Breaking News

ಬಂಟ್ವಾಳದಲ್ಲಿ “ಬಿ.ಸಿ. ರೋಡ್ ಚಲೋ” ಪ್ರತಿಭಟನೆ: ಹಿಂದೂ ಕಾರ್ಯಕರ್ತರ ಮೇಲೆ ಗೂಂಡಾ ಕಾಯಿದೆ ಖಂಡಿಸಿ ವಿಎಚ್‌ಪಿ-ಭಜರಂಗದಳ ಆಕ್ರೋಶ

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ರಾಜಕೀಯ ಹಾಗೂ ಸಾಮಾಜಿಕ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿರುವ ಘಟನೆಯೊಂದರಲ್ಲಿ, ವಿಶ್ವ ಹಿಂದೂ ಪರಿಷತ್ (VHP) ಮತ್ತು ಭಜರಂಗದಳದ ವತಿಯಿಂದ ಬಂಟ್ವಾಳದ ಬಿ.ಸಿ. ರೋಡ್‌ನಲ್ಲಿ ಗುರುವಾರ ಬೃಹತ್ “ಬಿ.ಸಿ. ರೋಡ್ ಚಲೋ” ಪ್ರತಿಭಟನಾ ರ್ಯಾಲಿ ನಡೆಸಲಾಯಿತು. ಸಂಘಟನೆಯ ಕಾರ್ಯಕರ್ತರ ಮೇಲೆ ಪೊಲೀಸರು “ಗೂಂಡಾ ಕಾಯಿದೆ” ಹೇರಿರುವುದನ್ನು ತೀವ್ರವಾಗಿ ಖಂಡಿಸಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಆರ್​ಎಸ್​ಎಸ್​​​ ಮುಖಂಡ ಕಲ್ಲಡ್ಕ ಪ್ರಭಾಕರ್​​​ ಭಟ್​​, ವಜ್ರದೇಹಿ ಸ್ವಾಮೀಜಿ, ಶರಣ್ ಪಂಪ್‌ವೆಲ್, ಭರತ್​ ಶೆಟ್ಟಿ, ರಾಜೇಶ್ ನಾಯ್ಕ್​​ ಸೇರೀದಂತೆ ಅನೇಕರು ಭಾಗಿಯಾದರು.

ಕಳೆದ ವರ್ಷ ನಡೆದ ಅಬ್ದುಲ್ ರಹಿಮಾನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 23 ಮಂದಿಯನ್ನು ಬಂಧಿಸಿದ್ದರು. ಈ ಪೈಕಿ ಎಂಟು ಮಂದಿ ಭಜರಂಗದಳ ಹಾಗೂ ವಿಎಚ್‌ಪಿ ಕಾರ್ಯಕರ್ತರಾಗಿದ್ದು, ಅವರ ಮೇಲೆ ‘ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ ಕಾಯಿದೆ’ (K-COCA) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಮೈಸೂರು ನ್ಯಾಯಾಲಯದಲ್ಲಿ ಅವರಿಗೆ ಜಾಮೀನು ಲಭಿಸಿದರೂ, ಬಿಡುಗಡೆಯಾಗುವ ಮುನ್ನವೇ ಪೊಲೀಸರು ರಾಜಕೀಯ ಒತ್ತಡಕ್ಕೆ ಮಣಿದು ಅವರ ಮೇಲೆ “ಗೂಂಡಾ ಕಾಯಿದೆ” ಹೇರಿ ಜೈಲಿನಲ್ಲೇ ಇರಿಸಿದ್ದಾರೆ ಎಂದು ಹಿಂದೂ ಸಂಘಟನೆಗಳು ಗಂಭೀರವಾಗಿ ಆರೋಪಿಸಿವೆ.

ಬಂಟ್ವಾಳದ ರಕ್ತೇಶ್ವರಿ ದೇವಸ್ಥಾನದ ಆವರಣದಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಆರ್‌ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಸೇರಿದಂತೆ ಪ್ರಮುಖ ಹಿಂದೂ ನಾಯಕರು ಭಾಗವಹಿಸಿದ್ದರು. ಭಜರಂಗದಳ ಸಂಯೋಜಕ್ ಪ್ರಭಾಂಜನ್ ಸೂರ್ಯ ಮಾತನಾಡಿ, “ರಾಜ್ಯ ಸರ್ಕಾರ ಮತ್ತು ಗೃಹ ಇಲಾಖೆಯ ತಾಳಕ್ಕೆ ತಕ್ಕಂತೆ ಪೊಲೀಸರು ಕುಣಿಯುತ್ತಿದ್ದಾರೆ. ಭರತ್ ಕುಮ್ಡೇಲ್ ಎಂಬ ಕಾರ್ಯಕರ್ತನ ಮೇಲಿದ್ದ 15 ಪ್ರಕರಣಗಳಲ್ಲಿ 13 ಪ್ರಕರಣಗಳಲ್ಲಿ ಆತ ಖುಲಾಸೆಯಾಗಿದ್ದರೂ ಆತನ ಮೇಲೆಯೂ ಗೂಂಡಾ ಕಾಯಿದೆ ಹೇರಲಾಗಿದೆ. ಇದು ಪೂರ್ವಾಗ್ರಹ ಪೀಡಿತ ಕ್ರಮ” ಎಂದು ದೂರಿದರು. ಪ್ರತಿಭಟನಾಕಾರರು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಡಾ. ಅರುಣ್ ಕೆ. ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಪ್ರತಿಕ್ರಿಯಿಸಿರುವ ಪೊಲೀಸ್ ಇಲಾಖೆ, ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದೆ. “ಗೂಂಡಾ ಕಾಯಿದೆ ಹೇರಲಾಗಿರುವ ಎಂಟು ಜನರ ವಿರುದ್ಧ ಕೊಲೆ, ಕೊಲೆ ಯತ್ನ, ಡ್ರಗ್ಸ್ ಜಾಲ ಹಾಗೂ ನೈತಿಕ ಪೊಲೀಸ್‌ಗಿರಿಯಂತಹ ತೀವ್ರ ಸ್ವರೂಪದ ಅಪರಾಧ ಪ್ರಕರಣಗಳಿವೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಹಾಗೂ ಲಭ್ಯವಿರುವ ಆಧಾರಗಳ ಮೇಲೆಯೇ ಅವರ ವಿರುದ್ಧ ಗೂಂಡಾ ಕಾಯಿದೆ ಹೇರಲಾಗಿದೆ” ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಅಕ್ಟೋಬರ್ 1ರಿಂದ ಸಬ್ಸಿಡಿ LPGಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ; ಗ್ರಾಹಕರಿಗೆ ಮಹತ್ವದ ಸೂಚನೆ

ತಕ್ಷಣವೇ ಕಾರ್ಯಕರ್ತರ ಮೇಲಿನ ಗೂಂಡಾ ಕಾಯಿದೆಯನ್ನು ವಾಪಸ್ ಪಡೆದು ಅವರನ್ನು ಜೈಲಿನಿಂದ ಬಿಡುಗಡೆ ಮಾಡದಿದ್ದರೆ, ಮುಂದಿನ ದಿನಗಳಲ್ಲಿ ದಕ್ಷಿಣ ಕನ್ನಡ ಎಸ್‌ಪಿ ಕಚೇರಿ ಹಾಗೂ ಮಂಗಳೂರು ಪೊಲೀಸ್ ಕಮಿಷನರ್ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಪ್ರತಿಭಟನಾಕಾರರು ಸರ್ಕಾರಕ್ಕೆ ನೇರ ಎಚ್ಚರಿಕೆ ನೀಡಿದ್ದಾರೆ. ಪೋಲಿಸ್ ಇಲಾಖೆ ಹಾಗೂ ಹಿಂದೂ ಸಂಘಟನೆಗಳ ನಡುವಿನ ಈ ಜಟಾಪಟಿಯಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತೀವ್ರ ಬಿಸಿ ವಾತಾವರಣ ನಿರ್ಮಾಣವಾಗಿದೆ.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *