Breaking News

ಹನೂರು ಗುಂಡಿನ ಚಕಮಕಿ: ಹತ್ತಿರದಿಂದಲೇ ಶೂಟ್ ಮಾಡಲಾಗಿತ್ತು; ಅರಣ್ಯ ಇಲಾಖೆ ವಾದಕ್ಕೆ ತಿರುಗುಬಾಣವಾದ ಮರಣೋತ್ತರ ಪರೀಕ್ಷೆ ವರದಿ

ಮೈಸೂರು: ಹನೂರು ತಾಲೂಕಿನ ಕಾವೇರಿ ವನ್ಯಜೀವಿ ಧಾಮದಲ್ಲಿ ನಡೆದ ಗುಂಡಿನ ಚಕಮಕಿ ಪ್ರಕರಣದಲ್ಲಿ ಮೃತಪಟ್ಟ ಮೂವರ ಪೈಕಿ ಇಬ್ಬರಿಗೆ ತೀರ ಹತ್ತಿರದಿಂದಲೇ ಗುಂಡು ಹಾರಿಸಲಾಗಿದೆ ಎಂಬ ಅಂಶ ಮರಣೋತ್ತರ ಪರೀಕ್ಷಾ (Postmortem) ವರದಿಯಿಂದ ಬೆಳಕಿಗೆ ಬಂದಿದೆ. ಇದು ಅರಣ್ಯ ಸಿಬ್ಬಂದಿಯ “ಆತ್ಮರಕ್ಷಣೆ ದಾಳಿ” ಎಂಬ ವಾದದ ಮೇಲೆ ಅನುಮಾನದ ನೆರಳು ಚಾಚಿದೆ.

ಆಗಸ್ಟ್ 15 ರಂದು ಕರ್ನಾಟಕ-ತಮಿಳುನಾಡು ಗಡಿಯ ಕಾವೇರಿ ವನ್ಯಜೀವಿ ಧಾಮದೊಳಗೆ ಅರಣ್ಯ ಸಿಬ್ಬಂದಿ ನಡೆಸಿದ ಗುಂಡಿನ ದಾಳಿಯಲ್ಲಿ ಸೆಬಾಸ್ಟಿಯನ್ ಡೇವಿಡ್ ಕುಮಾರ್ (36), ಅಂತೋಣಿ ಸ್ವಾಮಿ ಪಿ (50) ಮತ್ತು ಜಾನ್ ರೋಸ್ ಪೀಟರ್ (42) ಅಸುವಾಗಿದ್ದರು. ಅವರೊಂದಿಗಿದ್ದ ಮಹಿಮಾ ದಾಸ್ ಎಂಬಾತ ಸ್ಥಳದಿಂದ ಓಡಿ ಪರಾರಿಯಾಗಿದ್ದನು.

ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ ನಡೆಸಲಾದ ಮರಣೋತ್ತರ ಪರೀಕ್ಷೆಯ ಪ್ರಕಾರ, ಸೆಬಾಸ್ಟಿಯನ್ ಹಾಗೂ ಅಂತೋಣಿ ಸ್ವಾಮಿ ಅವರ ಮೇಲೆ ಶಾರ್ಟ್‌ಗನ್‌ನಿಂದ (Shotgun) ತೀರಾ ಹತ್ತಿರದಿಂದ ಗುಂಡು ಹಾರಿಸಲಾಗಿದೆ. ತೀವ್ರ ರಕ್ತಸ್ರಾವ ಹಾಗೂ ಆಘಾತದಿಂದ (Haemorrhage and shock) ಇಬ್ಬರೂ ಮೃತಪಟ್ಟಿದ್ದಾರೆ. ಎಡ ಎದೆಯ ಮುಂಭಾಗದಲ್ಲಿ ಗುಂಡು ತಗಲಿದ್ದು, ಪಕ್ಕೆಯ ಮೂಳೆಗಳು (Ribs) ಮುರಿದಿವೆ.

ಕಿಬ್ಬೊಟ್ಟೆಯ ಆಳಕ್ಕೆ (Abdominal Cavity) ಗುಂಡು ತೂರಿಕೊಂಡಿದೆ. ಸಿಟಿ ಸ್ಕ್ಯಾನ್ (CT Scan) ವರದಿಯಲ್ಲಿ ಬಂದೂಕಿನ ಪೆಲೆಟ್ ಗಾಯಗಳಿಂದಾಗಿ ಲೋಹದ ತುಣುಕುಗಳು ಪತ್ತೆಯಾಗಿವೆ. ನಾಲ್ವರು ಶಿಕಾರಿಗಳು ಆಯುಧಗಳೊಂದಿಗೆ ಕಾಡಿನೊಳಗೆ ಅಕ್ರಮವಾಗಿ ಪ್ರವೇಶಿಸಿ ಜಿಂಕೆಯನ್ನು ಬೇಟೆಯಾಡಿದ್ದರೆಂದೂ, ಶರಣಾಗುವಂತೆ ಸೂಚಿಸಿದಾಗ ಅವರು ತಮ್ಮ ಮೇಲೆಯೇ ಗುಂಡು ಹಾರಿಸಿದ್ದರಿಂದ ಆತ್ಮರಕ್ಷಣೆಗಾಗಿ ಪ್ರತ್ಯುತ್ತರ ನೀಡಿದ್ದಾಗಿ ಅರಣ್ಯ ಇಲಾಖೆ ತಿಳಿಸಿತ್ತು.

ಇದನ್ನೂ ಓದಿ: ಧರ್ಮಸ್ಥಳದಲ್ಲಿ ‘ರಾಕಿಂಗ್ ಸ್ಟಾರ್’ ಯಶ್: ಮಂಜುನಾಥ ಸ್ವಾಮಿಯ ದರ್ಶನ ಪಡೆದು ‘ಟಾಕ್ಸಿಕ್’ ಯಶಸ್ಸಿಗೆ ವಿಶೇಷ ಪೂಜೆ

ಆದರೆ, ಮರಣೋತ್ತರ ಪರೀಕ್ಷೆಯಲ್ಲಿ ಹತ್ತಿರದಿಂದ ಗುಂಡು ಹಾರಿಸಿರುವುದು ದೃಢಪಟ್ಟಿರುವುದು ಇಲಾಖೆಯ ಹೇಳಿಕೆಗೆ ವ್ಯತಿರಿಕ್ತವಾಗಿದೆ. ಈ ಘಟನೆಯು ಕರ್ನಾಟಕ ಹಾಗೂ ತಮಿಳುನಾಡು ಎರಡೂ ರಾಜ್ಯಗಳಲ್ಲಿ ತೀವ್ರ ರಾಜಕೀಯ ಸಂಚಲನ ಮೂಡಿಸಿದೆ.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *