ಮಂಗಳೂರು ಕ್ಯಾಬಿನೆಟ್ ಐತಿಹಾಸಿಕ ನಿರ್ಧಾರ: ‘ತುಳು’ ರಾಜ್ಯದ 2ನೇ ಅಧಿಕೃತ ಭಾಷೆ; ‘ದಕ್ಷಿಣ ಕನ್ನಡ’ ಶೀಘ್ರವೇ ‘ಮಂಗಳೂರು ಜಿಲ್ಲೆ’ ಎಂದು ಮರುನಾಮಕರಣ

ಮಂಗಳೂರು: ಮಂಗಳೂರಿನ ಪ್ರಜಾಸೌಧದಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಕರಾವಳಿ ಭಾಗದ ದಶಕಗಳ ಕನಸು ಈಡೇರಿದ್ದು, ‘ತುಳು’ ಭಾಷೆಯನ್ನು ರಾಜ್ಯದ ಎರಡನೇ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಘೋಷಿಸಲು ನಿರ್ಧರಿಸಲಾಗಿದೆ. ಇದರೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯ ಹೆಸರನ್ನು ‘ಮಂಗಳೂರು ಜಿಲ್ಲೆ’ ಎಂದು ಮರುನಾಮಕರಣ ಮಾಡಲು ಸರ್ಕಾರ ಗಂಭೀರ ಚಿಂತನೆ ನಡೆಸಿದೆ.

ಸುದ್ದಿಗೋಷ್ಠಿಯಲ್ಲಿ ಸಚಿವ ಸಂಪುಟದ ಈ ಮಹತ್ವದ ನಿರ್ಧಾರಗಳನ್ನು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಬಹಿರಂಗಪಡಿಸಿದರು. ಇಂದಿನ ಸಭೆಯಲ್ಲಿ ಬರೋಬ್ಬರಿ ₹32,611 ಕೋಟಿ ರೂಪಾಯಿ ಮೌಲ್ಯದ ವಿವಿಧ ಯೋಜನೆಗಳಿಗೆ ಸಂಪುಟ ಅನುಮೋದನೆ ನೀಡಿದೆ.

ಸಚಿವ ಸಂಪುಟ ಸಭೆಯ ಪ್ರಮುಖ ನಿರ್ಧಾರಗಳು :

ತುಳು ಭಾಷೆಗೆ ಅಧಿಕೃತ ಸ್ಥಾನಮಾನ: ತುಳು ಭಾಷೆಯನ್ನು ಕರ್ನಾಟಕದ ಎರಡನೇ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಘೋಷಿಸಲು ತೀರ್ಮಾನಿಸಲಾಗಿದೆ. ಶಾಸಕ ಅಶೋಕ್ ಕುಮಾರ್ ರೈ ಅವರು ಈ ಬಗ್ಗೆ ಮೊದಲು ಧ್ವನಿ ಎತ್ತಿದ್ದು, ಅವರ ಭಾವನೆ ಹಾಗೂ ಹೋರಾಟಕ್ಕೆ ಫಲ ಸಿಕ್ಕಿದೆ.

‘ದಕ್ಷಿಣ ಕನ್ನಡ’ ಇನ್ಮುಂದೆ ‘ಮಂಗಳೂರು ಜಿಲ್ಲೆ’: ದಕ್ಷಿಣ ಕನ್ನಡ ಜಿಲ್ಲೆಯನ್ನು ‘ಮಂಗಳೂರು ಜಿಲ್ಲೆ’ ಎಂದು ಬದಲಾಯಿಸುವ ಕುರಿತು ಸಂಪುಟ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆದಿದೆ. ಈ ಸಂಬಂಧ 1 ತಿಂಗಳ ಕಾಲ ಡ್ರಾಫ್ಟ್ ನೋಟಿಫಿಕೇಶನ್ (ಕರಡು ಅಧಿಸೂಚನೆ) ಹೊರಡಿಸಿ, ಸಾರ್ವಜನಿಕರ ಅಭಿಪ್ರಾಯ ಪಡೆದು ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು.

ಮಲೆನಾಡು & ಕರಾವಳಿಗೆ ಹೊಸ ಟೂರಿಸಂ ಪಾಲಿಸಿ: ಕರಾವಳಿ ಮತ್ತು ಮಲೆನಾಡು ಭಾಗವನ್ನು ಒಳಗೊಂಡಂತೆ ಅತ್ಯಾಧುನಿಕ ಮೂಲಸೌಕರ್ಯ ಆಧಾರಿತ ಹೊಸ ಪ್ರವಾಸೋದ್ಯಮ ನೀತಿಯನ್ನು (Tourism Policy) ಜಾರಿಗೆ ತರಲು ಅನುಮೋದನೆ ನೀಡಲಾಗಿದೆ.

ಫಿಶರೀಸ್, ಮ್ಯಾರಿನ್ & ಬ್ಲೂ ಎಕನಾಮಿಕ್ಸ್ ಯೂನಿವರ್ಸಿಟಿ: ಮೀನುಗಾರಿಕೆ ಮತ್ತು ಸಮುದ್ರ ವಿಜ್ಞಾನ ಶಿಕ್ಷಣಕ್ಕೆ ಬೂಸ್ಟ್ ನೀಡಲು ವಿವಿ ಸ್ಥಾಪನೆ ಹಾಗೂ ಪ್ರವೇಶಾತಿ ಸೀಟುಗಳ ಸಂಖ್ಯೆಯನ್ನು 60 ರಿಂದ 200 ಕ್ಕೆ ಏರಿಸಲು ನಿರ್ಧರಿಸಲಾಗಿದೆ.

ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿ: ಕರಾವಳಿ ಜನರ ಅನುಕೂಲಕ್ಕಾಗಿ ಮಂಗಳೂರಿನಲ್ಲಿ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ ಹಾಗೂ ಜಯದೇವ ಹೃದ್ರೋಗ ಆಸ್ಪತ್ರೆಯ ಶಾಖೆಗಳನ್ನು ಸ್ಥಾಪಿಸಲಾಗುವುದು.

ವಿಕೇಂದ್ರೀಕೃತ ಆಡಳಿತ: ಮುಂದಿನ 15 ತಿಂಗಳುಗಳಲ್ಲಿ ರಾಜ್ಯದ 10 ರಿಂದ 12 ಜಿಲ್ಲೆಗಳಲ್ಲಿ ಪ್ರಾದೇಶಿಕ ಕ್ಯಾಬಿನೆಟ್ ಸಭೆಗಳನ್ನು ನಡೆಸಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು.

ಇದನ್ನೂ ಓದಿ; ಮಂಗಳೂರು ಜೈಲಿನ ಸಿಗ್ನಲ್ ಜ್ಯಾಮರ್‌ಗಳಿಂದ ಸಾರ್ವಜನಿಕರಿಗೆ ನೆಟ್‌ವರ್ಕ್ ಸಮಸ್ಯೆ: ಪರಿಹಾರಕ್ಕೆ ತಾಂತ್ರಿಕ ಕ್ರಮ ಎಂದ ಗೃಹ ಸಚಿವ ಪ್ರಿಯಾಂಕ್ ಖರ್ಗೆ

ಪುತ್ತೂರು ಕ್ಷೇತ್ರಕ್ಕೆ ಸಿಕ್ಕ ಪ್ರಮುಖ ಅನುದಾನ:

ಮೆಡಿಕಲ್ ಕಾಲೇಜು ಮಂಜೂರಾತಿ: ಪುತ್ತೂರಿಗೆ ಮೆಡಿಕಲ್ ಕಾಲೇಜು ಸ್ಥಾಪನೆಗೆ ಅಂತಿಮ ಒಪ್ಪಿಗೆ ನೀಡಿ, ₹579.49 ಕೋಟಿ ಬೃಹತ್ ಅನುದಾನ ಬಿಡುಗಡೆ ಮಾಡಲಾಗಿದೆ.

ವಿಟ್ಲ ನೀರಾವರಿ ಯೋಜನೆ: ಪುತ್ತೂರು ತಾಲೂಕಿನ ವಿಟ್ಲ ಭಾಗದ ನೀರಾವರಿ ಸೌಲಭ್ಯ ಮೇಲ್ದರ್ಜೆಗೇರಿಸಲು ₹100 ಕೋಟಿ ಅನುದಾನ ನಿಗದಿಪಡಿಸಲಾಗಿದೆ.

ಶ್ರೀ ಮಹಾಲಿಂಗೇಶ್ವರ ದೇವಾಲಯ ಅಭಿವೃದ್ಧಿ: ಐತಿಹಾಸಿಕ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಿಶೇಷ ಅಭಿವೃದ್ಧಿ ಯೋಜನೆಗೆ ₹5 ಕೋಟಿ ಅನುದಾನ ಘೋಷಿಸಲಾಗಿದೆ.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್‌ ಮಾಡಿ

 

Leave a Reply

Your email address will not be published. Required fields are marked *