ಮಹಾರಾಷ್ಟ್ರ: ‘ಕುಂಡಲಿ ದೋಷ’ ಪರಿಹಾರ ಮಾಡುವುದಾಗಿ ನಂಬಿಸಿ 17 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಧಾರ್ಮಿಕ ಪೂಜೆಯ ಹೆಸರಿನಲ್ಲಿ ನಿರಂತರ ಅತ್ಯಾಚಾರ ಎಸಗಿದ್ದ ನಕಲಿ ಬಾಬಾನನ್ನು ಮಹಾರಾಷ್ಟ್ರದ ಲಾತೂರ್ ಜಿಲ್ಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಲಾತೂರ್ ನಗರದ ನಿವಾಸಿ ರಾಮೇಶ್ವರ್ ರಾಮದಾಸಿ ಮಹಾರಾಜ್ ಎಂದು ಗುರುತಿಸಲಾಗಿದೆ.
ಘಟನೆಯ ವಿವರಗಳ ಪ್ರಕಾರ, ಅಪ್ರಾಪ್ತ ಬಾಲಕಿಯ ಜಾತಕ/ಕುಂಡಲಿ ಸಿದ್ಧಪಡಿಸುವ ಸಲುವಾಗಿ ಪೋಷಕರು ಈ ನಕಲಿ ಬಾಬಾನನ್ನು ಸಂಪರ್ಕಿಸಿದ್ದರು. ಈ ವೇಳೆ ಬಾಲಕಿಯ ಜಾತಕದಲ್ಲಿ ಗಂಭೀರ ‘ಕುಂಡಲಿ ದೋಷ’ವಿದೆ ಎಂದು ಹೆದರಿಸಿದ್ದ ಆರೋಪಿ, ವಿಶೇಷ ಪೂಜೆ ನೆರವೇರಿಸಿದರೆ ಮಾತ್ರ ದೋಷ ನಿವಾರಣೆಯಾಗುತ್ತದೆ ಎಂದು ಪೋಷಕರನ್ನು ನಂಬಿಸಿದ್ದ. ಆರೋಪಿಯ ಮಾತನ್ನು ಸತ್ಯವೆಂದು ನಂಬಿದ ಪೋಷಕರು ಮನೆಗೆ ಪೂಜೆ ಇಟ್ಟುಕೊಳ್ಳಲು ಒಪ್ಪಿಕೊಂಡಿದ್ದರು.
ಪೂಜೆ ಮಾಡುವ ನೆಪದಲ್ಲಿ ಬಾಲಕಿಯ ಮನೆಗೆ ಬಂದ ರಾಮದಾಸಿ, ವಿಶೇಷ ವಿಧಿವಿಧಾನಗಳಿಗಾಗಿ ಬಾಲಕಿಯನ್ನು ಕೋಣೆಯಲ್ಲಿ ತನ್ನೊಂದಿಗೆ ಏಕಾಂಗಿಯಾಗಿ ಬಿಟ್ಟು ಹೊರಹೋಗುವಂತೆ ಪೋಷಕರಿಗೆ ಸೂಚಿಸಿದ್ದ. ಪೋಷಕರು ಹೊರಗೆ ತೆರಳುತ್ತಿದ್ದಂತೆ, “ನನ್ನೊಂದಿಗೆ ದೈಹಿಕ ಸಂಪರ್ಕ ಬೆಳೆಸಿದರೆ ಮಾತ್ರ ಜಾತಕದಲ್ಲಿರುವ ದೋಷ ನಿವಾರಣೆಯಾಗುತ್ತದೆ” ಎಂದು ಬಾಲಕಿಯನ್ನು ಮಾನಸಿಕವಾಗಿ ಮೈಂಡ್ ಗೇಮ್ ನಡೆಸಿ ಅತ್ಯಾಚಾರ ಎಸಗಿದ್ದ. ಅಷ್ಟೇ ಅಲ್ಲದೆ, ಈ ವಿಷಯವನ್ನು ಯಾರ ಮುಂದಾದರೂ ಬಾಯಿಬಿಟ್ಟರೆ ಜಾತಕದ ದೋಷ ಎಂದಿಗೂ ನಿವಾರಣೆಯಾಗುವುದಿಲ್ಲ ಎಂದು ಬಾಲಕಿಗೆ ಬೆದರಿಕೆ ಹಾಕಿದ್ದ.
ಇದನ್ನೂ ಓದಿ: ಮಗನಿಗೆ ಕಾರು ಕೊಟ್ಟು ಅನಾಹುತ ತಂದಿಟ್ಟ ತಾಯಿ!: ಮಗುವಿನ ಪಾಲನೆ ಮಾಡುವ ಅರ್ಹತೆ ಇದೆಯೇ? ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ
ಆರೋಪಿಯ ಬೆದರಿಕೆಗೆ ಹೆದರಿ ಬಾಲಕಿ ಸುಮ್ಮನಿದ್ದಳು. ಆದರೆ ಇತ್ತೀಚೆಗೆ ಬಾಲಕಿ ಗರ್ಭಿಣಿಯಾದಾಗ ಸಂಶಯಗೊಂಡ ಪೋಷಕರು ವಿಚಾರಿಸಿದಾಗ ನಕಲಿ ಬಾಬಾ ಎಸಗಿದ ದೌರ್ಜನ್ಯದ ಸತ್ಯಾಂಶ ಹೊರಬಿದ್ದಿದೆ. ತಕ್ಷಣವೇ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿ ರಾಮೇಶ್ವರ್ ರಾಮದಾಸಿ ಮಹಾರಾಜ್ ವಿರುದ್ಧ, ಪೋಕ್ಸೋ ಕಾಯಿದೆ (POCSO Act), ಮಹಾರಾಷ್ಟ್ರ ಮೂಢನಂಬಿಕೆ ಮತ್ತು ಮಾಟಮಂತ್ರ ನಿಷೇಧ ಕಾಯಿದೆ, ಭಾರತೀಯ ನ್ಯಾಯ ಸಂಹಿತೆ (BNS) ಯ ವಿವಿಧ ಕಲಂಗಳು ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಆತನನ್ನು ಬಂಧಿಸಿದ್ದಾರೆ. ನ್ಯಾಯಾಲಯಕ್ಕೆ ಹಾಜರುಪಡಿಸಲಾದ ಆರೋಪಿಯನ್ನು 4 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.

