ಮಂಗಳೂರು : ಸುದೀರ್ಘ 14 ವರ್ಷಗಳ ಕಾಲ ನಡೆದ ನಿರಂತರ ಕಾನೂನು ಹೋರಾಟದ ಫಲವಾಗಿ ಧರ್ಮಸ್ಥಳದ ಎಸ್‌ಡಿಎಂ ಕಾಲೇಜು ವಿದ್ಯಾರ್ಥಿನಿ ಸೌಜನ್ಯ ಭೀಕರ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮರುನಿಖೆಗೆ ಆದೇಶಿಸಿರುವಂತೆ ಹೊಸ ಎಸ್‌ಐಟಿ (SIT) ರಚಿಸಿ ಮರುತನಿಖೆಗೆ ನಡೆಸಲು ತೀರ್ಮಾನಿಸಿರುವುದು ನ್ಯಾಯಾಂಗ ವ್ಯವಸ್ಥೆಯ ಮೇಲಿನ ನಂಬಿಕೆಯನ್ನು ಹೆಚ್ಚಿಸಿದೆ ಎಂದು ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ತಿಳಿಸಿದ್ದಾರೆ.
ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅ.10ರಂದು ಸೌಜನ್ಯ ಕೊಲೆಯಾಗಿ 14 ವರ್ಷಗಳು ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಸುಪ್ರೀಂ ಕೋರ್ಟ್ ನೀಡಿದ ಐತಿಹಾಸಿಕ ಆದೇಶದ ಹಿನ್ನೆಲೆಯಲ್ಲಿ ಸಂತ್ರಸ್ತ ಕುಟುಂಬ, ಹೋರಾಟಗಾರರು ಹಾಗೂ ಸಾರ್ವಜನಿಕರನ್ನು ಒಳಗೊಂಡಂತೆ ಉಜಿರೆಯಿಂದ ಬೆಳ್ತಂಗಡಿವರೆಗೆ ಬೃಹತ್ ‘ನ್ಯಾಯದ ನಡಿಗೆ’ ಹಾಗೂ ಅಭಿನಂದನಾ ಸಭೆ ಆಯೋಜಿಸಲಾಗಿದೆ. ಬೆಳಗ್ಗೆ 10ಗಂಟೆಗೆ ಈ ಕಾರ್ಯಕ್ರಮ ನಡೆಯಲಿದ್ದು, 5ಕಿ.ಮೀ. ನಡಿಗೆ ನಡೆಯಲಿದೆ ಎಂದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಸೌಜನ್ಯ ಅವರ ತಾಯಿ ಕುಸುಮಾವತಿ ಅವರು ಸಲ್ಲಿಸಿದ್ದ ಎಸ್‌ಎಲ್‌ಪಿ ಅರ್ಜಿಯನ್ನು (SLP 5763/26) ವಿಚಾರಣೆ ನಡೆಸಿದ ಸರ್ವೋಚ್ಚ ನ್ಯಾಯಾಲಯವು ಸೆಪ್ಟೆಂಬರ್ 22, 2026 ರಂದು ಮರುತನಿಖೆಗೆ ಆದೇಶ ನೀಡಿದೆ. ವಿಚಾರಣೆ ವೇಳೆ ಈ ಹಿಂದೆ ಕರ್ನಾಟಕ ರಾಜ್ಯ ಪೊಲೀಸ್ (CID) ಹಾಗೂ ಕೇಂದ್ರದ ಸಿಬಿಐ (CBI) ನಡೆಸಿದ ಕಳಪೆ ತನಿಖೆಯನ್ನು ತೀವ್ರವಾಗಿ ಪರಿಶೀಲನೆ ಮಾಡಿರುವ ಸುಪ್ರೀಂ ಕೋರ್ಟ್, “ನೀವು ಯಾರನ್ನು ರಕ್ಷಣೆ ಮಾಡಲು ಈ ರೀತಿ ತನಿಖೆ ಮಾಡಿದ್ದೀರಿ?” ಎಂದು ಖಾರವಾಗಿ ಪ್ರಶ್ನಿಸಿದೆ. ಈ ಹಿಂದೆ ತನಿಖೆಯಲ್ಲಿದ್ದ ತಪ್ಪು ಎಸಗಿದ ಅಧಿಕಾರಿಗಳನ್ನು ಪಕ್ಕಕ್ಕಿಟ್ಟು ಹೊಸ ತನಿಖಾ ತಂಡದಿಂದ ಮರುತನಿಖೆ ನಡೆಸುವಂತೆ ಆದೇಶಿಸಿರುವುದು ಸ್ವಾಗತಾರ್ಹ ಎಂದು ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಪ್ರಮುಖ ಬೇಡಿಕೆಯಲ್ಲಿ
