ಅಕ್ಟೋಬರ್ 1ರಿಂದ ಸಬ್ಸಿಡಿ LPGಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ; ಗ್ರಾಹಕರಿಗೆ ಮಹತ್ವದ ಸೂಚನೆ

lpg-subsidy-aadhaar-biometric-mandatory-october-1

ನವದೆಹಲಿ: ದೇಶದ ಗೃಹಬಳಕೆಯ ಎಲ್‌ಪಿಜಿ ಗ್ರಾಹಕರಿಗೆ ಕೇಂದ್ರ ಸರ್ಕಾರ ಮಹತ್ವದ ಸೂಚನೆ ನೀಡಿದ್ದು, ಅಕ್ಟೋಬರ್ 1ರಿಂದ ಸಬ್ಸಿಡಿ ದರದಲ್ಲಿ ಎಲ್‌ಪಿಜಿ ಸಿಲಿಂಡರ್ ರೀಫಿಲ್ ಬುಕ್ ಮಾಡಲು ಬಯೋಮೆಟ್ರಿಕ್ ಆಧಾರ್ ದೃಢೀಕರಣ (BAA) ಕಡ್ಡಾಯವಾಗಲಿದೆ.

ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಈ ಕುರಿತು ಮಾಹಿತಿ ನೀಡಿದ್ದು, ಪ್ರತಿಯೊಂದು LPG ಸಂಪರ್ಕವನ್ನು ಆಧಾರ್ ದೃಢೀಕೃತ ಗ್ರಾಹಕರೊಂದಿಗೆ ಜೋಡಿಸುವುದರಿಂದ ಸಬ್ಸಿಡಿ ದರದ ಗೃಹಬಳಕೆಯ ಸಿಲಿಂಡರ್‌ಗಳನ್ನು ವಾಣಿಜ್ಯ ಹಾಗೂ ಕೈಗಾರಿಕಾ ಬಳಕೆಗೆ ಅಕ್ರಮವಾಗಿ ವರ್ಗಾಯಿಸುವುದನ್ನು ತಡೆಯಲು ಸಾಧ್ಯವಾಗಲಿದೆ ಎಂದು ತಿಳಿಸಿದೆ.

ಅಲ್ಲದೆ, ನಕಲಿ, ಡುಪ್ಲಿಕೇಟ್ ಹಾಗೂ ಅರ್ಹತೆ ಇಲ್ಲದ LPG ಸಂಪರ್ಕಗಳನ್ನು ಗುರುತಿಸಿ ತೆಗೆದುಹಾಕುವ ಮೂಲಕ ಅರ್ಹ ಕುಟುಂಬಗಳಿಗೆ ಮಾತ್ರ ಸರ್ಕಾರದ ಸಬ್ಸಿಡಿ ಸೌಲಭ್ಯ ತಲುಪಿಸುವುದು ಈ ಕ್ರಮದ ಪ್ರಮುಖ ಉದ್ದೇಶವಾಗಿದೆ.

ದೃಢೀಕರಣ ಮಾಡಿದವರಿಗೆ?

ಬಯೋಮೆಟ್ರಿಕ್ ಆಧಾರ್ ದೃಢೀಕರಣವನ್ನು ಈಗಾಗಲೇ ಪೂರ್ಣಗೊಳಿಸಿರುವ ಗ್ರಾಹಕರು ಮತ್ತೊಮ್ಮೆ ಪ್ರಕ್ರಿಯೆ ನಡೆಸುವ ಅಗತ್ಯವಿಲ್ಲ. ಅವರ LPG ರೀಫಿಲ್ ಪೂರೈಕೆ ಎಂದಿನಂತೆ ಮುಂದುವರಿಯಲಿದೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ. ಇನ್ನೂ BAA ಪೂರ್ಣಗೊಳಿಸದ ಗ್ರಾಹಕರು ದೃಢೀಕರಣ ಪ್ರಕ್ರಿಯೆ ಮುಗಿಸಿದ ತಕ್ಷಣ ಸಬ್ಸಿಡಿ ದರದ ರೀಫಿಲ್ ಬುಕ್ಕಿಂಗ್ ಸೌಲಭ್ಯ ಪಡೆಯಬಹುದಾಗಿದೆ.

ಬಯೋಮೆಟ್ರಿಕ್ ದೃಢೀಕರಣ ಮಾಡುವುದು ಹೇಗೆ?

ಗ್ರಾಹಕರ ಅನುಕೂಲಕ್ಕಾಗಿ ಬಯೋಮೆಟ್ರಿಕ್ ಆಧಾರ್ ದೃಢೀಕರಣಕ್ಕೆ ಹಲವು ಮಾರ್ಗಗಳನ್ನು ಒದಗಿಸಲಾಗಿದೆ.

LPG ಸಿಲಿಂಡರ್ ವಿತರಣೆ: ಸಿಲಿಂಡರ್ ವಿತರಿಸುವ ಸಿಬ್ಬಂದಿ OMC ಮೊಬೈಲ್ ಅಪ್ಲಿಕೇಶನ್ ಮೂಲಕ ಸ್ಥಳದಲ್ಲೇ ಗ್ರಾಹಕರ ಬಯೋಮೆಟ್ರಿಕ್ ದೃಢೀಕರಣ ಪೂರ್ಣಗೊಳಿಸಬಹುದು.

LPG ವಿತರಕರ ಶೋರೂಂ: ಗ್ರಾಹಕರು ತಮ್ಮ ಸಂಬಂಧಿತ LPG ವಿತರಕರ ಕಚೇರಿ ಅಥವಾ ಶೋರೂಂಗೆ ಭೇಟಿ ನೀಡಿ ಬಯೋಮೆಟ್ರಿಕ್ ದೃಢೀಕರಣ ಮಾಡಿಸಿಕೊಳ್ಳಬಹುದು.

ಮೊಬೈಲ್ ಆ್ಯಪ್: ಮನೆಯಲ್ಲಿಯೇ ಇದ್ದು ಸಂಬಂಧಿತ ತೈಲ ಕಂಪನಿಯ ಮೊಬೈಲ್ ಆ್ಯಪ್ ಮೂಲಕವೂ ಪ್ರಕ್ರಿಯೆ ಪೂರ್ಣಗೊಳಿಸಬಹುದು. ಇಂಡೇನ್ ಗ್ರಾಹಕರು IndianOil ONE, ಭಾರತ್‌ಗ್ಯಾಸ್ ಗ್ರಾಹಕರು HelloBPCL ಹಾಗೂ HP Gas ಗ್ರಾಹಕರು HP PAY ಆ್ಯಪ್ ಬಳಸಬಹುದು.

ಸಬ್ಸಿಡಿ ಬೇಡವೆಂದರೆ ಏನು ಮಾಡಬೇಕು?

ಬಯೋಮೆಟ್ರಿಕ್ ಆಧಾರ್ ದೃಢೀಕರಣ ಪೂರ್ಣಗೊಳಿಸಲು ಇಚ್ಛಿಸದ ಗ್ರಾಹಕರು OMCಗಳ ಡಿಜಿಟಲ್ ವ್ಯವಸ್ಥೆಗಳ ಮೂಲಕ ತಮ್ಮ ಆಯ್ಕೆಯನ್ನು ಅಧಿಕೃತವಾಗಿ ನೋಂದಾಯಿಸಿಕೊಳ್ಳಬಹುದು.

ಇದನ್ನೂ ಓದಿ: ಬೀದಿ ನಾಯಿಗಳ ಉಪಟಳಕ್ಕೆ ವಿಚಿತ್ರ ಪ್ರತಿಭಟನೆ: ಅಧಿಕಾರಿಯ ಮೇಜಿನ ಮೇಲೆಯೇ ನಾಯಿಗಳನ್ನು ತಂದಿಟ್ಟ ವ್ಯಕ್ತಿ

