ಬೆಂಗಳೂರು: ವಿಜ್ಞಾನ ಪ್ರಯೋಗದ ಭಾಗವಾಗಿ ಕೃತಕ ಕೊಳದಲ್ಲಿ ಸೋಡಿಯಂ ಬಳಸಿ ಸ್ಫೋಟ ಉಂಟುಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಯೂಟ್ಯೂಬರ್ ಎನ್.ಎಂ. ಪ್ರತಾಪ್ (ಡ್ರೋನ್ ಪ್ರತಾಪ್) ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ . ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಪೀಠವು ಈ ಆದೇಶವನ್ನು ನೀಡಿದ್ದು, “ಈ ಪ್ರಯೋಗವು 10ನೇ ತರಗತಿಯ NCERT ಪಠ್ಯಕ್ರಮದ ಭಾಗವಾಗಿದೆ. ಅರ್ಜಿದಾರರು ಶೈಕ್ಷಣಿಕ ಉದ್ದೇಶಕ್ಕಾಗಿ ಈ ವೀಡಿಯೊವನ್ನು ಮಾಡಿದಂತೆ ಕಂಡುಬರುತ್ತಿದೆ” ಎಂದು ಅಭಿಪ್ರಾಯಪಟ್ಟಿದೆ. ಪ್ರತಾಪ್ ಅವರಿಗೆ ಯಾವುದೇ ದುರುದ್ದೇಶ ಇರಲಿಲ್ಲ. ಇದು ಕೇವಲ ಶೈಕ್ಷಣಿಕ ಉದ್ದೇಶದ ಕಾರ್ಯವಾಗಿದ್ದರಿಂದ, ಸ್ಫೋಟಕ ವಸ್ತುಗಳ ಕಾಯ್ದೆ ಸೇರಿದಂತೆ ಕ್ರಿಮಿನಲ್ ವಿಚಾರಣೆಗೆ ಒಳಪಡಿಸುವ ಅಗತ್ಯವಿಲ್ಲ ಎಂದು ಹೇಳಿದೆ. ಈ ಬಗ್ಗೆ ಡ್ರೋನ್ ಪ್ರತಾಪ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಕಣ್ಣೀರು ಹಾಕಿದ್ದಾರೆ.
ಅರ್ಜಿದಾರರು ಘಟನೆಯ ಸಾಕ್ಷ್ಯವನ್ನು ಮುಚ್ಚಿಡಲು ಯತ್ನಿಸಿಲ್ಲ, ಬದಲಿಗೆ ಸಾರ್ವಜನಿಕ ವೀಕ್ಷಣೆಗಾಗಿ ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ ಎಂದು ಕೋರ್ಟ್ ಗಮನಿಸಿತು. ಇ-ತ್ಯಾಜ್ಯದಿಂದ 600 ಕ್ಕೂ ಹೆಚ್ಚು ಡ್ರೋನ್‌ಗಳನ್ನು ತಯಾರಿಸಿರುವ ಪ್ರತಾಪ್, ರಾಸಾಯನಿಕ ಕ್ರಿಯೆಯನ್ನು ಸಾರ್ವಜನಿಕರಿಗೆ ತಿಳಿಸಿಕೊಡಲು ಈ ವೀಡಿಯೊ ಮಾಡಿದ್ದರು ಎಂಬ ಅಂಶವನ್ನು ನ್ಯಾಯಾಲಯ ಪರಿಗಣಿಸಿದೆ. “ಅರ್ಜಿದಾರರು ಪ್ರಯೋಗ ನಡೆಸಿದ ವಿಧಾನವನ್ನು ಈ ನ್ಯಾಯಾಲಯವು ಅನುಮೋದಿಸುವುದಿಲ್ಲವಾದರೂ, ಸ್ಫೋಟಕ ವಸ್ತುಗಳ ಕಾಯ್ದೆಯಡಿ ಪ್ರಕರಣ ದಾಖಲಿಸಲು ಅಗತ್ಯವಿರುವ ಯಾವುದೇ ದುರುದ್ದೇಶ ಇಲ್ಲಿ ಕಂಡುಬಂದಿಲ್ಲ” ಎಂದು ನ್ಯಾಯಪೀಠ ಹೇಳಿದೆ.
ಇಲ್ಲಿದೆ ನೋಡಿ ವಿಡಿಯೋ:
View this post on Instagram
ಪ್ರಕರಣದ ಹಿನ್ನೆಲೆ:
ಗೆಳೆಯನ ಖಾಸಗಿ ತೋಟದಲ್ಲಿದ್ದ ಕೃತಕ ಕೊಳಕ್ಕೆ 100 ಗ್ರಾಂ ಸೋಡಿಯಂ ಹಾಕಿ ಸ್ಫೋಟ ಉಂಟುಮಾಡಿದ್ದ ವೀಡಿಯೊವನ್ನು ಪ್ರತಾಪ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ವೀಡಿಯೊ ವೈರಲ್ ಆದ ನಂತರ, ಡಿಸೆಂಬರ್ 2024 ರಲ್ಲಿ ಪೊಲೀಸರು ಅವರನ್ನು ಬಂಧಿಸಿದ್ದರು. ಅವರ ವಿರುದ್ಧ ಸ್ಫೋಟಕ ವಸ್ತುಗಳ ಕಾಯ್ದೆ (1908) ಹಾಗೂ ಭಾರತೀಯ ನ್ಯಾಯ ಸಂಹಿತೆ (BNS, 2023) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ತದನಂತರ ಜಾಮೀನು ಪಡೆದಿದ್ದ ಪ್ರತಾಪ್, ವೀಡಿಯೊವನ್ನು ಡಿಲೀಟ್ ಮಾಡಿ, ಎಫ್‌ಐಆರ್ ರದ್ದುಗೊಳಿಸುವಂತೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಪ್ರತಾಪ್ ಪರ ವಕೀಲರಾದ ಶ್ವೇತಾ ಚಿದಾನಂದ ಹಟ್ಟರಕಿ ವಾದ ಮಂಡಿಸಿದ್ದರು. ಪ್ರಕರಣವನ್ನು ವಜಾಗೊಳಿಸಿದ ಹೈಕೋರ್ಟ್, ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದೆ.
ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

