ಬಂಟ್ವಾಳ: ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಬಂಟ್ವಾಳ ಹಾಗೂ ಕುಕ್ಕಾಜೆಯ ಪ್ರಗತಿ ಆಂಗ್ಲ ಮಾಧ್ಯಮ ಶಾಲೆಯ ಜಂಟಿ ಆಶ್ರಯದಲ್ಲಿ ಮಂಚಿ ವಲಯ ಮಟ್ಟದ ಬೃಹತ್ ಕ್ರೀಡಾಕೂಟವು ಸೆಪ್ಟೆಂಬರ್ 21 ರಂದು ಮಂಚಿ ಕೊಳ್ನಾಡು ಪ್ರೌಢಶಾಲಾವರಣದ ನೂಜಿಬೈಲು ಅನುದಾನಿತ ಶಾಲಾ ಕ್ರೀಡಾಂಗಣದಲ್ಲಿ ಅತ್ಯಂತ ವಿಜೃಂಭಣೆಯಿಂದ ಜರುಗಿತು. ಈ ಕ್ರೀಡಾಕೂಟದಲ್ಲಿ ಮಂಚಿ ವಲಯದ 37 ಶಾಲೆಗಳಿಂದ 550ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ ತಮ್ಮ ಕ್ರೀಡಾ ಪ್ರತಿಭೆಯನ್ನು ಪ್ರದರ್ಶಿಸಿದರು.
ಕಾರ್ಯಕ್ರಮವನ್ನು ದೀಪ ಬೆಳಗಿ ಉದ್ಘಾಟಿಸಿದ ಮಂಚಿ ಗ್ರಾಮ ಪಂಚಾಯತ್ ಕಾರ್ಯದರ್ಶಿ ಸುರೇಶ್ ಅವರು ಕ್ರೀಡಾಪಟುಗಳಿಗೆ ಶುಭ ಹಾರೈಸಿದರು. ಕೊಳ್ನಾಡು ಸರಕಾರಿ ಪ್ರೌಢಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಶಿವಶಂಕರ ರಾವ್ ಮಂಚಿ ಮಾತನಾಡಿ, “ಕ್ರೀಡಾ ಪ್ರತಿಭೆಗಳು ಗ್ರಾಮಗಳಿಂದ ಅರಳಿ ರಾಷ್ಟ್ರೀಯ ಮಟ್ಟದಲ್ಲಿ ಬೆಳಗುವಂತಾಗಬೇಕು. ಸತತ ಅಭ್ಯಾಸ ಹಾಗೂ ಪರಿಶ್ರಮದಿಂದ ಉತ್ತಮ ಕ್ರೀಡಾಪಟುವಾಗಿ ಬೆಳೆದು ದೇಶಕ್ಕೆ ಕೊಡುಗೆ ನೀಡಬೇಕು” ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಗತಿ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕರಾದ ಸುಭೋದ್ ಭಂಡಾರಿ ಮಾತನಾಡಿ, “ಕ್ರೀಡೆಯಲ್ಲಿ ಸೋಲು-ಗೆಲುವಿಗಿಂತ ದೈಹಿಕ ಮತ್ತು ಮಾನಸಿಕ ಸದೃಢತೆ ಮುಖ್ಯ. ವಿಶೇಷ ಕೌಶಲ್ಯ ಹಾಗೂ ತರಬೇತಿ ಪಡೆಯುವ ಮೂಲಕ ಹೆಚ್ಚಿನ ಸಾಧನೆ ಮಾಡುವ ಕನಸನ್ನು ಮಕ್ಕಳಲ್ಲಿ ತುಂಬಬೇಕಿದೆ” ಎಂದು ಅಭಿಪ್ರಾಯಪಟ್ಟರು. ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದ ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ಮಾಲತಿ, “ಶಾಲಾ ಪಠ್ಯದ ಜೊತೆಗೆ ಕ್ರೀಡೆಯನ್ನು ಸಹಪಠ್ಯವಾಗಿ ಸರ್ಕಾರ ಪ್ರೋತ್ಸಾಹಿಸುತ್ತಿದೆ. ಶಿಕ್ಷಣ ಇಲಾಖೆಯು ವಿದ್ಯಾರ್ಥಿಗಳ ಕ್ರೀಡಾ ಭವಿಷ್ಯವನ್ನು ರೂಪಿಸುತ್ತಿದ್ದು, ಎಲ್ಲರೂ ಇದರ ಪ್ರಯೋಜನ ಪಡೆಯಬೇಕು” ಎಂದು ಕರೆ ನೀಡಿದರು.