ವೆಬ್ ಪೋರ್ಟಲ್, ಮೊಬೈಲ್ ಆ್ಯಪ್, WhatsApp ಚಾಟ್‌ಬಾಟ್ ಅಥವಾ IVRS ಮೂಲಕ ಈ ಆಯ್ಕೆಯನ್ನು ದಾಖಲಿಸಬಹುದಾಗಿದೆ. ಇಂತಹ ಗ್ರಾಹಕರಿಗೆ ಸ್ಥಳೀಯ ಲಭ್ಯತೆಗೆ ಅನುಗುಣವಾಗಿ 5 ಕೆ.ಜಿ. ಅಥವಾ 10 ಕೆ.ಜಿ. LPG ಸಿಲಿಂಡರ್‌ಗಳನ್ನು ಮಾರುಕಟ್ಟೆ ದರದಲ್ಲಿ, ಸಬ್ಸಿಡಿ ಇಲ್ಲದೆ ಪಡೆಯಲು ಅವಕಾಶ ಇರಲಿದೆ.

ಹಲವು ಬಾರಿ ವಿಸ್ತರಣೆಯಾಗಿದ್ದ ಗಡುವು

LPG ಗ್ರಾಹಕರಿಗೆ ಆಧಾರ್ ದೃಢೀಕರಣ ಕಡ್ಡಾಯಗೊಳಿಸುವ ಗಡುವನ್ನು ಕೇಂದ್ರ ಸರ್ಕಾರ ಈ ಹಿಂದೆ ಹಲವು ಬಾರಿ ವಿಸ್ತರಿಸಿತ್ತು. ಜೂನ್ 30ರಿಂದ ಸೆಪ್ಟೆಂಬರ್ 14ರವರೆಗೆ ಗಡುವು ವಿಸ್ತರಿಸಲಾಗಿದ್ದು, ಇದೀಗ ಅಕ್ಟೋಬರ್ 1ರಿಂದ ಸಬ್ಸಿಡಿ ದರದ ರೀಫಿಲ್‌ಗೆ ಬಯೋಮೆಟ್ರಿಕ್ ಆಧಾರ್ ದೃಢೀಕರಣ ಕಡ್ಡಾಯವಾಗಲಿದೆ.

2023ರ ಅಕ್ಟೋಬರ್‌ನಿಂದ ದೇಶಾದ್ಯಂತ ಆಧಾರ್ ದೃಢೀಕರಣ ಅಭಿಯಾನ ನಡೆಯುತ್ತಿದ್ದು, SMS, WhatsApp ಸಂದೇಶಗಳು, ವಿಶೇಷ ಶಿಬಿರಗಳು ಹಾಗೂ LPG ವಿತರಕರ ಜಾಲದ ಮೂಲಕ ಗ್ರಾಹಕರಿಗೆ ಮಾಹಿತಿ ನೀಡಲಾಗುತ್ತಿದೆ.

LPG ಸಬ್ಸಿಡಿ ಮೊತ್ತದಲ್ಲೂ ಬದಲಾವಣೆ

ಗೃಹಬಳಕೆಯ 14.2 ಕೆ.ಜಿ. LPG ಸಿಲಿಂಡರ್‌ಗೆ ನೀಡಲಾಗುವ ಪರೋಕ್ಷ ಸಬ್ಸಿಡಿ ಸೆಪ್ಟೆಂಬರ್ 2026ರಲ್ಲಿ ಸುಮಾರು ₹210ರಷ್ಟಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ತಿಳಿಸಿದೆ. ಜೂನ್‌ನಲ್ಲಿ ಇದೇ ಸಬ್ಸಿಡಿ ಸುಮಾರು ₹721ರಷ್ಟಿತ್ತು.

ದೇಶದ ಅರ್ಹ ಕುಟುಂಬಗಳಿಗೆ ಗೃಹಬಳಕೆಯ LPG ಕೈಗೆಟುಕುವ ದರದಲ್ಲಿ ಲಭ್ಯವಾಗುವಂತೆ ಮಾಡಲು ಸರ್ಕಾರದ ಹಣಕಾಸು ಬೆಂಬಲ ಮುಂದುವರಿದಿದೆ ಎಂದು ಸಚಿವಾಲಯ ತಿಳಿಸಿದೆ.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *