ಬೆಂಗಳೂರು: ಸೈಬರ್ ಅಪರಾಧ ಪ್ರಕರಣ ಒಂದರ ತನಿಖೆಗಾಗಿ ಮಧ್ಯಪ್ರದೇಶಕ್ಕೆ ತೆರಳಿದ್ದ ಬೆಂಗಳೂರು ಆಗ್ನೇಯ ವಿಭಾಗದ ಸೆನ್ (CEN – ಸೈಬರ್, ಎಕನಾಮಿಕ್ & ನಾರ್ಕೋಟಿಕ್ಸ್) ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಕೆ.ಬಿ. ರವಿ (45) ಅವರು ಭೀಕರ ಬಸ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಮಧ್ಯಪ್ರದೇಶದ ರಾಜ್ಗಢ ಜಿಲ್ಲೆಯ ಬೈಯಾವರಾ ಬೈಪಾಸ್ ಬಳಿ ಅವರು ಪ್ರಯಾಣಿಸುತ್ತಿದ್ದ ಸ್ಲೀಪರ್ ಬಸ್ ನಿಯಂತ್ರಣ ತಪ್ಪಿ ಫ್ಲೈಓವರ್ನ ತಡೆಗೋಡೆಗೆ ಡಿಕ್ಕಿ ಹೊಡೆದು ಈ ದುರಂತ ಸಂಭವಿಸಿದೆ.
ಸೈಬರ್ ಎಪಿಕೆ (APK) ಫೈಲ್ ವಂಚನೆ ಪ್ರಕರಣದ ಜಾಡು ಹಿಡಿದು ಇನ್ಸ್ಪೆಕ್ಟರ್ ರವಿ ನೇತೃತ್ವದ 9 ಜನರ ಪೊಲೀಸರ ತಂಡ ಮಧ್ಯಪ್ರದೇಶಕ್ಕೆ ತೆರಳಿತ್ತು. ಪ್ರಕರಣದ ಇಬ್ಬರು ಆರೋಪಿಗಳನ್ನು ಬಂಧಿಸಿದ ನಂತರ 6 ಸಿಬ್ಬಂದಿ ಬೆಂಗಳೂರಿಗೆ ವಾಪಸಾಗಿದ್ದರು.ತಲೆಮರೆಸಿಕೊಂಡಿದ್ದ ಇನ್ನೊಬ್ಬ ಆರೋಪಿಯನ್ನು ಬಂದಿಸಲು ಇನ್ಸ್ಪೆಕ್ಟರ್ ರವಿ ಹಾಗೂ ಮತ್ತಿಬ್ಬರು ಸಿಬ್ಬಂದಿ ಮಧ್ಯಪ್ರದೇಶದಲ್ಲೇ ಉಳಿದುಕೊಂಡಿದ್ದರು.
ಭೋಪಾಲ್ನಿಂದ ಇಂದೋರ್ಗೆ ಸ್ಲೀಪರ್ ಬಸ್ನಲ್ಲಿ ಪ್ರಯಾಣಿಸುತ್ತಿದ್ದಾಗ, ಚಾಲಕನ ನಿಯಂತ್ರಣ ತಪ್ಪಿದ ಬಸ್ ಸೇತುವೆಯ ತಡೆಗೋಡೆಗೆ ಡಿಕ್ಕಿಯಾಗಿದೆ. ಬಸ್ನ ಮೇಲ್ಭಾಗದ ಬರ್ತ್ನಲ್ಲಿ ಮಲಗಿದ್ದ ಇನ್ಸ್ಪೆಕ್ಟರ್ ರವಿ ಅವರು ಡಿಕ್ಕಿಯ ರಭಸಕ್ಕೆ ಗ್ಲಾಸ್ ಒಡೆದು ಫ್ಲೈಓವರ್ನಿಂದ ಕೆಳಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅಪಘಾತದಲ್ಲಿ ಪಿಎಸ್ಐ ರಮೇಶ್ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದು, ಉಳಿದ ಸಿಬ್ಬಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮೃತ ಕೆ.ಬಿ. ರವಿ ಅವರು 2005 ರಲ್ಲಿ ಕಾನ್ಸ್ಟೇಬಲ್ ಆಗಿ ಸೇವೆಗೆ ಸೇರಿ, 2007 ರಲ್ಲಿ ಪಿಎಸ್ಐ ಆಗಿ ಆಯ್ಕೆಯಾಗಿದ್ದರು. ಹಿಂದೆ ಅಶೋಕನಗರ, ಇಂದಿರಾನಗರ ಹಾಗೂ ಕೋರಮಂಗಲ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು.
ಇದನ್ನೂ ಓದಿ: ವಿದೇಶಿಗರ ಮೇಲಿನ ಸಣ್ಣಪುಟ್ಟ ಕ್ರಿಮಿನಲ್ ಕೇಸ್ಗಳು ವಾಪಸಾತಿ: 365 ವಿದೇಶಿಯರ ಡಿಪೋರ್ಟ್ಗೆ ಪ್ರಾಸಿಕ್ಯೂಷನ್ ಇಲಾಖೆ ಚಾಲನೆ
ಕರ್ನಾಟಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸೇರಿದಂತೆ ಹಲವು ನಾಯಕರು ಇನ್ಸ್ಪೆಕ್ಟರ್ ಕೆ.ಬಿ. ರವಿ ಅವರ ನಿಧನಕ್ಕೆ ತೀವ್ರ ಕಂಬನಿ ಮಿಡಿದಿದ್ದಾರೆ.