ಇದನ್ನೂ ಓದಿ: ಮಂಡ್ಯ: ಟ್ರ್ಯಾಕ್ಟರ್ಗೆ ಕೆಎಸ್ಆರ್ಟಿಸಿ ಬಸ್ ಡಿಕ್ಕಿ; ಚಾಲಕ ಸ್ಥಳದಲ್ಲೇ ದಾರುಣ ಸಾವು
17ರ ವಯೋಮಾನದ ಬಾಲಕ ಹಾಗೂ ಬಾಲಕಿಯರ ವಿಭಾಗ: ಮಂಚಿ – ಕೊಳ್ನಾಡು ಪ್ರೌಢಶಾಲೆ (ಸಮಗ್ರ ಪ್ರಶಸ್ತಿ)
14ರ ವಯೋಮಾನದ ಬಾಲಕಿಯರ ವಿಭಾಗ: ಫಜೀರು ಆವೇ ಮರಿಯ ಶಾಲೆ (ಸಮಗ್ರ ಪ್ರಶಸ್ತಿ)
14ರ ವಯೋಮಾನದ ಬಾಲಕರ ವಿಭಾಗ: ಸಜಿಪ ಮೂಡ ಶಾಲೆ (ಸಮಗ್ರ ಪ್ರಶಸ್ತಿ)
ಉದ್ಘಾಟನಾ ಹಾಗೂ ಬಹುಮಾನ ವಿತರಣಾ ಸಮಾರಂಭದ ವೇದಿಕೆಯಲ್ಲಿ ಪ್ರಾಥಮಿಕ ಶಾಲಾ ಜಿಲ್ಲಾಧ್ಯಕ್ಷ ಶಿವಪ್ರಸಾದ್ ಶೆಟ್ಟಿ, ಮಂಚಿ ವಲಯ ಸಂಪನ್ಮೂಲ ವ್ಯಕ್ತಿ ರಮೇಶ್, ಮಂಚಿ-ಕೊಳ್ನಾಡು ಪ್ರೌಢಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಸುಶೀಲ, ನಿವೃತ್ತ ಮುಖ್ಯ ಶಿಕ್ಷಕ ಗೋಪಾಲ್, ವಲಯ ಸಂಪನ್ಮೂಲ ವ್ಯಕ್ತಿ ಶ್ರೀಮತಿ ಇಂದಿರಾ, ನೂಜಿಬೈಲು ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಸವಿತಾ, ಪ್ರಗತಿ ಶಾಲೆಯ ಮುಖ್ಯಸ್ಥೆ ಶ್ರೀಮತಿ ಶೋಭಿತಾ ಎಸ್ ಭಂಡಾರಿ, ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಶ್ರೀಮತಿ ಆಶಾ, ಶಿಕ್ಷಣ ಸಂಯೋಜಕ ರಮಾನಂದ ನೂಜಿಪ್ಪಾಡಿ ಹಾಗೂ ನೋಡಲ್ ದೈಹಿಕ ಶಿಕ್ಷಣ ಶಿಕ್ಷಕರು ಭಾಗವಹಿಸಿದ್ದರು. ಪ್ರಗತಿ ಆಂಗ್ಲ ಮಾಧ್ಯಮ ಶಾಲಾ ಮುಖ್ಯ ಶಿಕ್ಷಕಿ ಮೋಹಿನಿ ಶೆಟ್ಟಿ ಸ್ವಾಗತಿಸಿ, ಶಿಕ್ಷಕಿ ನಯನ ಕಾರ್ಯಕ್ರಮ ನಿರೂಪಿಸಿ ಧನ್ಯವಾದ ಸಮರ್ಪಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

