Breaking News

ನಂದಿನಿ ಹಾಲಿನ ದರ ಲೀಟರ್‌ಗೆ 8 ರಿಂದ 10 ರೂ. ಏರಿಕೆಗೆ ಮನವಿ

ಬೆಂಗಳೂರು: ರಾಜ್ಯದಲ್ಲಿ ನಂದಿನಿ (Nandini) ಹಾಲಿನ ಖರೀದಿ ಮತ್ತು ಮಾರಾಟ ದರವನ್ನು ಪ್ರತಿ ಲೀಟರ್‌ಗೆ ₹8 ರಿಂದ ₹10 ರಷ್ಟು ಹೆಚ್ಚಳ ಮಾಡುವಂತೆ ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳ (KMF) ಹಾಗೂ ವಿವಿಧ ಜಿಲ್ಲಾ ಹಾಲು ಒಕ್ಕೂಟಗಳ ನಿಯೋಗವು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಅಧಿಕೃತ ಮನವಿ ಸಲ್ಲಿಸಿದೆ.

ವಿಧಾನಸೌಧದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿಯಾದ ಹಾಲು ಒಕ್ಕೂಟಗಳ ನಿಯೋಗವು, ಹೈನುಗಾರರು ಎದುರಿಸುತ್ತಿರುವ ತೀವ್ರ ಆರ್ಥಿಕ ಸಂಕಷ್ಟ ಹಾಗೂ ಉತ್ಪಾದನಾ ವೆಚ್ಚ ಹೆಚ್ಚಾಗಿರುವ ಕುರಿತು ಸುದೀರ್ಘ ಸಮಾಲೋಚನೆ ನಡೆಸಿತು. ಒಕ್ಕೂಟಗಳ ಮನವಿ ಆಲಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ದರ ಹೆಚ್ಚಳದ ನಿರ್ಧಾರ ಕೈಗೊಳ್ಳುವ ಮುನ್ನ ಹೈನುಗಾರಿಕೆ ವಲಯದ ನೈಜ ಪರಿಸ್ಥಿತಿಯ ಕುರಿತು ಸಮಗ್ರ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಸಿಎಂ ಕೇಳಿದ ಪ್ರಮುಖ ವಿವರಗಳು:

ಕಳೆದ 10 ವರ್ಷಗಳಲ್ಲಿ ಪಶು ಆಹಾರದ ದರದಲ್ಲಾಗಿರುವ ಶೇಕಡಾವಾರು ಏರಿಕೆ.

ಪ್ರಸ್ತುತ ಪ್ರತಿ ಲೀಟರ್ ಹಾಲು ಉತ್ಪಾದನೆಗೆ ರೈತರಿಗೆ ತಗಲುತ್ತಿರುವ ನೈಜ ವೆಚ್ಚ.

ಜಿಲ್ಲೆಗಳಲ್ಲಿ ಉತ್ಪಾದನೆಯಾಗುವ ಒಟ್ಟು ಹಾಲಿನ ಪ್ರಮಾಣ ಹಾಗೂ ಕೆಎಂಎಫ್‌ ಹೊರತುಪಡಿಸಿ ಖಾಸಗಿ ಸಂಸ್ಥೆಗಳಿಗೆ ಮಾರಾಟವಾಗುತ್ತಿರುವ ಹಾಲಿನ ಪ್ರಮಾಣ.

ನೆರೆಯ ರಾಜ್ಯಗಳಲ್ಲಿ ಹಾಲಿನ ಖರೀದಿ ಮತ್ತು ಮಾರಾಟ ದರಗಳ ವಿವರವಾದ ಪಟ್ಟಿ.

“ಮೇವೂ ದುಬಾರಿ, ಹೈನುಗಾರರು ಸಂಕಷ್ಟದಲ್ಲಿದ್ದಾರೆ”: ಕೆಎಂಎಫ್ ನಿಯೋಗದ ವಿವರಣೆ:

ನಿಯೋಗದ ಪರವಾಗಿ ಸುದೀರ್ಘವಾಗಿ ಮಾತನಾಡಿದ ಬಮುಲ್ (BAMUL) ಅಧ್ಯಕ್ಷ ಡಿ.ಕೆ. ಸುರೇಶ್, ಹೈನುಗಾರಿಕೆ ಕ್ಷೇತ್ರ ಎದುರಿಸುತ್ತಿರುವ ಸವಾಲುಗಳನ್ನು ಸಿಎಂ ಮುಂದೆ ಬಿಚ್ಚಿಟ್ಟರು:

ಹೆಚ್ಚಿದ ನಿರ್ವಹಣಾ ವೆಚ್ಚ: ಪಶು ಆಹಾರ, ಮೇವು, ಔಷಧೋಪಚಾರ ಹಾಗೂ ಸಾಗಣೆ ವೆಚ್ಚಗಳು ನಿರಂತರವಾಗಿ ಏರಿಕೆಯಾಗುತ್ತಿರುವುದರಿಂದ ಹಾಲಿನ ಉತ್ಪಾದನಾ ವೆಚ್ಚ ಗಣನೀಯವಾಗಿ ಹೆಚ್ಚಾಗಿದೆ.

