ಬೆಂಗಳೂರು: ಯೋಜನೆ ಮತ್ತು ಸಾಂಖ್ಯಿಕ ಸಚಿವ ಬಿ. ನಾಗೇಂದ್ರ (B. Nagendra) ಅವರು ತಮ್ಮ ಸಚಿವ ಸ್ಥಾನ ಹಾಗೂ ಶಾಸಕ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ. ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ನಡೆದ ಪ್ರಮುಖ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾವುಕರಾಗಿ ಕಣ್ಣೀರು ಹಾಕುತ್ತಲೇ ತಮ್ಮ ರಾಜೀನಾಮೆಯನ್ನು ಪ್ರಕಟಿಸಿದರು.
ಸುದ್ದಿಗೋಷ್ಠಿಯಲ್ಲಿ ಸಚಿವ ಬಿ. ನಾಗೇಂದ್ರ ಅವರು ಹೇಳಿದ ಪ್ರಮುಖ ಅಂಶಗಳು ಹೇಳಿದ್ದೇನು? “ನನ್ನ ಸ್ವ-ಇಚ್ಛೆಯಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಅಧಿಕೃತವಾಗಿ ರಾಜೀನಾಮೆ ಪತ್ರ ಹಸ್ತಾಂತರಿಸಲಿದ್ದೇನೆ. ನನ್ನಿಂದ ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ರೀತಿಯ ಮುಜುಗರ ಉಂಟಾಗಬಾರದು ಎಂಬ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿದ್ದೇನೆ.” ಎಂದು ಹೇಳಿದರು.
“ನನ್ನ ಸಚಿವ ಸ್ಥಾನ ಮಾತ್ರವಲ್ಲದೆ, ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡುತ್ತಿದ್ದೇನೆ. ನನಗೆ ಆಗಿರುವ ಅನ್ಯಾಯಕ್ಕೆ ಮನವಿ ಮಾಡುತ್ತಿದ್ದು, ಶಾಸಕ ಸ್ಥಾನವನ್ನು ತ್ಯಾಗ ಮಾಡಲು ಸಿದ್ಧನಿದ್ದೇನೆ. ಬಿಜೆಪಿ ನಾಯಕರಿಗೆ ಸವಾಲು ಹಾಕುತ್ತೇನೆ. ಬಳ್ಳಾರಿಯಲ್ಲಿ ಇರುವ ‘ಸೋ ಕಾಲ್ಡ್’ ಲೀಡರ್ಗಳೇ, ತಾಕತ್ತಿದ್ದರೆ ಅಖಾಡಕ್ಕೆ ಬನ್ನಿ. ಜನತಾ ನ್ಯಾಯಾಲಯಕ್ಕಿಂತ ದೊಡ್ಡ ನ್ಯಾಯಾಲಯ ಇನ್ನೊಂದಿಲ್ಲ, ಬನ್ನಿ ಜನತಾ ನ್ಯಾಯಾಲಯಕ್ಕೆ ಹೋಗೋಣ. ಅಲ್ಲಿಯೇ ತೀರ್ಮಾನವಾಗಲಿ.” ಎಂದು ಹೇಳಿದ್ದಾರೆ.
“ಬಳ್ಳಾರಿಯಲ್ಲಿ ನೀವು ‘ರಿಜೆಕ್ಟ್ ಪೀಸ್’ಗಳು ಹಾಗೂ ಚಲಾವಣೆ ಇಲ್ಲದ ನಾಣ್ಯಗಳು. ಶ್ರೀರಾಮುಲು ಅಣ್ಣಾ, ಜನಾರ್ದನ ರೆಡ್ಡಿ ಬನ್ನಿ ಸ್ವಾಮಿ ಅಖಾಡಕ್ಕೆ! ಇಡಿ (ED) ಹಾಗೂ ಸಿಬಿಐ (CBI) ನನ್ನು ನನ್ನ ಬೆನ್ನ ಹಿಂದೆ ಬಿಟ್ಟು ಕೇಸ್ ಹಾಕಿಸುತ್ತಿದ್ದಾರೆ. ನನ್ನ ತಪ್ಪಿದ್ದರೆ ನಾನು ಸೋಲುತ್ತೇನೆ, ಆದರೆ ನಾನು ಆರೋಪಮುಕ್ತನಾಗಿ ಮತ್ತೆ ಹೊರಬರುತ್ತೇನೆ ಎಂಬ ಸಂಪೂರ್ಣ ನಂಬಿಕೆ ನನಗಿದೆ. ವಾಲ್ಮೀಕಿ ಸಮುದಾಯದಲ್ಲಿ ನನ್ನನ್ನು ವಿಲನ್ ಮಾಡಲು ಹೊರಟಿದ್ದಾರೆ. ಆದರೆ ನಮ್ಮದು ರಾಮಾಯಣ ಬರೆದ ಸಮುದಾಯ, ಸಂವಿಧಾನ ಇರುವವರೆಗೆ ನಮ್ಮ ಸಮುದಾಯವನ್ನು ಯಾರೂ ಏನೂ ಮಾಡಲು ಸಾಧ್ಯವಿಲ್ಲ. ನಾನು ತಪ್ಪಿತಸ್ಥನಲ್ಲ ಎಂದು ಬೆಂಬಲಿಸಿದ ಸಿಎಂ ಸಿದ್ದರಾಮಯ್ಯ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ವೇಣುಗೋಪಾಲ್ ಹಾಗೂ ಜಮೀರ್ ಅಹಮದ್ ಸೇರಿದಂತೆ ಎಲ್ಲ ನಾಯಕರಿಗೂ ಧನ್ಯವಾದಗಳು.” ಎಂದು ಹೇಳಿದರು.
ಇದನ್ನೂ ಓದಿ: ಬಿ. ನಾಗೇಂದ್ರ ಸಂಪುಟ ಸೇರ್ಪಡೆ ಸಮರ್ಥಿಸಿಕೊಂಡ ಸಿಎಂ ಡಿಕೆ ಶಿವಕುಮಾರ್: ಶೀಘ್ರವೇ ಮಹಿಳಾ ಸಚಿವರ ಸೇರ್ಪಡೆ ಸುಳಿವು
ಪ್ರತಿಪಕ್ಷಗಳ ನಡೆಗೆ ಕಿಡಿಕಾರಿದ ನಾಗೇಂದ್ರ, “ವಿರೋಧ ಪಕ್ಷದವರು ಕುತಂತ್ರ ರಾಜಕಾರಣ ಮಾಡುತ್ತಿದ್ದಾರೆ. ಸದನದಲ್ಲಿ ನೋಟಿಸ್ ನೀಡಿ ಚರ್ಚೆಗೆ ಬನ್ನಿ ಎಂದು ಹಲವು ಬಾರಿ ಕೇಳಿಕೊಂಡರೂ ಅವರು ಚರ್ಚೆಗೆ ಬರಲಿಲ್ಲ. ಯಾವುದೇ ಸೂಕ್ತ ವಿಚಾರವಿಲ್ಲದೆ (Issue-less) ಕೇವಲ ರಾಜಕೀಯ ದುರುದ್ದೇಶಕ್ಕಾಗಿ ಪಾದಯಾತ್ರೆಗೆ ಹೊರಟಿದ್ದಾರೆ” ಎಂದು ಆರೋಪಿಸಿದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

