ಪುತ್ತೂರು: “ಮನೆಯಲ್ಲಿ ಮಕ್ಕಳಿಗೆ ನೀಡಲಾಗುವ ಸಂಸ್ಕಾರವೇ ಸಮಾಜಕ್ಕೆ ಶ್ರೇಷ್ಠ ಸಂಸ್ಕೃತಿಯಾಗಿ ಕೊಡುಗೆಯಾಗುತ್ತದೆ” ಎಂದು ವಿವೇಕಾನಂದ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಕನ್ನಡ ಸಹಾಯಕ ಪ್ರಾಧ್ಯಾಪಕಿ ಡಾ. ಗೀತಾ ಕುಮಾರಿ ಟಿ. ಅಭಿಪ್ರಾಯಪಟ್ಟರು.
ಶ್ರೀ ಸರಸ್ವತಿ ಚಾರಿಟೇಬಲ್ ಟ್ರಸ್ಟ್ (ರಿ) ಪುತ್ತೂರು ಹಾಗೂ ಶ್ರೀ ಸರಸ್ವತಿ ಮಹಿಳಾ ಮಂಡಳಿ ಪುತ್ತೂರು ಇವುಗಳ ಜಂಟಿ ಆಶ್ರಯದಲ್ಲಿ, ಮಹಿಳಾ ಸಬಲೀಕರಣ ಮತ್ತು ಕೌಶಲ್ಯಾಭಿವೃದ್ಧಿ ಯೋಜನೆಯಡಿಯಲ್ಲಿ ಆಯೋಜಿಸಲಾಗಿದ್ದ ‘ಭಾರತೀಯ ಸಂಸ್ಕೃತಿ ಮತ್ತು ಮಹಿಳೆ’ ವಿಷಯದ ಕುರಿತ ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದರ್ಬೆಯ ಶ್ರೀ ಸಚ್ಚಿದಾನಂದ ಸೇವಾ ಸದನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಡಾ. ಗೀತಾ ಕುಮಾರಿ ಅವರು, “ಭಾರತದ ವೇದಕಾಲದಲ್ಲಿ ಮಹಿಳೆಗಿದ್ದ ಸ್ಥಾನಮಾನ, ದೇವಿ ಸ್ವರೂಪಿ ಸ್ತ್ರೀಯಲ್ಲಿರುವ ಶಕ್ತಿಗಳು ಹಾಗೂ ಆಕೆ ನಿಭಾಯಿಸುವ ವಿವಿಧ ಕ್ಷೇತ್ರಗಳ ಬಗ್ಗೆ ವಿವರಿಸಿದರು. ಇಂದಿನ ಕಾಲದಲ್ಲಿ ಸ್ತ್ರೀಗೆ ಎಷ್ಟೇ ಹಕ್ಕುಗಳು ಹಾಗೂ ಹುದ್ದೆಗಳು ದೊರೆತರೂ, ಆಕೆ ಕುಟುಂಬ ಎನ್ನುವ ಸಂಸ್ಕೃತಿ ಕೇಂದ್ರದೊಳಗೆ ಬದುಕುತ್ತಾ ಸಮಾಜಕ್ಕೆ ಆದರ್ಶಗಳನ್ನು ರವಾನಿಸಬೇಕಾಗುತ್ತದೆ” ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕುದ್ಮಾರು ಶಾಲೆಯ ಶಿಕ್ಷಕಿ ವೀಣಾ ಕೆ. ಮಾತನಾಡಿ, “ಸಮಾಜದಲ್ಲಿ ಆದರ್ಶ ವ್ಯಕ್ತಿಗಳು ಜೀವಂತವಾಗಿರಲು ತಾಯಿ ನೀಡುವ ಸಂಸ್ಕೃತಿಯೇ ಕಾರಣ. ಸಂಸ್ಕೃತಿ ಎಂದರೆ ಗತಕಾಲದ ಆಚರಣೆಗಳಷ್ಟೇ ಅಲ್ಲ, ಮಹಿಳೆಗೆ ನೀಡುವ ಸ್ವಾತಂತ್ರ್ಯ, ಸಮಾನತೆ ಮತ್ತು ಸ್ವಾವಲಂಬನೆಯಾಗಿದೆ” ಎಂದು ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ವೃತ್ತಿಪರ ನಿರ್ದೇಶಕಿ ಪುಷ್ಪಲತಾ ಎನ್., “ಮಹಿಳೆಗೆ ಆರ್ಥಿಕ ಸ್ವಾವಲಂಬನೆಯ ಜೊತೆಗೆ ಕುಟುಂಬ ಮತ್ತು ಸಮಾಜದ ಜವಾಬ್ದಾರಿಯೂ ಮುಖ್ಯ. ಮಹಾನ್ ಸಾಧಕ ಮಹಿಳೆಯರ ತತ್ವಾದರ್ಶಗಳನ್ನು ಅಳವಡಿಸಿಕೊಂಡು ಮಾದರಿ ಜೀವನ ನಡೆಸಬೇಕು” ಎಂದು ಕರೆ ನೀಡಿದರು.
ಇದನ್ನೂ ಓದಿ: ಮಧ್ಯಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ: ಸೈಬರ್ ಖದೀಮರ ಪತ್ತೆಗೆ ತೆರಳಿದ್ದ ಬೆಂಗಳೂರಿನ ಇನ್ಸ್ಪೆಕ್ಟರ್ ಕೆ.ಬಿ. ರವಿ ದುರ್ಮರಣ
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟ್ರಸ್ಟಿ ಚಂದ್ರಶೇಖರ್ ಭಟ್ ಮುಂಡುಗಾರು ವಹಿಸಿ ಶುಭಾಶಯ ಕೋರಿದರು. ವೇದಿಕೆಯಲ್ಲಿ ಶ್ರೀ ಸರಸ್ವತಿ ಮಹಿಳಾ ಮಂಡಳಿಯ ಅಧ್ಯಕ್ಷೆ ಮಲ್ಲಿಕಾ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ರಂಜಿತಾ ಆರ್. ಪ್ರಭು ಸ್ವಾಗತಿಸಿ, ಧನ್ಯವಾದವನ್ನು ಸಿಂಧು ಮಾಡಿ, ಕಾರ್ಯಕ್ರಮ ಸಂಯೋಜಕರಾದ ಶ್ರೀ ಬಿಪಿನ್ ಚಂದ್ರ ಅವರು ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯರಿಗಿರುವ ಅಪೂರ್ವ ಸ್ಥಾನಮಾನಗಳನ್ನು ದೃಷ್ಟಾಂತಗಳ ಮೂಲಕ ವಿವರಿಸಿ ಕಾರ್ಯಕ್ರಮ ನಿರೂಪಿಸಿದರು.ಸಮಾರಂಭದಲ್ಲಿ ಸಮಾಜದ 150ಕ್ಕೂ ಅಧಿಕ ಮಹಿಳೆಯರು ಹಾಗೂ ಅವರ ಕುಟುಂಬ ವರ್ಗದವರು ಉಪಸ್ಥಿತರಿದ್ದು ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡರು.