ರೈತರ ಆದಾಯ ಕುಸಿತ: ಬರ ಪರಿಸ್ಥಿತಿಯಿಂದಾಗಿ ಕೃಷಿ ಆದಾಯ ಕುಸಿದಿದ್ದು, ಹಸಿರು ಮೇವಿನ ಅಭಾವದಿಂದಾಗಿ ರೈತರು ದನಕರುಗಳನ್ನು ನಿರ್ವಹಿಸಲು ಪರದಾಡುತ್ತಿದ್ದಾರೆ.

ಖಾಸಗಿ ಡೇರಿಗಳ ಪೈಪೋಟಿ: ಖಾಸಗಿ ಸಂಸ್ಥೆಗಳು ಹಾಲಿಗೆ ಹೆಚ್ಚಿನ ಬೆಲೆ ನೀಡಿ ಶೇಖರಣೆ ಮಾಡುತ್ತಿರುವುದರಿಂದ, ಸಹಕಾರ ಒಕ್ಕೂಟಗಳಿಗೆ ಹಾಲು ಸಂಗ್ರಹಿಸಲು ತೀವ್ರ ಸ್ಪರ್ಧೆ ಎದುರಾಗಿದೆ. ಗ್ರಾಹಕರ ಹಿತದೃಷ್ಟಿಯಿಂದ ಕಳೆದ ಒಂದೂವರೆ ವರ್ಷದಿಂದ ಕೆಎಂಎಫ್ ಹಾಲಿನ ದರ ಏರಿಸಿಲ್ಲ ಎಂದು ವಿವರಿಸಿದರು. ಕರ್ನಾಟಕ ಹಾಗೂ ನೆರೆಯ ರಾಜ್ಯಗಳಲ್ಲಿನ ಹಾಲಿನ ಖರೀದಿ ಮತ್ತು ಮಾರಾಟ ದರಗಳ ವ್ಯತ್ಯಾಸವನ್ನು ಡಿ.ಕೆ. ಸುರೇಶ್ ಅಂಕಿ-ಅಂಶಗಳ ಸಮೇತ ಪ್ರಸ್ತಾಪಿಸಿದರು.

ಇದನ್ನೂ ಓದಿ: ಪದ್ಮವಿಭೂಷಣ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರ ಜನ್ಮಶತಮಾನೋತ್ಸವ ಲೋಗೋ ಅನಾವರಣಗೊಳಿಸಿದ ಪ್ರಧಾನಿ ಮೋದಿ

ರೈತರಿಂದ ಖರೀದಿ ದರ (ಟೋನ್ಡ್ ಹಾಲು – ಪ್ರತಿ ಲೀಟರ್‌ಗೆ):

ಕರ್ನಾಟಕ (KMF): ₹35.00

ಆಂಧ್ರಪ್ರದೇಶ: ₹41.50

ಮಹಾರಾಷ್ಟ್ರ: ₹41.00

ಕೇರಳ: ₹41.80

ತಮಿಳುನಾಡು: ₹42.24

ನೆರೆಯ ರಾಜ್ಯಗಳ ಗರಿಷ್ಠ ಮಾರಾಟ ದರಕ್ಕೆ ಹೋಲಿಸಿದರೆ ಕರ್ನಾಟಕದಲ್ಲಿ ಪ್ರತಿ ಲೀಟರ್ ಹಾಲಿನ ದರ ಕನಿಷ್ಠ ₹12 ರಷ್ಟು ಕಡಿಮೆಯಿದೆ ಎಂದು ಒಕ್ಕೂಟ ತಿಳಿಸಿದೆ. ಅಧಿಕಾರಿಗಳು ನೀಡುವ ಸಮಗ್ರ ವರದಿಯ ಆಧಾರದ ಮೇಲೆ ಸರ್ಕಾರ ನಂದಿನಿ ಹಾಲಿನ ದರ ಪರಿಷ್ಕರಣೆಯ ಕುರಿತು ಅಂತಿಮ ನಿರ್ಧಾರ ಕೈಗೊಳ್ಳುವ ನಿರೀಕ್ಷೆಯಿದೆ.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *