ದೆಹಲಿ: ಭಾರತದ ತಾರಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಕಂಬ್ಯಾಕ್ ಮಾಡಲು ಸಜ್ಜಾಗಿದ್ದು, ಆಸ್ಟ್ರೇಲಿಯಾ ‘ಎ’ ವಿರುದ್ಧ ನಡೆಯಲಿರುವ ಮುಂಬರುವ ಏಕದಿನ ಸರಣಿಗೆ ಆಯ್ಕೆಯಾಗಿರುವ ‘ಇಂಡಿಯಾ ಎ’ (India A) ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಸೆಪ್ಟೆಂಬರ್ 22 ರಿಂದ ಆರಂಭವಾಗಲಿರುವ ಈ ಪ್ರವಾಸದಲ್ಲಿ ಇಂಡಿಯಾ ಎ ತಂಡವು ಆಸ್ಟ್ರೇಲಿಯಾ ಎ ವಿರುದ್ಧ ಎರಡು ಬಹುದಿನಗಳ (Multi-Day) ಪಂದ್ಯಗಳು ಹಾಗೂ ಎರಡು ಏಕದಿನ ಪಂದ್ಯಗಳನ್ನು ಆಡಲಿದೆ.
ಐಪಿಎಲ್ 2026ರಲ್ಲಿ ಮುಂಬೈ ಇಂಡಿಯನ್ಸ್ ಪರ ಕೊನೆಯದಾಗಿ ಆಡಿದ್ದ ಹಾರ್ದಿಕ್ ಪಾಂಡ್ಯ, ಗಾಯದ ಸಮಸ್ಯೆಯಿಂದಾಗಿ ತಂಡದಿಂದ ಹೊರಗುಳಿದಿದ್ದರು. ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ (CoE) ನಲ್ಲಿ ಪುನಶ್ಚೇತನ (Rehab) ಪಡೆಯುತ್ತಿದ್ದ ಅವರು, ಅಫ್ಗಾನಿಸ್ತಾನ್ ವಿರುದ್ಧದ ಟಿ२० ಸರಣಿಯ ಮೂಲಕ ಹಿರಿಯರ ತಂಡಕ್ಕೆ ಪುನರಾಗಮನ ಮಾಡಬೇಕಿತ್ತು. ಆದರೆ ಮತ್ತೆ ಸಣ್ಣ ಗಾಯದ ಸಮಸ್ಯೆಗೆ ಈಡಾಗಿದ್ದರಿಂದ ಆ ಸರಣಿಯಿಂದ ಹೊರಗುಳಿದಿದ್ದರು. ಇದೀಗ ರಾಷ್ಟ್ರೀಯ ತಂಡಕ್ಕೆ ಮರಳುವ ಮುನ್ನ ತಮ್ಮ ಫಿಟ್‌ನೆಸ್ ಹಾಗೂ ವರ್ಕ್‌ಲೋಡ್ ಸಾಬೀತುಪಡಿಸಲು ಹಾರ್ದಿಕ್ ‘ಇಂಡಿಯಾ ಎ’ ಪರ ಕಣಕ್ಕಿಳಿಯಲಿದ್ದಾರೆ.
ಆಸ್ಟ್ರೇಲಿಯಾ ‘ಎ’ ವಿರುದ್ಧದ ಏಕದಿನ ಸರಣಿಗೆ ಮಹಾರಾಷ್ಟ್ರದ ಬ್ಯಾಟರ್ ರುತುರಾಜ್ ಗಾಯಕ್ವಾಡ್ ನಾಯಕರಾಗಿ ಆಯ್ಕೆಯಾಗಿದ್ದರೆ, ಕರ್ನಾಟಕದ ದೇವದತ್ ಪಡಿಕ್ಕಲ್ ಉಪನಾಯಕನಾಗಿ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ತಂಡದಲ್ಲಿ ಪ್ರಿಯಾಂಶ್ ಆರ್ಯ, ಸಾಯಿ ಸುದರ್ಶನ್, ರಜತ್ ಪಟೀದಾರ್, ಪ್ರಭ್‌ಸಿಮ್ರಾನ್ ಸಿಂಗ್ ಹಾಗೂ ಕುಮಾರ್ ಕುಶಾಗ್ರ ಅವರಂತಹ ಭರವಸೆಯ ಆಟಗಾರರಿದ್ದಾರೆ.
ಇದನ್ನೂ ಓದಿ: ವಿದ್ಯಾಭಾರತಿ ಕ್ಷೇತ್ರೀಯ ಮಟ್ಟದ ಸ್ಕೇಟಿಂಗ್: ಶ್ರೀರಾಮ ಪಿಯು ಕಾಲೇಜು ವಿದ್ಯಾರ್ಥಿಗಳ ಅಮೋಘ ಸಾಧನೆ
ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಸತತ ಶತಕ ಬಾರಿಸಿ ಮಿಂಚಿದ್ದ ಕರ್ನಾಟಕದ ಬ್ಯಾಟರ್ ದೇವದತ್ ಪಡಿಕ್ಕಲ್, ಆಸ್ಟ್ರೇಲಿಯಾ ‘ಎ’ ವಿರುದ್ಧದ ಎರಡು ಅನಧಿಕೃತ ಟೆಸ್ಟ್ (Multi-Day) ಪಂದ್ಯಗಳ ಸರಣಿಗೆ ‘ಇಂಡಿಯಾ ಎ’ ತಂಡದ ನಾಯಕರಾಗಿ ಆಯ್ಕೆಯಾಗಿದ್ದಾರೆ. ಸಾಯಿ ಸುದರ್ಶನ್ ಉಪನಾಯಕರಾಗಿ ಕಾರ್ಯನಿರ್ವಹಿಸಲಿದ್ದಾರೆ. ವೇಗದ ಬೌಲಿಂಗ್ ವಿಭಾಗವನ್ನು ಅಂಶುಲ್ ಕಾಂಬೋಜ್ ಮುನ್ನಡೆಸಲಿದ್ದು, ಕರ್ನಾಟಕದ ವಿಜಯ್‌ಕುಮಾರ್ ವೈಶಾಕ್ ಕೂಡ ಕೆಂಪು ಚೆಂಡಿನ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಇಂಡಿಯಾ ‘ಎ’ ತಂಡಗಳ ವಿವರ:
ಏಕದಿನ ಸರಣಿಯ ತಂಡ:
ರುತುರಾಜ್ ಗಾಯಕ್ವಾಡ್ (ನಾಯಕ), ದೇವದತ್ ಪಡಿಕ್ಕಲ್ (ಉಪನಾಯಕ), ಪ್ರಿಯಾಂಶ್ ಆರ್ಯ, ಸಾಯಿ ಸುದರ್ಶನ್, ರಜತ್ ಪಟೀದಾರ್, ಕುಮಾರ್ ಕುಶಾಗ್ರ (ವಿಕೆಟ್ ಕೀಪರ್), ಪ್ರಭ್‌ಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್), ನಿಶಾಂತ್ ಸಿಂಧು, ವಿಪ್ರಾಜ್ ನಿಗಮ್, ಅರ್ಶಿನ್ ಕುಲಕರ್ಣಿ, ಅರ್ಷದ್ ಖಾನ್, ನಮನ್ ಧೀರ್, ಹಾರ್ದಿಕ್ ಪಾಂಡ್ಯ, ಗುರ್ಜಪ್‌ನೀತ್ ಸಿಂಗ್, ಯಶ್ ಠಾಕೂರ್.
ಅನಧಿಕೃತ ಟೆಸ್ಟ್ ತಂಡ:
ದೇವದತ್ ಪಡಿಕ್ಕಲ್ (ನಾಯಕ), ಸಾಯಿ ಸುದರ್ಶನ್ (ಉಪನಾಯಕ), ಅಮನ್ ಮೊಖಾಡೆ, ಆಯುಷ್ ಪಾಂಡೆ, ಯಶ್ ರಾಥೋಡ್, ಶೇಖ್ ರಶೀದ್, ಕುಮಾರ್ ಕುಶಾಗ್ರ (ವಿಕೆಟ್ ಕೀಪರ್), ಎನ್ ಜಗದೀಶನ್ (ವಿಕೆಟ್ ಕೀಪರ್), ಶಮ್ಸ್ ಮುಲಾನಿ, ತನುಷ್ ಕೊಟ್ಯಾನ್, ತುಷಾರ್ ದೇಶಪಾಂಡೆ, ಅಂಶುಲ್ ಕಾಂಬೋಜ್, ಪ್ರಫುಲ್ ಹಿಂಗೆ, ನಾಚಿಕೇತ್ ಭೂತೆ, ವಿ. ವೈಶಾಕ್.

