ಮಂಗಳೂರು: ಮಂಗಳೂರು-ಸನೂರು ರಾಷ್ಟ್ರೀಯ ಹೆದ್ದಾರಿ 169ರ ನಾಲ್ಕು ಪಥಗಳ ವಿಸ್ತರಣೆ ಕಾಮಗಾರಿಯಿಂದಾಗಿ ಸಂತ್ರಸ್ತರಾಗಿರುವ ಅಂತರರಾಷ್ಟ್ರೀಯ ಕ್ರೀಡಾಪಟು ಹಾಗೂ ಸ್ಥಳೀಯ ರೈತ ಅಶ್ವಿನ್ ನಾಯಕ್ ಅವರ ಎಡಪದವಿನಲ್ಲಿರುವ ಕೃಷಿ ಭೂಮಿಯಲ್ಲಿ ಶೇಖರಣೆಯಾಗಿರುವ ಮಳೆನೀರನ್ನು ತಕ್ಷಣವೇ ತೆರವುಗೊಳಿಸುವಂತೆ ಗುತ್ತಿಗೆ ಸಂಸ್ಥೆ ‘ದಿಲೀಪ್ ಬಿಲ್ಡ್ಕಾನ್ ಲಿಮಿಟೆಡ್’ಗೆ (DBL) ಕರ್ನಾಟಕ ಹೈಕೋರ್ಟ್ ನಿರ್ದೇಶನ ನೀಡಿದೆ.
ಕೇಂದ್ರ ಸರ್ಕಾರ ಅನುಮೋದಿಸಿದ ಮೂಲ ವಿನ್ಯಾಸಕ್ಕೆ ವಿರುದ್ಧವಾಗಿ, ಅವೈಜ್ಞಾನಿಕವಾಗಿ ಹೆದ್ದಾರಿ ನಿರ್ಮಾಣ ಮಾಡಲಾಗುತ್ತಿದೆ ಎಂದು ಆರೋಪಿಸಿ ಅಶ್ವಿನ್ ನಾಯಕ್ ಹೈಕೋರ್ಟ್ ಮೆಟ್ಟಿಲೇರಿದ್ದರು. ನ್ಯಾಯಾಲಯದ ಸೂಚನೆಯಂತೆ ಮಂಗಳೂರು ತಹಶೀಲ್ದಾರ್ ರಮೇಶ್ ಬಾಬು ನೇತೃತ್ವದ ಹಿರಿಯ ಅಧಿಕಾರಿಗಳ ತಂಡ ಸರ್ವೇ ನಡೆಸಿ ವರದಿ ಸಲ್ಲಿಸಿತ್ತು. ಈ ವರದಿಯನ್ನಾಧರಿಸಿ, ಹೆದ್ದಾರಿಯ ಎರಡೂ ಬದಿಗಳಲ್ಲಿ ಸುಮಾರು 1 ಕಿ.ಮೀ ವ್ಯಾಪ್ತಿಯಲ್ಲಿ ಹರಿಯುವ ಮಳೆನೀರು ಹಾಲಿ ಇರುವ ರಾಜಕಾಲುವೆಗೆ ಸೇರುವಂತೆ ತಾತ್ಕಾಲಿಕ ಚರಂಡಿ ನಿರ್ಮಿಸುವಂತೆ ‘ದಿಲೀಪ್ ಬಿಲ್ಡ್ಕಾನ್’ ಸಂಸ್ಥೆಗೆ ಹೈಕೋರ್ಟ್ ಆದೇಶಿಸಿದೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅಶ್ವಿನ್ ನಾಯಕ್, ಎಡಪದವಿನ ಗುಡ್ಡಗಾಡು ಪ್ರದೇಶದಲ್ಲಿ ನೈಸರ್ಗಿಕ ನೀರಿನ ಹರಿವಿಗೆ ವಿರುದ್ಧವಾಗಿ ಚರಂಡಿ ನಿರ್ಮಿಸಲಾಗಿದೆ. ಇದರಿಂದಾಗಿ ತಮ್ಮ 3 ಎಕರೆ ಕೃಷಿ ಭೂಮಿ, ಅಡಿಕೆ ತೋಟ, ಕೆರೆ ಹಾಗೂ ಎರಡು ಬಾವಿಗಳು ಜಲಾವೃತಗೊಂಡಿವೆ ಎಂದು ಆತಂಕ ವ್ಯಕ್ತಪಡಿಸಿದರು.”ನಾವು ಅಭಿವೃದ್ಧಿಗೆ ಎಂದಿಗೂ ವಿರೋಧಿಯಲ್ಲ. ಆದರೆ ಒಬ್ಬರ ಆಸ್ತಿಯನ್ನು ರಕ್ಷಿಸಲು ಮತ್ತೊಬ್ಬರಿಗೆ ಅನ್ಯಾಯ ಮಾಡುವುದು ಸರಿಯಲ್ಲ. ನೀರು ನಿಂತಿದ್ದರಿಂದ ಈಗಾಗಲೇ ೧೦೦ಕ್ಕೂ ಹೆಚ್ಚು ಅಡಿಕೆ ಮರಗಳು ಒಣಗಿ ಹೋಗಿವೆ” ಎಂದು ಅವರು ಅಳಲು ತೋಡಿಕೊಂಡಿದ್ದಾರೆ.
