ಉತ್ತರ ಪ್ರದೇಶ : ಕೋಳಿ ಮಾಂಸದ ಸಾರು ಮಾಡುವ ವಿಷಯಕ್ಕೆ ಸಂಬಂಧಿಸಿದಂತೆ ದಂಪತಿ ನಡುವೆ ನಡೆದ ತೀವ್ರ ಗಲಾಟೆಯ ನಡುವೆ, 6 ವರ್ಷದ ಬಾಲಕಿಯೊಬ್ಬಳು ದಿಗಿಲುಗೊಂಡು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿರುವ ದಾರುಣ ಘಟನೆ ಉತ್ತರ ಪ್ರದೇಶದ ಗೋಂಡಾ ಜಿಲ್ಲೆಯ ಹತಿಹಿ ಗ್ರಾಮದಲ್ಲಿ ನಡೆದಿದೆ. ಸಾಕ್ಷ್ಯಾಧಾರಗಳ ಮೇರೆಗೆ ಪೊಲೀಸರು ಬಾಲಕಿಯ ತಂದೆಯನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.
ನಡೆದಿದ್ದೇನು?
ಹತಿಹಿ ಗ್ರಾಮದ ನಿವಾಸಿ ಪ್ರಮೋದ್ ಗೌತಮ್ (35) ಎಂಬಾತ ಗುರುವಾರ ಸಾಯಂಕಾಲ ಮದ್ಯಪಾನ ಮಾಡಿ ಮನೆಗೆ ಕೋಳಿ ಮಾಂಸವನ್ನು ತಂದಿದ್ದ. ಇದನ್ನು ಅಡುಗೆ ಮಾಡುವ ವಿಷಯಕ್ಕೆ ಸಂಬಂಧಿಸಿದಂತೆ ಆತನ ಹಾಗೂ ಪತ್ನಿ ಲಕ್ಷ್ಮಿ ನಡುವೆ ತೀವ್ರ ವಾಗ್ವಾದ ಶುರುವಾಗಿದೆ. ಗಲಾಟೆ ವಿಕೋಪಕ್ಕೆ ತಿರುಗಿ ಪ್ರಮೋದ್ ತನ್ನ ಪತ್ನಿಯ ಮೇಲೆ ಹಲ್ಲೆ ನಡೆಸಲು ಪ್ರಾರಂಭಿಸಿದ್ದಾನೆ. ಈ ಜಗಳದ ಸಮಯದಲ್ಲಿ ಅವರ 6 ವರ್ಷದ ಮಗಳು ಮಹಕ್ ತೀವ್ರ ಅಸ್ವಸ್ಥಗೊಂಡಿದ್ದಾಳೆ. ಆಕೆಗೆ ಗಾಯವಾದ ಸನ್ನಿವೇಶ ಇನ್ನೂ ಸ್ಪಷ್ಟವಾಗಿ ತಿಳಿದುಬಂದಿಲ್ಲ. ತಕ್ಷಣವೇ ಕುಟುಂಬಸ್ಥರು ಮಗುವನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದರಾದರೂ, ಪರೀಕ್ಷಿಸಿದ ವೈದ್ಯರು ಬಾಲಕಿ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.
ಇದನ್ನೂ ಓದಿ: ಮಗನಿಗೆ ಕಾರು ಕೊಟ್ಟು ಅನಾಹುತ ತಂದಿಟ್ಟ ತಾಯಿ!: ಮಗುವಿನ ಪಾಲನೆ ಮಾಡುವ ಅರ್ಹತೆ ಇದೆಯೇ? ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ
ಪೋಸ್ಟ್‌ಮಾರ್ಟಂ ವರದಿ ನಂತರ ಸ್ಪಷ್ಟನೆ – ಪೊಲೀಸರ ತನಿಖೆ:
ಘಟನೆಯ ಮಾಹಿತಿ ತಿಳಿದ ತಕ್ಷಣವೇ ಸ್ಥಳಕ್ಕಮಗಮಿಸಿದ ಪೊಲೀಸರು ಬಾಲಕಿಯ ಮೃತದೇಹವನ್ನು ವಶಕ್ಕೆ ಪಡೆದು ಪೋಸ್ಟ್‌ಮಾರ್ಟಂ ಪರೀಕ್ಷೆಗೆ ರವಾನಿಸಿದ್ದಾರೆ. ಗೋಂಡಾ ಹೆಚ್ಚುವರಿ ಎಸ್‌ಪಿ ನಿತೀಶ್ ಸಿಂಗ್ ಮಾತನಾಡಿ, “ಬಾಲಕಿಯ ದೇಹದ ಮೇಲೆ ಯಾವುದೇ ಮೇಲ್ನೋಟದ ಗಾಯದ ಗುರುತುಗಳಾಗಲಿ ಅಥವಾ ಘಟನಾ ಸ್ಥಳದಲ್ಲಿ ರಕ್ತದ ಕಲೆಗಳಾಗಲಿ ಕಂಡುಬಂದಿಲ್ಲ. ಪೋಸ್ಟ್‌ಮಾರ್ಟಂ ವರದಿ ಬಂದ ನಂತರವೇ ಸಾವಿಗೆ ನಿಖರ ಕಾರಣ ತಿಳಿಯಲಿದೆ” ಎಂದು ಸ್ಪಷ್ಟಪಡಿಸಿದ್ದಾರೆ. ವಿಧಿವಿಜ್ಞಾನ (ಫೊರೆನ್ಸಿಕ್) ತಂಡ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಬಾಲಕಿಯ ತಂದೆ ಪ್ರಮೋದ್ ಗೌತಮ್‌ನನ್ನು ವಶಕ್ಕೆ ಪಡೆಯಲಾಗಿದ್ದು, ಮುಂದಿನ ಕಾನೂನು ಕ್ರಮ ಜರುಗಿಸಲಾಗುತ್ತಿದೆ.

