿಕಾರಿಗಳ (District Magistrate) ಅಧ್ಯಕ್ಷತೆಯಲ್ಲಿ ಕಾರ್ಯನಿರ್ವಹಿಸಲಿದ್ದು, ಎಸ್‌ಪಿ, ಜಿಲ್ಲಾ ಮುಖ್ಯ ಸರ್ಕಾರಿ ಅಭಿಯೋಜಕರು ಹಾಗೂ ಸಂಬಂಧಪಟ್ಟ ಪ್ರಾಸಿಕ್ಯೂಟರ್ ಇದರಲ್ಲಿ ಸದಸ್ಯರಾಗಿರುತ್ತಾರೆ. ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ/ಪ್ರಧಾನ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಐಜಿಪಿ (IGP) ಹಂತದ ಅಧಿಕಾರಿ ಹಾಗೂ ಎಫ್‌ಆರ್‌ಆರ್‌ಒ (FRRO) ಅಧಿಕಾರಿಗಳನ್ನೊಳಗೊಂಡ ಸಮಿತಿ ಪರಿಶೀಲನೆ ನಡೆಸಲಿದೆ.

