ಬೆಂಗಳೂರು : ದೊಡ್ಡಬಳ್ಳಾಪುರ ರೈಲ್ವೇ ನಿಲ್ದಾಣದ ಬಳಿ ರೈಲು ಹಳಿ ದಾಟುತ್ತಿದ್ದಾಗ ವೇಗವಾಗಿ ಬಂದ ಎಕ್ಸ್ಪ್ರೆಸ್ ರೈಲು ಡಿಕ್ಕಿಯಾಗಿ ಅಜ್ಜಿ ಹಾಗೂ ಅವರ ಇಬ್ಬರು ಅಪ್ರಾಪ್ತ ಮೊಮ್ಮಕ್ಕಳು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟ ಘಟನೆ ಸೋಮವಾರ ಮುಂಜಾನೆ ಸಂಭವಿಸಿದೆ.
ಮೃತರನ್ನು ಇರ್ಫಾನಾ (೪೬) ಹಾಗೂ ಅವರ ಮೊಮ್ಮಕ್ಕಳಾದ ರುಕಯ್ಯಾ (೧೩) ಮತ್ತು ರಜಿಯಾ (೮) ಎಂದು ಗುರುತಿಸಲಾಗಿದೆ. ಆಂಧ್ರಪ್ರದೇಶದ ಹಿಂದೂಪುರದ ನಿವಾಸಿಗಳಾದ ಈ ಇಬ್ಬರು ಹೆಣ್ಣುಮಕ್ಕಳು ರಜೆಯ ಹಿನ್ನೆಲೆಯಲ್ಲಿ ದೊಡ್ಡಬಳ್ಳಾಪುರ ತಾಲೂಕಿನ ಮುತ್ತೂರು ಗ್ರಾಮದ ತೋಟವೊಂದರಲ್ಲಿ ಕೆಲಸ ಮಾಡುತ್ತಿದ್ದ ಅಜ್ಜಿ ಇರ್ಫಾನಾ ಅವರ ಮನೆಗೆ ಬಂದಿದ್ದರು.
ಸೋಮವಾರ ಬೆಳಿಗ್ಗೆ 6:30 ರ ಸುಮಾರಿಗೆ ಅಜ್ಜಿ ಇರ್ಫಾನಾ ಅವರು ಮೊಮ್ಮಕ್ಕಳನ್ನು ಮರಳಿ ಹಿಂದೂಪುರಕ್ಕೆ ಕಳುಹಿಸಲು ದೊಡ್ಡಬಳ್ಳಾಪುರ ರೈಲ್ವೇ ನಿಲ್ದಾಣಕ್ಕೆ ಕರೆತರುತ್ತಿದ್ದರು. ರೈಲು ತಪ್ಪಿಹೋಗುತ್ತದೆ ಎಂಬ ಅವಸರದಲ್ಲಿ ನಿಲ್ದಾಣದ ಮೇಲ್ಸೇತುವೆ (Skywalk) ಬಳಸುವ ಬದಲು ಹಳಿ ದಾಟಲು ಯತ್ನಿಸಿದ್ದಾರೆ.
ಇದನ್ನೂ ಓದಿ: ಕಿವಿ ತುರಿಕೆಗೆ ಆನೆಯ ‘ದೇಸಿ ಟ್ರೀಟ್ಮೆಂಟ್’: ಸಣ್ಣ ಕಡ್ಡಿಯನ್ನೇ ಬಳಸಿಕೊಂಡು ಆರಾಮ ಕಂಡ ಆನೆಯ ವಿಡಿಯೋ ವೈರಲ್
ಅದೇ ಸಮಯದಲ್ಲಿ ಯಶವಂತಪುರ ಮಾರ್ಗವಾಗಿ ಮಹಾರಾಷ್ಟ್ರದ ಲಾತೂರಿಗೆ ತೆರಳುತ್ತಿದ್ದ ವೇಗದ ಎಕ್ಸ್ಪ್ರೆಸ್ ರೈಲು ಅವರಿಗೆ ಡಿಕ್ಕಿಯಾಗಿದೆ. ಸ್ಥಳೀಯರು ಹಳಿ ದಾಟದಂತೆ ಎಚ್ಚರಿಸಿದರೂ, ಗಮನಿಸದೇ ಹಳಿ ದಾಟಲು ಹೋಗಿ ಈ ದುರಂತ ಸಂಭವಿಸಿದೆ.
ದೊಡ್ಡಬಳ್ಳಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಶವಪರೀಕ್ಷೆ ನಡೆಸಿದ ನಂತರ ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಯಶವಂತಪುರ ರೈಲ್ವೇ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