ಇತ್ತೀಚೆಗೆ ಸುರಿದ ಭಾರಿ ಮಳೆಗೆ ಹೆದ್ದಾರಿಯ ಒಂದು ಭಾಗ ಕುಸಿದಿತ್ತು. ಹೈಕೋರ್ಟ್ ನಿರ್ದೇಶನದಂತೆ ಗುತ್ತಿಗೆ ಸಂಸ್ಥೆಯು ಹೆದ್ದಾರಿಯ ಒಂದು ಬದಿಯಲ್ಲಿ ಮಾತ್ರ ಚರಂಡಿ ನಿರ್ಮಿಸಿ, ತೋಟದಲ್ಲಿ ನಿಂತಿದ್ದ ನೀರು ಹೊರಹೋಗಲು ಹೆದ್ದಾರಿಯ ಮಧ್ಯದಲ್ಲೇ ದೊಡ್ಡ ಕಂದಕ ತೋಡಿದೆ. ಮುಂಬರುವ ಮಳೆಗಾಲದ ವೇಳೆಗೆ ರಾಜಕಾಲುವೆಗೆ ಸಂಪರ್ಕಿಸುವ ಶಾಶ್ವತ ಚರಂಡಿ, ತೋಟದ ರಕ್ಷಣೆಗೆ ತಡೆಗೋಡೆ ಹಾಗೂ ಸೂಕ್ತ ರಸ್ತೆ ಸಂಪರ್ಕ ಕಲ್ಪಿಸಬೇಕೆಂದು ನಾಯಕ್ ಆಗ್ರಹಿಸಿದ್ದಾರೆ.
ಇದನ್ನೂ ಓದಿ; ಹನೂರು ಗುಂಡಿನ ಚಕಮಕಿ: ಹತ್ತಿರದಿಂದಲೇ ಶೂಟ್ ಮಾಡಲಾಗಿತ್ತು; ಅರಣ್ಯ ಇಲಾಖೆ ವಾದಕ್ಕೆ ತಿರುಗುಬಾಣವಾದ ಮರಣೋತ್ತರ ಪರೀಕ್ಷೆ ವರದಿ
ಇನ್ನೊಂದೆಡೆ, ಮಿಜಾರು ಬಳಿ ಬ್ರಿಜೇಶ್ ಶೆಟ್ಟಿ ಎಂಬುವವರ ಖಾಸಗಿ ಜಮೀನಿನಲ್ಲಿ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸದೆ ಸರ್ವಿಸ್ ರಸ್ತೆ ನಿರ್ಮಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಇದನ್ನು ವಿರೋಧಿಸಿ ಬ್ರಿಜೇಶ್ ಶೆಟ್ಟಿ ತಮ್ಮ ಜಮೀನಿಗೆ ಬ್ಯಾರಿಕೇಡ್ ಅಳವಡಿಸಿದ್ದಾರೆ. ಭೂಸ್ವಾಧೀನ ಪಡಿಸಿಕೊಂಡು ಸೂಕ್ತ ಪರಿಹಾರ ನೀಡಿದ ಬಳಿಕವಷ್ಟೇ ಕಾಮಗಾರಿ ಮುಂದುವರಿಸಬೇಕೆಂದು ಅವರು ಜಿಲ್ಲಾಡಳಿತಕ್ಕೆ ದೂರು ನೀಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

