ಬೆಂಗಳೂರು: ರೈತರ ಸಾಲ ಮನ್ನಾ (Farm Loan Waiver) ವಿಚಾರದಲ್ಲಿ ಕೇಂದ್ರ ಸರ್ಕಾರದ ಮೇಲೆ ಹೊಣೆಗಾರಿಕೆ ತಳ್ಳಿ ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ (R. Ashoka) ಅವರು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ರಾಜ್ಯದ ರೈತರ ಸಾಲವನ್ನು ಕೇಂದ್ರ ಸರ್ಕಾರ ಮನ್ನಾ ಮಾಡಬೇಕು ಎಂಬ ಡಿಕೆಶಿ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಸರ್ಕಾರದ ‘ನೈತಿಕ ಪತನ’ ಮತ್ತು ‘ಆಡಳಿತಾತ್ಮಕ ಬೇಜವಾಬ್ದಾರಿತನ’ವನ್ನು ಖಂಡಿಸಿ ತಮ್ಮ ಸಾಮಾಜಿಕ ಜಾಲತಾಣ ‘X’ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ರಾಜ್ಯ ಸರ್ಕಾರದ ವೈಫಲ್ಯಗಳನ್ನು ಕಟುವಾಗಿ ಟೀಕಿಸಿದ್ದಾರೆ.
“ಹಿಂದೆ ಕರ್ನಾಟಕದಲ್ಲಿ ನಿಮ್ಮದೇ ಪಕ್ಷ ಸೇರಿದಂತೆ ಹಲವು ಸರ್ಕಾರಗಳು ಅಧಿಕಾರದಲ್ಲಿದ್ದಾಗ ಅಗತ್ಯಕ್ಕೆ ತಕ್ಕಂತೆ ರೈತರ ಸಾಲ ಮನ್ನಾ ಮಾಡಿ ಅವರ ನೆರವಿಗೆ ಬಂದಿದ್ದವು. ಆದರೆ ಇಂದು ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ಕೇಂದ್ರ ಸರ್ಕಾರದತ್ತ ಬೆರಳು ತೋರಿಸುತ್ತಿರುವುದು ನಾಚಿಕೆಗೇಡಿನ ಸಂಗತಿ,” ಎಂದು ಸವಾಲು ಎಸೆದಿದ್ದಾರೆ.
“ಖಜಾನೆ ಖಾಲಿ ಮಾಡಿ ‘ಕೇಂದ್ರ ಸರ್ಕಾರ ಮಾಡಲಿ’ ಎಂದು ಕೈಚೆಲ್ಲುವುದು ಆಡಳಿತದ ತುತ್ತತುದಿ ಬೇಜವಾಬ್ದಾರಿತನ. ನಿಜವಾಗಿಯೂ ರೈತರ ಬಗ್ಗೆ ಕಾಳಜಿ ಇದ್ದರೆ, ಮೊದಲು ರಾಜ್ಯ ಸರ್ಕಾರದ ಮಟ್ಟದಲ್ಲೇ ಸಾಲ ಮನ್ನಾ ಘೋಷಣೆ ಮಾಡಿ,” ಎಂದು ಒತ್ತಾಯಿಸಿದ್ದಾರೆ. 2023ರ ವಿಧಾನಸಭಾ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ನೀಡಿದ್ದ ಪ್ರಮುಖ ಭರವಸೆಗಳನ್ನು ಪ್ರಸ್ತಾಪಿಸಿದ ವಿಪಕ್ಷ ನಾಯಕರು, ಸರ್ಕಾರದ ಕಟು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ. 1.50 ಲಕ್ಷ ಕೋಟಿ ‘ಕೃಷಿ ಸರ್ವೋದಯ ನಿಧಿ’ ಎಲ್ಲೋಯ್ತು? 5 ಸಾವಿರ ಕೋಟಿ ‘ಶಾಶ್ವತ ನೈಸರ್ಗಿಕ ವಿಕೋಪ ಪರಿಹಾರ ನಿಧಿ’ ಎಲ್ಲಿಗೆ ಹೋಯಿತು? 3 ಲಕ್ಷದಿಂದ 10 ಲಕ್ಷದವರೆಗೆ ಬಡ್ಡಿರಹಿತ ಕೃಷಿ ಸಾಲ ನೀಡುವ ಭರವಸೆ ಏನಾಯಿತು?
ಇದನ್ನೂ ಓದಿ: “ರಾಹುಲ್ ಗಾಂಧಿಯವರೇ ಕರ್ನಾಟಕಕ್ಕೆ ಬನ್ನಿ, ನೇಮಕಾತಿ ಅಕ್ರಮದ ಅನುಭವ ಪಡೆಯಿರಿ”: ಹೆಚ್.ಡಿ. ಕುಮಾರಸ್ವಾಮಿ ತಿರುಗೇಟು
“ಚುನಾವಣೆಗೂ ಮುನ್ನ ಪ್ರಣಾಳಿಕೆ ಹಿಡಿದು ರೈತರಿಗೆ ‘ಅಂಗೈಯಲ್ಲಿ ಅರಮನೆ’ ತೋರಿಸಿ, ಅಧಿಕಾರಕ್ಕೆ ಬಂದ ಮೇಲೆ ಖಜಾನೆ ಖಾಲಿ ಮಾಡಿ ಈಗ ಜಾರಿಕೊಳ್ಳುತ್ತಿದ್ದೀರಿ,” ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ. ರಾಜ್ಯ ಸರ್ಕಾರವು ತನ್ನ ಪಾಲಿನ ಜವಾಬ್ದಾರಿಯನ್ನು ಪೂರೈಸಿ, ಪ್ರಣಾಳಿಕೆಯಲ್ಲಿ ವಾಗ್ದಾನ ಮಾಡಿದಂತೆ 5 ಸಾವಿರ ಕೋಟಿ ನೈಸರ್ಗಿಕ ವಿಕೋಪ ನಿಧಿಯಿಂದ ತಕ್ಷಣವೇ ಪರಿಹಾರ ಬಿಡುಗಡೆ ಮಾಡಬೇಕು. ಅದನ್ನು ಬಿಟ್ಟು ಕೇಂದ್ರಕ್ಕೆ ನಿಯೋಗ ಒಯ್ಯುವ ಮಾತುಗಳನ್ನಾಡುವುದು ಸರಿಯಲ್ಲ ಎಂದು ಅಶೋಕ್ ಕಿಡಿಕಾರಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

