ರಾಜ್ಯದಲ್ಲಿ ಸ್ಥಗಿತಗೊಳ್ಳಲಿದೆಯೇ ‘108’ ಆಂಬ್ಯುಲೆನ್ಸ್ ಸೇವೆ?: ಇಂದು ರಾತ್ರಿ 8ರೊಳಗೆ ಬೇಡಿಕೆ ಈಡೇರದಿದ್ದರೆ ಸಾಮೂಹಿಕ ರಾಜೀನಾಮೆ ಎಚ್ಚರಿಕೆ

ಬೆಂಗಳೂರು: ರಾಜ್ಯ ಸರ್ಕಾರದ ಆಡಳಿತ ವೈಫಲ್ಯದಿಂದಾಗಿ ರಾಜ್ಯಾದ್ಯಂತ ‘108’ ಆಂಬ್ಯುಲೆನ್ಸ್ ಸೇವೆಗಳು ಸಂಪೂರ್ಣವಾಗಿ ಸ್ಥಗಿತಗೊಳ್ಳುವ ಭೀತಿ ಎದುರಾಗಿದ್ದು, ಕರ್ನಾಟಕದಲ್ಲಿ ಗಂಭೀರ ‘ಆರೋಗ್ಯ ತುರ್ತು ಪರಿಸ್ಥಿತಿ’ (Health Emergency) ನಿರ್ಮಾಣವಾಗುವ ಆತಂಕ ವ್ಯಕ್ತವಾಗಿದೆ ಎಂದು ಎಕ್ಸ್​ ಖಾತೆಯಲ್ಲಿ ಜೆಡಿಎಸ್​​​ ಪೋಸ್ಟ್​ ಮಾಡಿದೆ. ವೇತನ ಪರಿಷ್ಕರಣೆ ಹಾಗೂ ದೈನಂದಿನ ಕರ್ತವ್ಯ ವೇಳಾಪಟ್ಟಿ ಬದಲಾವಣೆಗೆ ಆಗ್ರಹಿಸಿ 108 ಆಂಬ್ಯುಲೆನ್ಸ್ ಸಿಬ್ಬಂದಿ ಹೋರಾಟಕ್ಕೆ ಇಳಿದಿದ್ದು, ಇಂದು ರಾತ್ರಿ 8 ಗಂಟೆಯೊಳಗೆ ತಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸದಿದ್ದರೆ ಸಾಮೂಹಿಕ ರಾಜೀನಾಮೆ ನೀಡುವುದಾಗಿ ರಾಜ್ಯ ಸರ್ಕಾರಕ್ಕೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.

ಅಪಘಾತ, ಹೃದಯಾಘಾತ ಹಾಗೂ ಗರ್ಭಿಣಿಯರ ತುರ್ತು ಹೆರಿಗೆ ಸಂದರ್ಭಗಳಲ್ಲಿ ಗ್ರಾಮೀಣ ಮತ್ತು ನಗರ ಭಾಗದ ಬಡ ಜನತೆಯ ಜೀವರಕ್ಷಕವಾಗಿರುವ 108 ಸೇವೆಯನ್ನು ಕಡೆಗಣಿಸಿರುವುದು ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಯನ್ನು ಸ್ಪಷ್ಟವಾಗಿ ಎತ್ತಿ ತೋರಿಸುತ್ತದೆ ಎಂದು ಜೆಡಿಎಸ್ ಕಿಡಿಕಾರಿದ್ದಾರೆ. “ಆಪತ್ಬಾಂಧವರೆಂದೇ ಕರೆಯಲ್ಪಡುವ ‘108’ ಸಿಬ್ಬಂದಿಯ ಸೇವೆ ವ್ಯತ್ಯಯಗೊಂಡು ರಾಜ್ಯದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ನಿರ್ಮಾಣವಾದರೆ, ಬಡವರ ಅಮೂಲ್ಯ ಪ್ರಾಣಕ್ಕೆ ಯಾರು ಹೊಣೆ?” ಎಂದು ಸರ್ಕಾರವನ್ನು ನೇರವಾಗಿ ಪ್ರಶ್ನಿಸಲಾಗಿದೆ.

ಇದನ್ನೂ ಓದಿ: ಅಂಗನವಾಡಿ ಮಕ್ಕಳ ಆಹಾರ ಸುರಕ್ಷತೆಗೆ ಸಚಿವ ಯು.ಟಿ. ಖಾದರ್ ಸೂಚನೆ: ಮೂಡುಶೆಡ್ಡೆ MSPC ಕೇಂದ್ರಕ್ಕೆ ದಿಢೀರ್ ಭೇಟಿ ನೀಡಿದ ಅಧಿಕಾರಿಗಳು

ಇಲ್ಲಿದೆ ಎಕ್ಸ್​ ಪೋಸ್ಟ್;

ಆರೋಗ್ಯ ಸಚಿವರು ಕೇವಲ ನಿಯೋಗದ ಭೇಟಿಗೆ ಸೀಮಿತವಾಗದೇ, ರಾಜ್ಯ ಸರ್ಕಾರ ತಕ್ಷಣವೇ ಮಧ್ಯಪ್ರವೇಶಿಸಬೇಕು. ಸೇವಾ ಪೂರೈಕೆದಾರ ಜಿವಿಕೆ (GVK) ಸಂಸ್ಥೆ ಹಾಗೂ ನೌಕರರ ನಡುವಿನ ಬಿಕ್ಕಟ್ಟನ್ನು ತಕ್ಷಣವೇ ಬಗೆಹರಿಸಿ, ನೌಕರರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವ ಮೂಲಕ ಜೀವ ರಕ್ಷಕ ಸೇವೆಯು ಸುಗಮವಾಗಿ ನಡೆಯುವಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಲಾಗಿದೆ. ಕಾಂಗ್ರೆಸ್ ಸರ್ಕಾರ ಕೇವಲ ಭರವಸೆಗಳನ್ನು ನೀಡುತ್ತಾ ಬಡವರ ಪ್ರಾಣದ ಜೊತೆ ಆಟವಾಡುವುದನ್ನು ನಿಲ್ಲಿಸಬೇಕು. ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ರಾಜ್ಯದ ಜನತೆಯೇ ಸರ್ಕಾರಕ್ಕೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಕಠಿಣ ಎಚ್ಚರಿಕೆ ನೀಡಲಾಗಿದೆ.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *