ದೆಹಲಿ : ಪ್ಯಾಕ್ ಮಾಡಿದ ಆಹಾರ ಪದಾರ್ಥಗಳ ಮೇಲೆ ‘ಫ್ರಂಟ್-ಆಫ್-ಪ್ಯಾಕೇಜ್ ಲೇಬಲಿಂಗ್’ (FoPL – ಮುಂಭಾಗದ ಪೌಷ್ಟಿಕಾಂಶದ ಲೇಬಲ್) ಜಾರಿಗೊಳಿಸಲು ಕಾಲಾವಕಾಶ ಕೇಳಿದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವನ್ನು (FSSAI) ಸುಪ್ರೀಂ ಕೋರ್ಟ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ದೇಶದ ನಾಗರಿಕರ ಆರೋಗ್ಯಕ್ಕೆ ಸಂಬಂಧಿಸಿದ ಅತ್ಯಂತ ಸೂಕ್ಷ್ಮ ವಿಷಯದಲ್ಲಿ ಪ್ರಾಧಿಕಾರವು ಇಷ್ಟೊಂದು ಸಮಯವನ್ನು ಏಕೆ ವ್ಯರ್ಥ ಮಾಡಲು ಬಯಸುತ್ತದೆ ಎಂದು ಕೋರ್ಟ್ ಪ್ರಶ್ನಿಸಿದೆ. ನ್ಯಾಯಮೂರ್ತಿಗಳಾದ ಜಸ್ಟಿಸ್ ಜಿ. ಬಿ. ಪಾರ್ದಿವಾಲಾ ಹಾಗೂ ಜಸ್ಟಿಸ್ ಕೆ. ವಿನೋದ್ ಚಂದ್ರನ್ ಅವರನ್ನೊಳಗೊಂಡ ಪೀಠವು ಈ ಕುರಿತು ವಿಚಾರಣೆ ನಡೆಸಿ ತನ್ನ ಆದೇಶವನ್ನು ಕಾಯ್ದಿರಿಸಿದೆ.
ಫ್ರಂಟ್-ಆಫ್-ಪ್ಯಾಕೇಜ್ ಲೇಬಲಿಂಗ್ ಎಂಬುದು ನಾವು ಖರೀದಿಸುವ ಪ್ಯಾಕ್ ಮಾಡಿದ ಆಹಾರ ಪದಾರ್ಥಗಳ (Packaged Foods) ಪ್ರಮುಖ ಮುಂಭಾಗದಲ್ಲೇ ಇರುವ ಗ್ರಾಫಿಕ್ ರೂಪದ ಪೌಷ್ಟಿಕಾಂಶದ ಮಾಹಿತಿಯಾಗಿದೆ. ಆಹಾರದಲ್ಲಿ ಎಷ್ಟು ಪ್ರಮಾಣದ ಸಕ್ಕರೆ, ಉಪ್ಪು, ಕೊಬ್ಬು (Fat) ಮತ್ತು ಕ್ಯಾಲೋರಿಗಳಿವೆ ಎಂಬುದನ್ನು ಗ್ರಾಹಕರು ಸುಲಭವಾಗಿ ಗ್ರಹಿಸಲು ಇದು ನೆರವಾಗುತ್ತದೆ. ಗ್ರಾಹಕರು ಆರೋಗ್ಯಕರ ಆಹಾರ ಪದಾರ್ಥಗಳನ್ನು ಆಯ್ಕೆ ಮಾಡಿಕೊಳ್ಳಲು ಹಾಗೂ ಜಾಗರೂಕರಾಗಿರಲು ಈ ಲೇಬಲಿಂಗ್ ವ್ಯವಸ್ಥೆ ಸಹಕಾರಿಯಾಗಿದೆ.
ವಿಚಾರಣೆ ವೇಳೆ FSSAI ನ ವಿಳಂಬ ನೀತಿಯನ್ನು ಖಂಡಿಸಿದ ಸುಪ್ರೀಂ ಕೋರ್ಟ್ ಪೀಠವು ಹಲವು ಖಡಕ್ ಪ್ರಶ್ನೆಗಳನ್ನು ಎಸೆದಿದೆ. “ದೇಶದ ನಾಗರಿಕರ ಆರೋಗ್ಯದ ವಿಷಯಕ್ಕೆ ಸಂಬಂಧಿಸಿದ ಇಷ್ಟೊಂದು ಪ್ರಮುಖ ಪ್ರಕ್ರಿಯೆಯಲ್ಲಿ ಎಫ್‌ಎಸ್‌ಎಸ್‌ಎಐ ಏಕೆ ಇಷ್ಟೊಂದು ಸಮಯವನ್ನು ವ್ಯರ್ಥ ಮಾಡಲು ಬಯಸುತ್ತದೆ?, ಈ ನಿಯಮಗಳನ್ನು ಕಡ್ಡಾಯಗೊಳಿಸದೆ ಒಂದು ವರ್ಷದವರೆಗೆ ‘ಸ್ವೇಚ್ಛೆಯ ಪಾಲನೆ’ (Voluntary Compliance) ನೀಡಲು ನೀಡುತ್ತಿರುವ ಕಾರಣವೇನು? ಸಾರ್ವಜನಿಕರ ಆಕ್ಷೇಪಣೆಗಳನ್ನು ಆಹ್ವಾನಿಸಲು ಮತ್ತೆ ಮೊದಲಿನಿಂದ ಪ್ರಕ್ರಿಯೆ ಆರಂಭಿಸುವ ಅಗತ್ಯವೇನಿದೆ?. ನೀವು ಈ ಪ್ರಕ್ರಿಯೆಯನ್ನು 2022 ರಲ್ಲೇ ಪ್ರಾರಂಭಿಸಿದ್ದೀರಿ. ಕಳೆದ 4 ವರ್ಷಗಳಲ್ಲಿ (2022 ರಿಂದ 2026 ರವರೆಗೆ) ಪ್ರಾಧಿಕಾರವು ಏನು ಮಾಡಿದೆ?” ಎಂದು ಪೀಠ ಸರಣಿ ಪ್ರಶ್ನೆಗಳನ್ನಿಟ್ಟಿತು.
ಇದನ್ನೂ ಓದಿ: ಇನ್ಮುಂದೆ ಉಪ್ಪಿನ ಪ್ಯಾಕೆಟ್ ಮೇಲೂ ‘ಸಿಗರೇಟ್ ಮಾದರಿ’ ವಾರ್ನಿಂಗ್ ಲೇಬಲ್
“ನೀವು ಇಲ್ಲಿಯವರೆಗೆ ಕೈಗೊಂಡಿರುವ ಕ್ರಮಗಳನ್ನು ನಾವು ಮೆಚ್ಚುತ್ತೇವೆ. ಆದರೆ ನಾವು ತಲುಪಬೇಕಾದ ಗುರಿಯನ್ನು ತಲುಪಲು ಇನ್ನು ಸಾಕಷ್ಟು ಕೆಲಸಗಳು ಬಾಕಿ ಇವೆ. ರಾಷ್ಟ್ರದ ಮತ್ತು ದೇಶದ ನಾಗರಿಕರ ಒಳಿತಿಗಾಗಿ ನಾವು ಈ ಪ್ರಕ್ರಿಯೆಯನ್ನು ನಡೆಸುತ್ತಿದ್ದೇವೆ. ಪ್ರಾಧಿಕಾರವು ನಮ್ಮ ಆದೇಶವನ್ನು ನೈಜ ಸ್ಪೂರ್ತಿಯಿಂದ ಸ್ವೀಕರಿಸುತ್ತದೆ ಎಂದು ಭಾವಿಸುತ್ತೇವೆ,” ಎಂದು ಪೀಠವು ಸ್ಪಷ್ಟಪಡಿಸಿತು. ಸುಪ್ರೀಂ ಕೋರ್ಟ್ ಅಸಮಾಧಾನಕ್ಕೆ ಉತ್ತರಿಸಿದ ಎಫ್‌ಎಸ್‌ಎಸ್‌ಎಐ ಪರ ವಕೀಲರು, “2022 ರಲ್ಲಿ ಪ್ರಾರಂಭಿಸಲಾದ ಪ್ರಕ್ರಿಯೆಯು ‘ಇಂಡಿಯನ್ ನ್ಯೂಟ್ರಿಷನ್ ರೇಟಿಂಗ್’ (INR) ಸ್ಟಾರ್-ರೇಟಿಂಗ್ ವ್ಯವಸ್ಥೆಯಾಗಿತ್ತು. ಆಗಿದ್ದ ಮಾನದಂಡಗಳೇ ಬೇರೆಯಾಗಿದ್ದವು. ಪ್ರಸ್ತುತ ಹೊಸ ನಿಯಮಾವಳಿಗಳ ಮೇಲೆ ಕಾರ್ಯನಿರ್ವಹಿಸಲಾಗುತ್ತಿದೆ,” ಎಂದು ಸುಪ್ರೀಂ ಕೋರ್ಟ್‌ಗೆ ವಿವರಣೆ ನೀಡಿದರು. ಎರಡೂ ಕಡೆಯ ಸುದೀರ್ಘ ವಾದ-ಪ್ರತಿವಾದಗಳನ್ನು ಆಲಿಸಿದ ಸುಪ್ರೀಂ ಕೋರ್ಟ್, ಕಾಯ್ದಿರಿಸಿರುವ ತನ್ನ ಅಂತಿಮ ಆದೇಶವನ್ನು ಶೀಘ್ರದಲ್ಲೇ ಪ್ರಕಟಿಸಲಿದೆ.