ಸುದ್ದಿಗೋಷ್ಠಿಯಲ್ಲಿ ಪ್ರಮುಖ ಬೇಡಿಕೆಗಳನ್ನು ಕೂಡ ಇಟ್ಟಿದ್ದಾರೆ. ಪ್ರಕರಣದಲ್ಲಿ ಆರೋಪಿಯಾಗಿದ್ದ ಸಂತೋಷ್ ರಾವ್ ಅವರಿಗೆ ಈಗಾಗಲೇ ಮೂರು ಬಾರಿ ಕ್ಲೀನ್ ಚಿಟ್ ನೀಡಿವೆ. ಅಣ್ಣಪ್ಪ ಸ್ವಾಮಿ ನೆಲೆಸಿರುವ ಪುಣ್ಯಕ್ಷೇತ್ರದಲ್ಲಿ ಇಂತಹ ಘಟನೆ ನಡೆದಿರುವುದು ಸನಾತನ ಧರ್ಮದ ದುರಾದೃಷ್ಟ. ಸಂತೋಷ್ ರಾವ್ ಅಪರಾಧಿಯಲ್ಲದಿದ್ದರೆ, ಈ ಕೃತ್ಯ ಎಸಗಿದ ನೈಜ ಪ್ರಭಾವಿ ಆರೋಪಿ ಯಾರು ಎಂಬುದನ್ನು ನೂತನ ಎಸ್‌ಐಟಿ ಶೋಧಿಸಿ ಸೌಜನ್ಯಳಿಗೆ ನ್ಯಾಯ ಒದಗಿಸಬೇಕು ಎಂದು ಅವರು ಆಗ್ರಹಿಸಿದರು.
ಹೊಸದಾಗಿ ರಚನೆಯಾಗುವ ಎಸ್‌ಐಟಿ ತನಿಖಾ ತಂಡವು ತನಿಖೆಯ ಯಾವುದೇ ಹಂತದಲ್ಲಿಯೂ ಸಾಕ್ಷಿಗಳಿಗೆ ಹಾಗೂ ಮಾಹಿತಿದಾರರಿಗೆ ಬೆದರಿಕೆ ಹಾಕದೇ ಅಥವಾ ಆಮಿಷ ಒಡ್ಡದೇ ನಿಷ್ಪಕ್ಷಪಾತವಾಗಿ ಕೆಲಸ ಮಾಡಬೇಕು. ತನಿಖೆಯಲ್ಲಿ ಲೋಪ ಕಂಡುಬಂದರೆ ಸುಪ್ರೀಂ ಕೋರ್ಟ್ ವಕೀಲರ ತಂಡ ತಕ್ಷಣವೇ ಗಮನಕ್ಕೆ ತರಲಿದೆ. ಪ್ರಕರಣದ ತನಿಖೆಯನ್ನು ದಾರಿ ತಪ್ಪಿಸಲು ಸಂಚು ರೂಪಿಸುವ ಶಕ್ತಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ರಾಜ್ಯ ಮಹಿಳಾ ಆಯೋಗವು ಎಸ್‌ಐಟಿ ವರದಿ ಆಧರಿಸಿ ತನಿಖೆ ಮುಂದುವರಿಸಲು ಕೋರಿದ್ದರೂ, ರಾಜ್ಯ ಸರ್ಕಾರ ಹಳೆಯ ಎಸ್‌ಐಟಿ ವರದಿಯನ್ನು ಸಾರ್ವಜನಿಕರಿಂದ ಮುಚ್ಚಿಟ್ಟು ತನಿಖೆ ಸ್ಥಗಿತಗೊಳಿಸಿದೆ. ಸರ್ಕಾರ ಪ್ರಭಾವಿಗಳನ್ನು ರಕ್ಷಿಸಲು ಯತ್ನಿಸುತ್ತಿದೆಯೇ ಎಂಬ ಸಂಶಯ ಸಾರ್ವಜನಿಕರಲ್ಲಿದ್ದು, ತಕ್ಷಣವೇ ವರದಿಯನ್ನು ಮಾಧ್ಯಮಗಳಿಗೆ ಬಹಿರಂಗಪಡಿಸಬೇಕು. ರಾಜ್ಯದ ಶಾಲಾ-ಕಾಲೇಜು ವಿದ್ಯಾರ್ಥಿನಿಯರು ಹಾಗೂ ಮಹಿಳೆಯರ ಸುರಕ್ಷತೆಗಾಗಿ ಸರ್ಕಾರ ತಕ್ಷಣವೇ ‘ಸೌಜನ್ಯ ಸಹಾಯವಾಣಿ’ (Helpline) ತೆರೆದು ಜನಸಾಮಾನ್ಯರನ್ನು ಕಾಮುಕರು ಹಾಗೂ ಸಮಾಜಘಾತುಕರಿಂದ ರಕ್ಷಿಸುವ ಭರವಸೆ ನೀಡಬೇಕು.
