ಬೆಂಗಳೂರು: ಬಳ್ಳಾರಿ ಗ್ರಾಮಾಂತರ ಶಾಸಕ ಬಿ. ನಾಗೇಂದ್ರ ಅವರನ್ನು ರಾಜ್ಯ ಸಚಿವ ಸಂಪುಟಕ್ಕೆ ಸೇರ್ಪಡೆಗೊಳಿಸಿರುವುದನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬುಧವಾರ ಸಮರ್ಥಿಸಿಕೊಂಡಿದ್ದಾರೆ. ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಣ ದುರ್ಬಳಕೆ ಹಗರಣದಲ್ಲಿ ನಾಗೇಂದ್ರ ಅವರ ಪಾತ್ರವಿಲ್ಲ ಎಂದು ಅಧಿಕೃತ ತನಿಖಾ ವರದಿ ಸ್ಪಷ್ಟಪಡಿಸಿದ ನಂತರವೇ ಅವರನ್ನು ಮತ್ತೆ ಸಂಪುಟಕ್ಕೆ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.
‘ಇಂಡಿಯಾ ಟುಡೇ ರೌಂಡ್‌ಟೇಬಲ್’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಗರಣದ ತನಿಖೆಯ ವೇಳೆ ಶೇ. 95 ರಷ್ಟು ಹಣವನ್ನು ಯಶಸ್ವಿಯಾಗಿ ವಶಪಡಿಸಿಕೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದರು. “ನಿಗಮದಲ್ಲಿ ನಡೆದ ಅಕ್ರಮಕ್ಕೂ ನಾಗೇಂದ್ರ ಅವರಿಗೂ ಸಂಬಂಧವಿಲ್ಲ ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಅವರು ಪಕ್ಷದ ಶಿಸ್ತಿನ ಸಿಪಾಯಿ. ಪಕ್ಷದ ಹಿತದೃಷ್ಟಿಯಿಂದ ಹೈಕಮಾಂಡ್ ಹಾಗೂ ಸರ್ಕಾರ ಸೂಚಿಸಿದ ಹಾದಿಯಲ್ಲೇ ಅವರು ಸಾಗಲಿದ್ದಾರೆ. ಆದರೆ ನಾವು ವಿರೋಧ ಪಕ್ಷ ಬಿಜೆಪಿಯ ತಂತ್ರಗಳಿಗೆ ಬಲಿಯಾಗುವುದಿಲ್ಲ” ಎಂದರು.
ಸಂಪುಟದಲ್ಲಿ ಮಹಿಳಾ ಪ್ರಾತಿನಿಧ್ಯದ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಿಎಂ, “ಖಂಡಿತವಾಗಿಯೂ ನಮ್ಮ ಸಂಪುಟದಲ್ಲಿ ಮಹಿಳಾ ಸಚಿವರು ಇರಲಿದ್ದಾರೆ. ಮಹಿಳಾ ಸಬಲೀಕರಣದ ಸಿದ್ಧಾಂತಕ್ಕೆ ಕಾಂಗ್ರೆಸ್ ಬದ್ಧವಾಗಿದೆ. ಮುಂದಿನ ಒಂದೆರಡು ದಿನಗಳಲ್ಲಿ ಸಂಪುಟಕ್ಕೆ ಮಹಿಳಾ ಸಚಿವರನ್ನು ಸೇರ್ಪಡೆಗೊಳಿಸಲಾಗುವುದು” ಎಂದು ಸುಳಿವು ನೀಡಿದರು. ಆಗಸ್ಟ್ 3 ರಂದು ನಡೆದ ಸಂಪುಟ ವಿಸ್ತರಣೆಯಲ್ಲಿ 19 ಸಚಿವರನ್ನು ಸೇರ್ಪಡೆ ಮಾಡಿಕೊಳ್ಳಲಾಗಿತ್ತು. ಒಟ್ಟು 34 ಸಚಿವ ಸ್ಥಾನಗಳ ಪೈಕಿ ಪ್ರಸ್ತುತ 33 ಸಚಿವರಿದ್ದು, ಖಾಲಿ ಇರುವ ಏಕೈಕ ಸ್ಥಾನವನ್ನು ಮಹಿಳಾ ಶಾಸಕರಿಗೆ ನೀಡಲು ಕಾಯ್ದಿರಿಸಲಾಗಿದೆ. ಈ ಹಿಂದೆ ವಿಧಾನ ಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ ಅವರ ಹೆಸರು ಅಂತಿಮ ಹಂತದಲ್ಲಿದ್ದರೂ ಕೆಲವು ತಾಂತ್ರಿಕ ಕಾರಣಗಳಿಂದ ತಡೆಯಲಾಗಿತ್ತು.
ಇದನ್ನೂ ಓದಿ: ಆರೆಸ್ಸೆಸ್ ಅನ್ನು ಸಾವಿರ ತಲೆಯ ಸರ್ಪ ಎಂದ ಯತೀಂದ್ರ: ‘ಅಪ್ಪಂದಿರ ಹೆಸರಲ್ಲಿ ಅಧಿಕಾರಕ್ಕೆ ಬಂದವರು’ ಎಂದು ಸಿ.ಟಿ. ರವಿ ವಾಗ್ದಾಳಿ
ಕಾಂಗ್ರೆಸ್‌ನಲ್ಲಿ ಭಿನ್ನಮತ ಅಥವಾ ಬಣಗಳಿವೆಯೇ ಎಂಬ ಪ್ರಶ್ನೆಯನ್ನು ತಳ್ಳಿಹಾಕಿದ ಶಿವಕುಮಾರ್, “ನಮ್ಮಲ್ಲಿ ಯಾವುದೇ ಬಣಗಳಿಲ್ಲ. ಸಿದ್ದರಾಮಯ್ಯ ಅವರಿಗೂ ಯಾವುದೇ ಪ್ರತ್ಯೇಕ ಬಣವಿರಲಿಲ್ಲ. ನಮ್ಮದು ಒಂದೇ ಬಣ, ಅದುವೇ ಕಾಂಗ್ರೆಸ್ ಬಣ. ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ” ಎಂದು ಪ್ರತಿಪಾದಿಸಿದರು.ಸಚಿವ ಸ್ಥಾನ ಹಾಗೂ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನಗಳಿಗಾಗಿ ಶಾಸಕರಿಂದ ಇರುವ ಒತ್ತಡದ ಕುರಿತು ಪ್ರತಿಕ್ರಿಯಿಸಿ, ಶಾಸಕರ ಆಕಾಂಕ್ಷೆಗಳನ್ನು ಈಡೇರಿಸುವಲ್ಲಿ ಯಾವುದೇ ಸಮಸ್ಯೆಯಿಲ್ಲ. ಆದರೆ ಸಂವಿಧಾನಾತ್ಮಕವಾಗಿ 15% ಸಚಿವ ಸ್ಥಾನಗಳ ಮಿತಿ ಇರುವುದರಿಂದ ಎಲ್ಲರಿಗೂ ಸಚಿವ ಸ್ಥಾನ ನೀಡಲು ಸಾಧ್ಯವಿಲ್ಲ ಎಂದು ವಿವರಿಸಿದರು.

