ಲಖನೌ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಪ್ರಮುಖ 24 ಪ್ರಸ್ತಾಪಗಳಿಗೆ (24 Proposals) ಅನುಮೋದನೆ ನೀಡಲಾಗಿದೆ.
ಇದರಲ್ಲಿ 60 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಹಿಳೆಯರಿಗೆ ಸರ್ಕಾರಿ ಬಸ್ಗಳಲ್ಲಿ ಆಜೀವ ಉಚಿತ ಪ್ರಯಾಣದ ಸೌಲಭ್ಯ ಹಾಗೂ ಗಂಗಾ ಎಕ್ಸ್ಪ್ರೆಸ್ವೇಯನ್ನು ಉತ್ತರಾಖಂಡದ ಹರಿದ್ವಾರದವರೆಗೆ ವಿಸ್ತರಿಸುವ ಮಹತ್ವದ ನಿರ್ಧಾರಗಳು ಸೇರಿವೆ.ಲೋಕಮಾತಾ ಅಹಿಲ್ಯಾಬಾಯಿ ಮಾತೃಶಕ್ತಿ ಯೋಜನೆ’ (Lokmata Ahilyabai Matrushakti Yojana) ಅಡಿಯಲ್ಲಿ ಉತ್ತರ ಪ್ರದೇಶ ರಸ್ತೆ ಸಾರಿಗೆ ಸಂಸ್ಥೆಯ (UPSRTC) ಎಲ್ಲಾ ಬಸ್ಗಳಲ್ಲಿ 60 ವರ್ಷ ತುಂಬಿದ ಮಹಿಳೆಯರು ಆಜೀವ ಉಚಿತವಾಗಿ ಪ್ರಯಾಣಿಸಬಹುದು.
ರಾಜ್ಯ ಸಾರಿಗೆ ಸಚಿವ ದಯಾಶಂಕರ್ ಸಿಂಗ್ ಅವರು ನೀಡಿರುವ ಮಾಹಿತಿಯಂತೆ, ಈ ಯೋಜನೆಯಿಂದ ರಾಜ್ಯದ 1 ಕೋಟಿಗೂ ಹೆಚ್ಚು ಹಿರಿಯ ಮಹಿಳೆಯರಿಗೆ ಅನುಕೂಲವಾಗಲಿದೆ. ಉಚಿತ ಪ್ರಯಾಣದ ಸೌಲಭ್ಯ ಪಡೆಯಲು ಆಧಾರ್ ಕಾರ್ಡ್ ಅಥವಾ ವೋಟರ್ ಐಡಿ ಕಾರ್ಡ್ನಂತಹ (Voter ID) ಸೂಕ್ತ ಗುರುತಿನ ಚೀಟಿಯನ್ನು ತೋರಿಸುವುದು ಕಡ್ಡಾಯವಾಗಿದೆ.
ರಕ್ಷಾಬಂಧನ ಹಬ್ಬದ ಮುನ್ನಾದಿನದಂದು ಈ ಯೋಜನೆಯನ್ನು ಜಾರಿಗೊಳಿಸಲಾಗಿದ್ದು, ಇದು ಹಿರಿಯ ಮಹಿಳೆಯರ ಕುಟುಂಬ, ಧಾರ್ಮಿಕ, ಸಾಮಾಜಿಕ ಹಾಗೂ ವೈದ್ಯಕೀಯ ಪ್ರಯಾಣದ ಆರ್ಥಿಕ ಹೊರೆಯನ್ನು ಗಣನೀಯವಾಗಿ ತಗ್ಗಿಸಲಿದೆ. ಗಂಗಾ ಎಕ್ಸ್ಪ್ರೆಸ್ವೇಯನ್ನು (Ganga Expressway) ಬಿಜ್ನೋರ್ನಿಂದ ಉತ್ತರಾಖಂಡದ ಹರಿದ್ವಾರದವರೆಗೆ (Haridwar) ವಿಸ್ತರಿಸಲು ಸಂಪುಟ ಅನುಮೋದನೆ ನೀಡಿದೆ.
ಈ ಯೋಜನೆಯಿಂದಾಗಿ ಕುಂಭಮೇಳ ಆಯೋಜಿಸುವ ಪ್ರಮುಖ ಎರಡು ಪುಣ್ಯಕ್ಷೇತ್ರಗಳಾದ ಪ್ರಯಾಗ್ರಾಜ್ ಮತ್ತು ಹರಿದ್ವಾರ ನಗರಗಳ ನಡುವೆ ವೇಗದ ಮತ್ತು ಸುಗಮ ರಸ್ತೆ ಸಂಪರ್ಕ ಏರ್ಪಡಲಿದೆ. ಯೋಜನೆಯ ಅಂದಾಜು ವೆಚ್ಚ ₹10,761 ಕೋಟಿ ಆಗಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