ಅಸ್ಥಿಪಂಜರ ಪತ್ತೆ ಹಾಗೂ ಸರ್ಕಾರದ ಮೌನವನ್ನು ಪ್ರಶ್ನಿಸಿದ ಗಿರೀಶ್ ಮಟ್ಟಣ್ಣವರ್
ಹೋರಾಟಗಾರ ಗಿರೀಶ್ ಮಟ್ಟಣ್ಣವರ್ ಮಾತನಾಡಿ, “ಈ ಹಿಂದೆ ತನಿಖೆ ನಡೆಸಿದ ಸಿಐಡಿ ಅಧಿಕಾರಿಗಳು ಸಾಕ್ಷಿಗಳಿಗೆ ಬೆದರಿಕೆಯೊಡ್ಡುತ್ತಿದ್ದರು. ನೂತನ ಎಸ್‌ಐಟಿ ಅಧಿಕಾರಿಗಳು ಅಂತಹ ಬೆದರಿಕೆಗೆ ಮುಂದಾದರೆ ಅಧಿಕಾರಿಗಳು ಅಮಾನತಾಗುವುದು ಖಚಿತ. ಬಂಗ್ಲೆಗುಡ್ಡೆಯಲ್ಲಿ ಲಭ್ಯವಾದ ಅಸ್ಥಿಪಂಜರಗಳು ಕ್ರೂರವಾಗಿ ಕೊಲೆಯಾದವರದ್ದು ಎಂದು ಎಫ್‌ಎಸ್‌ಎಲ್ ವರದಿ ತಿಳಿಸಿದೆ. ಆಸಿಡ್ ದಾಳಿಗೆ ಒಳಗಾದ ಮಹಿಳೆ ಕೊಲೆ ಹಾಗೂ ಶರಾವತಿ ಲಾಡ್ಜ್‌ನಲ್ಲಿ ಮಹಿಳೆಯ ಕೊಲೆ ಪ್ರಕರಣದ ಆರೋಪಿಗಳು ಇನ್ನೂ ನಾಪತ್ತೆಯಾಗಿದ್ದಾರೆ. ಈ ಎಲ್ಲ ಮಾಹಿತಿಗಳು ಎಸ್‌ಐಟಿ ಉಲ್ಲೇಖದಲ್ಲಿದ್ದರೂ ಸರ್ಕಾರ ಇದನ್ನು ಏಕ ಮುಚ್ಚಿಡುತ್ತಿದೆ?” ಎಂದು ಗಂಭೀರ ಆರೋಪ ಮಾಡಿದರು. ಇನ್ನು ಸೌಜನ್ಯ ಕೊಲೆ ಪ್ರಕರಣದ ನೂತನ ಎಸ್‌ಐಟಿ (SIT) ತನಿಖಾಧಿಕಾರಿಯಾಗಿ ನೇಮಕಗೊಂಡಿರುವ ಶಶಿಕುಮಾರ್ ಅವರ ವಿರುದ್ಧ ಸೌಜನ್ಯ ಹೋರಾಟಗಾರ ಗಿರೀಶ್ ಮಟ್ಟಣ್ಣವರ್ ಗಂಭೀರ ಆರೋಪಗಳನ್ನು ಮಾಡಿದ್ದು, “ಇವರ ಮೇಲೆ ಈಗಾಗಲೇ ಅನೇಕ ಆರೋಪಗಳಿದ್ದು, ಅವರ ವಿರುದ್ಧವೇ ತನಿಖೆ ನಡೆಸಲು ಮತ್ತೊಂದು ಎಸ್‌ಐಟಿ ರಚಿಸುವ ಅಗತ್ಯವಿದೆ” ಎಂದು ಕಿಡಿಕಾರಿದ್ದಾರೆ.
ಧರ್ಮಸ್ಥಳ ವ್ಯಾಪ್ತಿಯಲ್ಲಿ ಯಾವುದೇ ಯುಡಿಆರ್ (ಅಸಹಜ ಸಾವು ಪ್ರಕರಣ) ದಾಖಲಾಗದೇ ಸಾವಿರಕ್ಕೂ ಹೆಚ್ಚು ಮೃತದೇಹಗಳನ್ನು ಹೂತುಹಾಕಲಾಗಿದೆ. ಈ ಕುರಿತು ಸೂಕ್ತ ತನಿಖೆಯಾಗಬೇಕು. ಎಸ್‌ಐಟಿ ತನಿಖಾ ತಂಡ ರಚನೆಯಾದ ನಂತರ ಕೇವಲ ಧರ್ಮಸ್ಥಳ ಗ್ರಾಮ ಒಂದರಲ್ಲೇ ಬರೋಬ್ಬರಿ 76 ನಾಪತ್ತೆ (Missing) ಪ್ರಕರಣಗಳು ದಾಖಲಾಗಿವೆ. ಇಷ್ಟೊಂದು ಸಂಖ್ಯೆಯಲ್ಲಿದ್ದ ಜನರೆಲ್ಲಾ ಎಲ್ಲಿ ಹೋದರು? ಎಂಬುದು ಕೂಡ ತನಿಖೆಯಾಗಬೇಕು ಎಂದು ಹೇಳಿದರು.
ಇದನ್ನೂ ಓದಿ: ಸೌಜನ್ಯ ಕೊಲೆ ಕೇಸ್: 3 ತಿಂಗಳಲ್ಲಿ ಹೊಸ ತಂಡದಿಂದ ಸ್ವತಂತ್ರ ತನಿಖೆಗೆ ಸುಪ್ರೀಂ ಆದೇಶ
ಅಕ್ಟೋಬರ್ 10: ‘ನ್ಯಾಯದ ನಡಿಗೆ’ ಮೆರವಣಿಗೆ:
ಸೌಜನ್ಯಳ 14ನೇ ವರ್ಷದ ಪುಣ್ಯಸ್ಮರಣೆಯ ದಿನವಾದ ಅಕ್ಟೋಬರ್ 10 ರಂದು ಉಜಿರೆಯಿಂದ ಬೆಳ್ತಂಗಡಿಯವರೆಗೆ ‘ನ್ಯಾಯದ ನಡಿಗೆ’ ಬೃಹತ್ ಮೆರವಣಿಗೆ ನಡೆಯಲಿದೆ. ಈ ಸಮಾವೇಶಕ್ಕೆ ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್‌ನ ಹಿರಿಯ ನ್ಯಾಯವಾದಿಗಳ ತಂಡ ಆಗಮಿಸಲಿದೆ. ಈ ಅಭಿನಂದನಾ ಸಭೆಗೆ ಮತ್ತು ಮೆರವಣಿಗೆಯ ಯಶಸ್ಸಿಗೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್, ಜಿಲ್ಲಾ ಆಡಳಿತ ಹಾಗೂ ಮಾಧ್ಯಮ ಮಿತ್ರರು ಪೂರ್ಣ ಸಹಕಾರ ನೀಡಬೇಕಾಗಿ ಸಂತ್ರಸ್ತೆ ಸೌಜನ್ಯ ತಾಯಿ ಕುಸುಮಾವತಿ ಚಂದಪ್ಪಗೌಡ, ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಗಿರೀಶ್ ಮಟ್ಟಣ್ಣವರ್ ಮನವಿ ಮಾಡಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

