Breaking News

ರಸ್ತೆ ತಪಾಸಣೆ ವೇಳೆ ಎಎಪಿ ಕಾರ್ಯಕರ್ತನಿಗೆ ದೆಹಲಿ ಸಚಿವ ಪರ್ವೇಶ್ ವರ್ಮಾ ಕಪಾಳಮೋಕ್ಷ

ದೆಹಲಿ : ಪಶ್ಚಿಮ ದೆಹಲಿಯ ವಿಕಾಸಪುರ/ತಿಲಕ್ ನಗರ ವ್ಯಾಪ್ತಿಯಲ್ಲಿ ರಸ್ತೆ ಪರಿಶೀಲನೆ ನಡೆಸುತ್ತಿದ್ದ ವೇಳೆ ದೆಹಲಿ ಲೋಕೋಪಯೋಗಿ (PWD) ಸಚಿವ ಪರ್ವೇಶ್ ಸಾಹಿಬ್ ಸಿಂಗ್ ವರ್ಮಾ ಅವರು, ಆಮ್ ಆದ್ಮಿ ಪಾರ್ಟಿ (AAP) ಶಾಸಕ ಜರ್ನೈಲ್ ಸಿಂಗ್ ಅವರೊಂದಿಗೆ ಇದ್ದ ಯುವಕನಿಗೆ ಕಪಾಳಮೋಕ್ಷ ಮಾಡಿದ ಘಟನೆ ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಆಮ್ ಆದ್ಮಿ ಪಾರ್ಟಿ ಮತ್ತು ಬಿಜೆಪಿ ನಡುವೆ ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ.

ವಿಕಾಸಪುರ ಪ್ರದೇಶದ ಹೊರ ವರ್ತುಲ ರಸ್ತೆಯಲ್ಲಿ ಹೊಸದಾಗಿ ನಿರ್ಮಿಸಲಾಗಿದ್ದ ರಸ್ತೆಯ ಕಾಮಗಾರಿಯನ್ನು ಸಚಿವ ಪರ್ವೇಶ್ ವರ್ಮಾ ಪರಿಶೀಲಿಸುತ್ತಿದ್ದರು. ಈ ವೇಳೆ ಸ್ಥಳದಲ್ಲಿದ್ದ ಎಎಪಿ ಶಾಸಕ ಜರ್ನೈಲ್ ಸಿಂಗ್ ಹಾಗೂ ಅವರ ಕಾರ್ಯಕರ್ತರು ಕಾಮಗಾರಿಯ ಅತ್ಯಂತ ಕಳಪೆ ಗುಣಮಟ್ಟವನ್ನು ಸಚಿವರಿಗೆ ತೋರಿಸಿದರು. ಹೊಸದಾಗಿ ನಿರ್ಮಿಸಿದ ರಸ್ತೆಯು ಕೈಯಲ್ಲೇ ಕಿತ್ತು ಬರುತ್ತಿರುವುದನ್ನು ತೋರಿಸಿ ಭ್ರಷ್ಟಾಚಾರದ ಆರೋಪ ಮಾಡಿದರು.

ಇಡೀ ಪ್ರಕ್ರಿಯೆಯನ್ನು ಎಎಪಿ ಶಾಸಕರ ಸೋಶಿಯಲ್ ಮೀಡಿಯಾ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಾಹಿಬ್ ಸಿಂಗ್ ಎಂಬ ಯುವಕ ಮೊಬೈಲ್‌ನಲ್ಲಿ ವಿಡಿಯೋ ಹಾಗೂ ಲೈವ್‌ ಸ್ಟ್ರೀಮಿಂಗ್ ಮಾಡುತ್ತಿದ್ದಾಗ, ಸಚಿವ ವರ್ಮಾ ಅವರು ಯುವಕನ ಮೊಬೈಲ್ ಕಸಿದುಕೊಂಡು ಆತನಿಗೆ ಕಪಾಳಮೋಕ್ಷ ಮಾಡಿದರು. ಇದರಿಂದ ಆಕ್ರೋಶಗೊಂಡ ಎಎಪಿ ಕಾರ್ಯಕರ್ತರು ಸ್ಥಳದಲ್ಲೇ ಸಚಿವರ ವಿರುದ್ಧ ಭಾರಿ ಪ್ರತಿಭಟನೆ ನಡೆಸಿದರು.

ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಸೃಷ್ಟಿಸಿದ ವಿವಾದದ ನಂತರ ಸಚಿವ ಪರ್ವೇಶ್ ವರ್ಮಾ ಸ್ಪಷ್ಟನೆ ನೀಡಿದ್ದು, ನಡೆದ ಘಟನೆಗೆ ಪಶ್ಚಾತ್ತಾಪ ವ್ಯಕ್ತಪಡಿಸಿದ್ದಾರೆ. “ಎಎಪಿ ಕಾರ್ಯಕರ್ತರು ನನ್ನ ಕುಟುಂಬಕ್ಕೆ ಕೀಳು ಭಾಷೆಯಲ್ಲಿ ನಿಂದಿಸಿದರು. ಅಂತಹ ಸಂದರ್ಭದಲ್ಲಿ ಯಾರೇ ಆದರೂ ಆಕ್ರೋಶಗೊಳ್ಳುವುದು ಸಹಜ, ಅದೇ ಆಕ್ರೋಶದಲ್ಲಿ ನಾನು ಕೈಮಾಡಿದೆ. ಆದರೆ ಹೀಗೆ ಆಗಬಾರದಿತ್ತು” ಎಂದು ಹೇಳಿದ್ದಾರೆ. ಎಎಪಿ ಶಾಸಕ ಜರ್ನೈಲ್ ಸಿಂಗ್ ಅವರು ರಸ್ತೆ ನಿರ್ಮಾಣ ಮಾಡುತ್ತಿರುವ ಗುತ್ತಿಗೆದಾರರಿಂದ ಕಮಿಷನ್ (ಲಂಚ) ಬೇಡಿಕೆ ಇಟ್ಟಿದ್ದರು. ಕಮಿಷನ್ ಸಿಗದ ಕಾರಣ ಗುತ್ತಿಗೆದಾರರು ನಿರ್ಮಿಸಿದ ರಸ್ತೆಯನ್ನು ರಾತ್ರಿ ನಿರ್ಮಿಸಿದ ಬಳಿಕ ಬೆಳಿಗ್ಗೆ ಹೋಗಿ ಹಾಳುಮಾಡಿ ವಿಡಿಯೋ ಮಾಡಿ ಭ್ರಷ್ಟಾಚಾರದ ನಾಟಕವಾಡುತ್ತಿದ್ದಾರೆ ಎಂದು ಆರೋಪಿಸಿದರು.

ಇದನ್ನೂ ಓದಿ: ಇನ್ಮುಂದೆ ಉಪ್ಪಿನ ಪ್ಯಾಕೆಟ್ ಮೇಲೂ ‘ಸಿಗರೇಟ್ ಮಾದರಿ’ ವಾರ್ನಿಂಗ್ ಲೇಬಲ್

ಸರ್ಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಾಗೂ ಕಮಿಷನ್ ಬೇಡಿಕೆ ಇಟ್ಟ ಶಾಸಕರ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಹಾಗೂ ನಾಯಕರು ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು, “ರಸ್ತೆಯ ಕಳಪೆ ಕಾಮಗಾರಿ ಬೈಲಿಗೆ ಬಂದಿದ್ದಕ್ಕೆ ಸಚಿವರು ಗೂಂಡಾರೀತಿಯಲ್ಲಿ ವರ್ತಿಸಿದ್ದಾರೆ. ತಕ್ಷಣವೇ ಅವರನ್ನು ಬಂಧಿಸಬೇಕು” ಎಂದು ಆಗ್ರಹಿಸಿದ್ದಾರೆ.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *